Advertisement

ತಳವೂರಿದ ವಿಜ್ಞಾನ ವಿಭಾಗ ಫಲಿತಾಂಶ

03:06 PM Apr 25, 2019 | Team Udayavani |

ಲಿಂಗಸುಗೂರು: ಪಟ್ಟಣದ ಪ್ರಥಮ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಲ್ಲಿನ ಸರ್ಕಾರಿ ಪ.ಪೂ. ಕಾಲೇಜು ಇಂದು ಉಪನ್ಯಾಸಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶದ ಜೊತೆಗೆ ಫಲಿತಾಂಶದಲ್ಲಿ ಕುಸಿತ ಕಂಡು ಜೀವ ಕಳೆದುಕೊಳ್ಳುತ್ತಿದೆ.

Advertisement

ಪಟ್ಟಣದಲ್ಲಿ 1981ರಲ್ಲಿ ಪ್ರಾರಂಭಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ಸುಮಾರು 618ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪ್ರವೇಶ ಪಡೆದಿದ್ದರು. ಕಾಲೇಜಿನಲ್ಲಿ ಸಕಲ ಸೌಲಭ್ಯಗಳು ಇವೆ. ವಿಶಾಲವಾದ ಮೈದಾನ, ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ ಅಗತ್ಯ ಸೌಲಭ್ಯಗಳಿವೆ. ಆದರೆ ಪಾಠ ಪ್ರವಚನ ಮಾಡಲು ಉಪನ್ಯಾಸಕರೇ ಇಲ್ಲ. ಬಹುತೇಕ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸುವಂತಾಗಿದೆ.

ಡಾಕ್ಟರ್‌, ಇಂಜಿನೀಯರ್‌ ಹಾಗೂ ಉನ್ನತ ಅಧಿಕಾರಿ ಆಗಬೇಕೆಂದು ಕನಸು ಕಟ್ಟಿಕೊಂಡು ಕಾಲೇಜಿಗೆ ಪ್ರವೇಶ ಪಡೆದರೆ ಇಲ್ಲಿ ವಿಜ್ಞಾನದ ಮೂಲ ವಿಷಯಗಳಾದ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ವಿಜ್ಞಾನ ವಿಭಾಗದ ಫಲಿತಾಂಶ ಕುಸಿತ ಕಾಣುತ್ತಿದೆ.

ಹುದ್ದೆಗಳು ಖಾಲಿ: ಕಾಲೇಜಿನಲ್ಲಿ ಬೋಧಕ ಹಾಗೂ ಬೋಧಕೇತರ ಸೇರಿ ಒಟ್ಟು 22 ಹುದ್ದೆಗಳು ಮಂಜೂರಾಗಿವೆ. ಮಂಜೂರಾದ 22 ಹುದ್ದೆಗಳಲ್ಲಿ ಇತಿಹಾಸ-2, ಕನ್ನಡ-2 ಇಂಗ್ಲೀಷ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ ಸೇರಿ ಎಂಟು ಜನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಇದ್ದಾರೆ. ಇನ್ನೂ 10 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 8 ಜನ ಉಪನ್ಯಾಸಕರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇವೆ. ವಾಣಿಜ್ಯಶಾಸ್ತ್ರ ಎರಡು ಹುದ್ದೆ, ಅರ್ಥಶಾಸ್ತ್ರ ಎರಡು ಹುದ್ದೆ, ರಸಾಯನಶಾಸ್ತ್ರ, ಇಂಗ್ಲೀಷ್‌, ಭೌತಶಾಸ್ತ್ರ, ಜೀವಶಾಸ್ತ್ರ ವಿಷಯಗಳ ತಲಾ ಒಬ್ಬ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಎಸ್‌ಡಿಎ ಹಾಗೂ ಗ್ರಂಥಪಾಲಕ ಹುದ್ದೆ ಖಾಲಿ ಇರುವುದರಿಂದ ಈ ಎರಡು ಹುದ್ದೆಗಳನ್ನು ಉಪನ್ಯಾಸಕರೇ ನಿಭಾಯಿಸಬೇಕಿದೆ. ಪ್ರಾಚಾರ್ಯ ಹುದ್ದೆ ಸಹ ಖಾಲಿ ಇದ್ದು, ಇತಿಹಾಸ ಉಪನ್ಯಾಸಕರಿಗೆ ಪ್ರಭಾರ ವಹಿಸಲಾಗಿದೆ. ತರಗತಿ ಹಾಗೂ ಆಡಳಿತ ವ್ಯವಸ್ಥೆ ನೋಡಿಕೊಂಡು ಹೋಗಬೇಕಾಗಿದೆ.

ಅತಿಥಿ ಉಪನ್ಯಾಸಕರ ನೇಮಕ: ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಕೊರತೆ ನೀಗಿಸಲು ಸರ್ಕಾರ ಕಾಟಾಚಾರಕ್ಕಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ನೀಡುತ್ತಿದೆ. ಅದು ಎಂಟು ತಿಂಗಳ ಅವಧಿಗೆ ಮಾತ್ರ. ಇನ್ನುಳಿದ ಅವಧಿಯಲ್ಲಿ ವಿದ್ಯಾರ್ಥಿಗಳ ಗತಿ ಏನೆಂಬುದು ತಿಳಿಯದಾಗಿದೆ. ವಿಜ್ಞಾನ ವಿಭಾಗದಲ್ಲಿ ಬಹುತೇಕ ವಿಷಯಗಳ ಉಪನ್ಯಾಸಕರ ಕೊರತೆೆಯಿಂದಾಗಿ ವೈದ್ಯಕೀಯ, ಇಂಜಿನಿಯರಿಂಗ್‌ ಸೇರಿ ಇನ್ನಿತರ ಕನಸು ಕಂಡು ವಿಜ್ಞಾನ ವಿಭಾಗ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರವೇ ಕೊಡಲಿ ಪೆಟ್ಟು ನೀಡುತ್ತಿದೆ.

Advertisement

ಉಪನ್ಯಾಸಕರ ಹುದ್ದೆ ತುಂಬುವಲ್ಲಿ ಸರ್ಕಾರ ವಿಳಂಬ ಮಾಡುವ ಮೂಲಕ ಪರೋಕ್ಷವಾಗಿ ಖಾಸಗಿ ಕಾಲೇಜುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರಿ ಕಾಲೇಜು ನೆಚ್ಚಿಕೊಂಡು ಬಂದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗದೇ ಸರ್ಕಾರವೇ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ನೀಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಯಾವ ವರ್ಷ ಎಷ್ಟು ಫಲಿತಾಂಶ
ಲಿಂಗಸುಗೂರು ತಾಲೂಕಿಗೆ ಪ್ರಥಮ ವಿಜ್ಞಾನ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಲೇಜಿನಲ್ಲಿ ಈಗ ವಿಜ್ಞಾನ ವಿಭಾಗ ಜೀವ ಕಳೆದುಕೊಳ್ಳುತ್ತಿದೆ. ವಿಜ್ಞಾನ ವಿಭಾಗದಲ್ಲಿ ಬಹುತೇಕ ಉಪನ್ಯಾಸಕರ ಹುದ್ದೆ ಖಾಲಿ ಇರುವುದರಿಂದ ಕಳೆದ ವರ್ಷ ದ್ವಿತೀಯ ಪಿಯುಸಿ ಪ್ರವೇಶ ಪಡೆದಿದ್ದ 19 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಪಾಸ್‌ ಆಗಿದ್ದ. 2018-19ನೇ 17 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಪಾಸಾಗಿದ್ದಾನೆ. ಇನ್ನು ಕಲಾ ವಿಭಾಗದಲ್ಲಿ ಕಳೆದ ವರ್ಷ ಶೇ.61.33 ಫಲಿತಾಂಶ ಬಂದಿತ್ತು. ಈ ವರ್ಷ ಶೇ.55ಕ್ಕೆ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿಯುತ್ತಿದೆ. ಕಾಲೇಜಿನ ಒಟ್ಟಾರೆ ಫಲಿತಾಂಶ 2014-15ರಲ್ಲಿ ಶೇ.57.04, 2015-16ನೇ ಸಾಲಿನಲ್ಲಿ ಶೇ.63.46, 2016-17ನೇ ಸಾಲಿನಲ್ಲಿ ಶೇ. 59.06, 2017-18ನೇ ಸಾಲಿನಲ್ಲಿ ಶೇ. 61.33, 2018-19ನೇ ಸಾಲಿನಲ್ಲಿ ಶೇ.55.39 ಫಲಿತಾಂಶ ಕುಸಿದಿದೆ. ಈ ಪೈಕಿ ಕಲಾ ವಿಭಾಗದಲ್ಲೇ ವಿದ್ಯಾರ್ಥಿಗಳು ಹೆಚ್ಚು ಪಾಸಾಗಿರುವುದು ಗಮನಾರ್ಹ.

ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರ ಹುದ್ದೆಗಳು ಹೆಚ್ಚು ಖಾಲಿ ಇರುವುದರಿಂದ ಈ ಬಾರಿ ಫಲಿತಾಂಶ ಕುಸಿದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
•ಮುರುಘೇಂದ್ರಪ್ಪ, ಅಧ್ಯಕ್ಷರು,
ಪ್ರಭಾರ ಪ್ರಾಂಶುಪಾಲರು,
ಸರ್ಕಾರಿ ಪ.ಪೂ. ಕಾಲೇಜು ಲಿಂಗಸುಗೂರು.

ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರು ವರ್ಗಾವಣೆಗೊಂಡಿದ್ದಾರೆ. ಅತಿಥಿ ಉಪನ್ಯಾಸಕರ ಮೇಲೆಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಫಲಿತಾಂಶ ಕಡಿಮೆ ಆಗಿರುವ ಬಗ್ಗೆ ಮಾಹಿತಿ ಇದೆ. ವಿಜ್ಞಾನ ವಿಷಯ ಕಠಿಣವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ವರ್ಷ ವಿಶೇಷ ಕಾಳಜಿ ವಹಿಸಿ ಸಮಸ್ಯೆ ಇತ್ಯರ್ಥಕ್ಕೆ ಒತ್ತು ಕೊಡಲಾಗುವುದು.
•ಸಿ.ಟಿ.ಕಲ್ಲಯ್ಯ,
ಡಿಡಿಪಿಯು ರಾಯಚೂರು

•ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next