ಲಿಂಗಸುಗೂರು: ಒಂಬತ್ತನೇ ಶತಮಾನದಲ್ಲಿ ನಿರ್ಮಿಸಿದ್ದು ಎನ್ನಲಾದ ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಜಡೆಶಂಕರಲಿಂಗ ದೇವಸ್ಥಾನದ ಅಭಿವೃದ್ಧಿ ಕೆಲಸ ಮಂದಗತಿಯಲ್ಲಿ ಸಾಗಿದೆ.
ಬಸವಸಾಗರ ಜಲಾಶಯದ ಹಿನ್ನೀರಿನ ಹೊಡೆತಕ್ಕೆ ನಲುಗಿರುವ ನವಲಿ ಜಡೆಶಂಕರಲಿಂಗ ದೇವಸ್ಥಾನವನ್ನು ಚಾಲುಕ್ಯ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಕೆಲ ಶಾಸನಗಳ ಮೂಲಕ ಗತ ವೈಭವದ ಇತಿಹಾಸ ಸಾರಿ ಹೇಳುತ್ತಿದೆ. ಕರಡಿಕಲ್ ಕದಂಬ ಅರಸನಾದ ನಾಗವರ್ಮ ಕ್ರಿಶ 1066ರಲ್ಲಿ ಜಡೆಶಂಕರಲಿಂಗ ದೇವಸ್ಥಾನಕ್ಕೆ ದತ್ತಿ ದಾನ ನೀಡಿದ್ದಾನೆ ಹಾಗೂ ಕ್ರಿಶ 1077ರಲ್ಲಿ ಭೂತರಸ ಗೋಪುರಕ್ಕೆ ಬಂಗಾರದ ಕಳಸ ನೀಡಿದ್ದಾನೆ. ಹಲವು ಶಾಸನಗಳಲ್ಲಿ ಉಲ್ಲೇಖವಾಗಿದೆ ಎಂಬುದು ಸಂಶೋಧಕರ ಸಂಶೋಧನೆಯಿಂದ ತಿಳಿದು ಬಂದಿದೆ.
ಪಕ್ಕದ ಹುನಗುಂದ ತಾಲೂಕು ಕಂದಗಲ್ಲ ಗ್ರಾಮದ ಬ್ರಾಹ್ಮಣ ಸಮುದಾಯದ ಗೋವಿಂದಭಟ್ರು ಜಡೆಶಂಕರಲಿಂಗ ದೇವರ ದರ್ಶನ ಪಡೆದು ಪ್ರಭಾವಿತರಾಗಿ ಇಲ್ಲಿಯೇ ನೆಲಸಿ ಶೈವ ದೀಕ್ಷೆ ಪಡೆದು ಶಂಕರದಾಸೀಮಯ್ಯ ಎಂಬ ಹೆಸರನಿಂದ ಖ್ಯಾತಿಯಾಗಿದ್ದು, ಇವರು ಪೂರ್ವ ವಚನಕಾರರಾಗಿದ್ದು ಅನೇಕ ವಚನ ರಚಿಸಿ ನವಲಿ ಗ್ರಾಮವನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರೆ ಎಂದು ಇತಿಹಾಸ ಮೂಲಕ ತಿಳಿದು ಬರುತ್ತದೆ.
ಗರ್ಭಗುಡಿ ಮಧ್ಯದಲ್ಲಿ ದೊಡ್ಡ ಪೀಠದ ಮೇಲೆ ಶಿವಲಿಂಗ ಇದ್ದು, ತಲೆ ಮೇಲೆ ಕೂದಲುಗಳು ಇಳಿದಂತೆ ಕಾಣುವ ಇದನ್ನು ಜಡೆಶಂಕರಲಿಂಗ ಎಂದು ಕರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ಹಾಗೂ ಚೌಕಟ್ಟು ಸುಂದರ ಕುಸರಿ ಕಲೆಯಲ್ಲಿ ಕೆತ್ತನೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಸುಂದರ ಕೆತ್ತನೆ ಕಂಬ, ಬಂಡೆಗಳು ಹಾಗೂ ವಿಗ್ನವಾದ ಮೂರ್ತಿಗಳು, ಶಾಸನ ಕಲ್ಲು ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿವೆ. ಇದನ್ನು ರಕ್ಷಣೆ ಮಾಡಬೇಕಾದ ಇಲಾಖೆ ಗಾಢ ನಿದ್ರೆಯಲ್ಲಿ ಹೋಗಿದೆ. ದೇವಸ್ಥಾನಕ್ಕೆ ಸಮರ್ಪಕ ರಸ್ತೆಯಿಲ್ಲ. ಮಾರ್ಗಸೂಚಿ ಫಲಕವಂತಲೂ ಇಲ್ಲವೇ ಇಲ್ಲ. ವಿದ್ಯುತ್ ಸೇರಿದಂತೆ ಯಾವ ಸೌಲಭ್ಯ ಇಲ್ಲ. ಈ ದೇವಸ್ಥಾನ ಐತಿಹಾಸಿಕ ಹಿನ್ನಲೆಯಿದ್ದರೂ ಮುಳ್ಳಿನ ಗಿಡಗಳೇ ಸ್ವಾಗತಕಾರಾಗಿವೆ. ಬಸವಸಾಗರ ಜಲಾಶಯ ನಿರ್ಮಾಣ ವೇಳೆ ಮುಳಗಡೆಯಾಗಿದ್ದ ನವಲಿ ಗ್ರಾಮವನ್ನು ಸ್ಥಳಾಂತರಿಸಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಅಧಿಕ ಇದ್ದಾಗ ದೇವಸ್ಥಾನ ಮುಳಗಡೆಯಾಗುತ್ತಿತ್ತು. ಮತ್ತೇ ಬೇಸಿಗೆ ದಿನಗಳಲ್ಲಿ ದೇವಸ್ಥಾನ ಪ್ರತ್ಯಕ್ಷವಾಗುತ್ತಿತ್ತು. ಈ ಹಿಂದೆ ಜಗದೀಶ ಶೆಟ್ಟರ ಕಂದಾಯ ಸಚಿವರಾಗಿದ್ದ ವೇಳೆಯಲ್ಲಿ ಇಲ್ಲಿಗೆ ಬೇಟಿ ನೀಡಿ ದೇವಸ್ಥಾನದ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ 1.73 ಕೋಟಿ ರೂ. ಬಿಡುಗಡೆ ಮಾಡಿದ್ದರು. ಅದರಂತೆ ಕಾಮಗಾರಿ ಪೂರ್ಣಗೊಂಡರೂ ಜಲಾಶಯದ ಹಿನ್ನೀರು ಅನುಭವಿಸುತ್ತಿರುವ ತಾಪತ್ರಯ ನಿಲ್ಲದಾಗಿದೆ. ಬೇಸಿಗೆ ಸಮಯದಲ್ಲಿ ಮಾತ್ರ ದರ್ಶನ. ಇನ್ನುಳಿದ ದಿನಗಳಲ್ಲಿ ಇಲ್ಲಿ ಬರುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಂದಗತಿಯಲ್ಲಿ ಕಾಮಗಾರಿ: ದೇವಸ್ಥಾನಕ್ಕೆ ರಕ್ಷಣಾ ಗೋಡೆ ಇದ್ದರೂ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ತಡೆಗೋಡೆಯೊಳಗೆ ಬಸಿ ನೀರು ಸಂಗ್ರಹವಾಗುತ್ತಿದ್ದರಿಂದ ದೇವಸ್ಥಾನ ಜಲಾವೃತವಾಗುತ್ತದೆ. ಈ ಬಗ್ಗೆ ಕೂಡಲಸಂಗಮ ಪ್ರಾಧಿಕಾರದ ತಾಂತ್ರಿಕ ಸಲಹೆಗಾರರ ಸಲಹೆ ಪಡೆದು ಕೂಡಲಸಂಗಮ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸುವ ಉದ್ದೇಶದಿಂದ ಗರ್ಭಗುಡಿ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಗರ್ಭಗುಡಿ ಗೋಪುರ ನಿರ್ಮಾಣಕ್ಕಾಗಿ ಮೂಲ ಗರ್ಭಗುಡಿ ಗೋಪುರ ಕೆಡವಲಾಗಿದೆ. ಇದಲ್ಲದೆ 4.60 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆಯಾದರೂ ಅದು ಮಂದಗತಿಯಲ್ಲಿ ಸಾಗಿದ್ದರಿಂದ ಭಕ್ತ ಸಮೂಹಕ್ಕೆ ಬೇಸರ ತಂದಿದೆ.