Advertisement

ಎನ್ನಾರ್ಬಿಸಿ ಮುಖ್ಯ ನಾಲೆಗೆ ಆಧುನೀಕರಣ ಭಾಗ್ಯ

12:05 PM Feb 09, 2020 | Naveen |

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕಾಮಗಾರಿಗೆ ಸಿದ್ಧತೆ ನಡೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿರುವ ಬಸವಸಾಗರ ಜಲಾಶಯದ ನಾರಾಯಣಪುರ ಬಲದಂಡೆ ನಾಲೆಯನ್ನು ಕೊನೆಗೂ ಆಧುನೀಕರಣ ಮಾಡಲು ಸರ್ಕಾರ ಮುಂದಾಗಿದೆ. ಮುಖ್ಯ ನಾಲೆ 0ದಿಂದ 95 ಕಿ.ಮೀ. ವರೆಗೆ ಮುಖ್ಯ ನಾಲೆಯ ಆಧುನೀಕರಣಕ್ಕೆ ಒಟ್ಟು 850 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಡಿ.ವೈ. ಉಪ್ಪಾರ ಕಂಪನಿಯವರು ಗುತ್ತಿಗೆ ಪಡೆದಿದ್ದಾರೆ. ಆಧುನೀಕರಣ ಕಾಮಗಾರಿ ಅವಧಿ ಒಂದು ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ.

ವಾರಾಬಂದಿ ಸಮಯದಲ್ಲಿ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮುಖ್ಯನಾಲೆ ಎರಡೂ ಬದಿಯಲ್ಲಿ ಸಿಮೆಂಟ್‌, ಕಾಂಕ್ರಿಟ್‌ ಹಾಸು ಹಾಕಲಾಗುತ್ತದೆ. ಇದಕ್ಕಾಗಿ ನಾಲೆಯ ಎರಡು ಬದಿ ವೀಕ್ಷಣಾ ರಸ್ತೆಯನ್ನು ಸ್ವಚ್ಛಗೊಳಿಸಿ ವಾಹನಗಳ ಓಡಾಟಕ್ಕೆ ತೊಂದರೆ ಆಗದಂತೆ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಇದರ ಜೊತೆಗೆ ಮುಖ್ಯನಾಲೆ ಎರಡೂ ಬದಿಯಲ್ಲಿ ಕಿತ್ತು ಹೋದ ನಾಲೆ ಭಾಗವನ್ನು ಮರಂ ಹಾಕಿ ಸಮತಟ್ಟು ಮಾಡಲಾಗುತ್ತದೆ.

ಈಗಾಗಲೇ ಮುಖ್ಯನಾಲೆಯ ಎರಡೂ ಬದಿಯಲ್ಲಿ ಬೆಳೆದ ಜಾಲಿಮರಗಳು ಸೇರಿದಂತೆ ವೀಕ್ಷಣಾ ರಸ್ತೆಯ ತಗ್ಗು-ದಿನ್ನೆಗಳು ಮುಚ್ಚಿ ನಂತರ ನಾಲೆಯ ಎರಡೂ ಬದಿಯನ್ನು ಮರಂ ಹಾಕಿ ಸಮತಟ್ಟು ಮಾಡಿದ ಬಳಿಕ ಸೀಮೆಂಟ್‌, ಕಾಂಕ್ರಿಟ್‌ ಹಾಕಲಾಗುತ್ತದೆ. ಇದರ ಜೊತೆಗೆ ಸಿಡಿ, ನಾಲೆಗೆ ಸೇರುವ ಸಣ್ಣ-ಪುಟ್ಟ ಹಳ್ಳಕೊಳ್ಳಗಳು ಹರಿಯುವ ದಿಕ್ಕು ಬದಲಿಸಿವೆ. ಇದರ ಜೊತೆಗೆ ಅನೇಕ ಕಡೆ ಮುಖ್ಯನಾಲೆಗೆ ಹಳ್ಳದ ನೀರು ಸೇರುತ್ತಿದೆ. ಈ ಬಗ್ಗೆ ಸೂಕ್ತ ನಿಗಾ ವಹಿಸಬೇಕಿದೆ.

ಮುಖ್ಯ ನಾಲೆ ನಿರ್ಮಾಣದ ವೇಳೆ ಎರಡೂ ಬದಿಯಲ್ಲಿ ಹಾಕಲಾಗಿರುವ ಸಿಮೆಂಟ್‌, ಕಾಂಕ್ರಿಂಟ್‌ ಸಂಪೂರ್ಣ ಕಿತ್ತು ಹೋಗಿದೆ. ಅದನ್ನು ಪೂರ್ಣವಾಗಿ ತೆಗೆದು ಹಾಕಿ ಮತ್ತೊಮ್ಮೆ ಮರಂ ಹಾಕಿ ನಿರ್ಮಿಸಬೇಕಿದೆ. ಇನ್ನು ಕಿ.ಮೀ. 1, 13, 52, ಸೇರಿದಂತೆ ಅನೇಕ ಕಡೆ ಬ್ಯಾಂಕ್‌ ವರ್ಕ್‌ ಇದೆ. ಈ ಪ್ರದೇಶಗಳಲ್ಲಿ ನಾಲೆ ಒಡೆದ ಘಟನೆಗಳು ನಡೆದಿವೆ. ಆಧುನೀಕರಣದ ವೇಳೆ ಸೂಕ್ತ ನಿಗಾವಹಿಸಿ ಕಾಮಗಾರಿ ಕೈಗೊಳ್ಳಬೇಕಿದೆ.

Advertisement

ಮುಖ್ಯನಾಲೆ ಆಧುನೀಕರಣಗೊಳ್ಳುವುದರಿಂದ ನಾಲೆಯಲ್ಲಿನ ನೀರು ಸೋರಿಕೆ ತಡೆಯಾಗುವ ಜೊತಗೆ ಕೊನೆ ಭಾಗದ ರೈತರಿಗೂ ನೀರು ತಲುಪುವ ನಿರೀಕ್ಷೆ ಇದೆ. ಆಧುನೀಕರಣ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಿ ಅಚ್ಚುಕಟ್ಟು ಪ್ರದೇಶ ರೈತರಿಗೆ ನೀರಿನ ತೊಂದರೆ ಆಗದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಸೂಕ್ತ ನಿಗಾ ವಹಿಸಬೇಕಿದೆ ಎನ್ನುತ್ತಾರೆ ರೈತರು.

ನಾ ರಾಯಣಪುರ ಬಲದಂಡೆ ನಾಲೆ ಈ ಭಾಗದ ರೈತರ ಜೀವನಾಡಿಯಾಗಿದೆ. ನಾಲೆ ನೀರಿನಿಂದ ಲಕ್ಷಾಂತರ ರೈತರ ಬದುಕು ಹಸಿರಾಗಿದೆ. ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಬೇಕು. ತೇಪೆ ಹಚ್ಚುವ ಕಾಮಗಾರಿ ಮಾಡಿದರೆ ರೈತ ಸಂಘ ಕಾಮಗಾರಿ ತಡೆಯಲಿದೆ.
ಅಮರಣ್ಣ ಗುಡಿಹಾಳ,
ರೈತ ಸಂಘದ ಮುಖಂಡ ಲಿಂಗಸುಗೂರು

ನಾರಾಯಣಪುರ ಬಲದಂಡೆ ಮುಖ್ಯ ನಾಲೆ 0 ದಿಂದ 95 ಕಿ.ಮೀ. ವರೆಗೆ ಆಧುನಿಕರಣ ಮಾಡಲಾಗುತ್ತದೆ. ಒಟ್ಟು 850 ಕೋಟಿ ವೆಚ್ಚದ ಆಧುನೀಕರಣ ಕಾಮಗಾರಿಗೆ ಈಗಾಗಲೆ ಮೊದಲ ಹಂತದ ಪೂರ್ವ ಸಿದ್ಧತೆ ಕಾಮಗಾರಿಗಳು ಆರಂಭಗೊಂಡಿವೆ.
ಭರತ ,
ಜೆಇ,
ಕೃಷ್ಣಾ ಭಾಗ್ಯ ಜಲ ನಿಗಮ ರೋಡಲಬಂಡಾ (ಯುಕೆಪಿ)

„ಶಿವರಾಜ ಕೆಂಭಾವಿ 

Advertisement

Udayavani is now on Telegram. Click here to join our channel and stay updated with the latest news.

Next