ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ 1ನೇ ವಾರ್ಡ್ ದಲಿತ ಕಾಲೋನಿಯಲ್ಲಿ ಮೂಲ ಸೌಕರ್ಯ ಇಲ್ಲದೆ ಜನ ಪರದಾಡುವಂತಾಗಿದೆ.
ಕರಡಕಲ್ ಗ್ರಾಮದ ದಲಿತ ಕಾಲೋನಿಯಲ್ಲಿ ದಲಿತರ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಈ ಕಾಲೋನಿ ನೋಡಿದರೆ ಯೋಜನೆಗಳು ಎತ್ತ ಸಾಗಿವೆ ಎಂಬುದು ತಿಳಿಯದಾಗಿದೆ.
ಎಲ್ಲಿ ನೋಡಿದಲ್ಲಿ ಕೊಳಚೆ: ದಲಿತ ಕೇರಿಯಲ್ಲಿ ಎಲ್ಲಿ ನೋಡಿದರೂ ಕೊಳಚೆ. ಇದರ ನಡುವೆಯೇ ಜನ ನರಕಯಾತನೆ ಅನುಭವಿಸುತ್ತ ಜೀವನ ದೂಡಬೇಕಿದೆ. ದಲಿತರ ಕಾಲೋನಿಯಲ್ಲಿ ರಸ್ತೆ ಇಲ್ಲ, ಚರಂಡಿಯಂತೂ ಇಲ್ಲವೇ ಇಲ್ಲ. ಹೀಗಾಗಿ ರಸ್ತೆಯಲ್ಲೇ ಕೊಳಚೆ ನೀರು ನಿಲ್ಲುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಬೀದಿ ದೀಪಗಳು ಒಂದೆಡೆ ಇದ್ದರೆ ಮತ್ತೂಂದೆಡೆ ಕತ್ತಲೆ ಇದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ವಾಸಿಸುವ ಪ್ರದೇಶದ ಅಭಿವೃದ್ಧಿಗಾಗಿ ಪುರಸಭೆಯಲ್ಲಿ ಪ್ರತ್ಯೇಕ ಅನುದಾನವಿದ್ದರೂ ಸಹ ಕರಡಕಲ್ ದಲಿತ ಕೇರಿಗೆ ನಯಾಪೈಸೆ ಬಂದಿಲ್ಲ. ಅಂಗನವಾಡಿ ಕಟ್ಟಡ ನಿರ್ಮಿಸಿದ ಎರಡೇ ವರ್ಷದಲ್ಲಿ ಸೋರುತ್ತಿದೆ. ಕಟ್ಟಡಕ್ಕೆ ಕಾಂಪೌಂಡ್ ಇಲ್ಲದ್ದರಿಂದ ಹೊರಗಡೆ ಗಲೀಜಿನ ಪರಿಸರ ಇದೆ. ಸರಕಾರ ಮನೆ ಮನೆಗೆ ಶೌಚಗೃಹ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿದೆ. ಆದರೆ ಪುರಸಭೆ ಇಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಹೀಗಾಗಿ ಇಲ್ಲಿನ ಜಯ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ದಲಿತ ಕೇರಿ ಎಂದರೆ ಎಲ್ಲರಿಗೂ ತಾತ್ಸಾರ. ಚುನಾವಣೆ ಬಂದಾಗ ಮಾತ್ರ ನಾವು ಬೇಕು, ಗೆದ್ದ ನಂತರ ನಾವು ಬೇಡ. ಬೀದಿ ದೀಪ, ಚರಂಡಿ ಮೂಲ ಸೌಕರ್ಯಕ್ಕಾಗಿ ಹೋರಾಟ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ದಲಿತ ಕಾಲೋನಿಗೆ ಸೌಲಭ್ಯ ಕಲ್ಪಿಸಬೇಕೆಂದು ದಸಂಸ ಮುಖಂಡ ಮೋಹನ ಗೋಸ್ಲೆ ಆಗ್ರಹಿಸಿದ್ದಾರೆ.