ಲಿಂಗಸುಗೂರು: ಬಹುತೇಕ ತೊಗರಿ ಬೆಳೆದ ರೈತರಿಗೆ ಫಸಲು ಕೈ ಸೇರುವ ಸಮಯ. ಆದರೆ ಮಳೆರಾಯನ ಆಗಮನವಾಗುತ್ತಿದ್ದರಿಂದ ಕೈಗೆ ಬರುವ ಬೆಳೆ ಹಾಳಾಗುವ ಮುನ್ಸೂಚನೆಯಿಂದ ಅನ್ನದಾತನಿಗೆ ಆತಂಕ ಶುರುವಾಗಿದೆ. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಬಹುತೇಕ ಕಡೆ ಕಾಳು ಕಟ್ಟಿದೆ. ಆದರೂ ಸಂಜೆ ಹೊತ್ತಲ್ಲಿ ಕಾಡುವ ಬಿಲ್ಲಿ ಹುಳುಗಳ ಹಾವಳಿಯಿಂದ ರೈತರು ತಲೆಕೆಡಿಸಿಕೊಂಡಿದ್ದಾರೆ. ಇದರಿಂದ ರೈತರು ನಿರಂತರ ಕ್ರಿಮಿನಾಶಕ ಸಿಂಪಡಣೆ ಮಾಡಿ ಬೆಳೆ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಕೆಲವೆಡೆ ಅತಿಯಾದ ತೇವಾಂಶದಿಂದ ತೊಗರಿ ಒಣಗಿದೆ. ಉಳಿದಂತೆ ತೊಗರಿ ಬೆಳೆ ಉತ್ತಮವಾಗಿ ಬೆಳೆದಿವೆ. ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಜಮೀನಿನೊಳಗೆ ಹೋಗಲು ಹೆಣಗಬೇಕಿದ್ದು ಉತ್ತಮ ಇಳುವರಿ ನಿರೀಕ್ಷೆ ಇದೆ. ಇದರ ಮಧ್ಯ ಮಳೆಯೊಂದು ಕಾಡುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ನೆಲ ಕಚ್ಚುವ ಭೀತಿಯಲ್ಲಿ ಭತ್ತ: ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿದ ಭತ್ತ ಉತ್ತಮವಾಗಿ ಬೆಳೆದಿದೆ. ಕೆಲವೆಡೆ ಇದ್ದಲಿ ರೋಗ ಭತ್ತವನ್ನು ಕಪ್ಪಾಗುವಂತೆ ಮಾಡಿದ್ದು, ಬಹುತೇಕ ಕಡೆ ಭತ್ತ ಕಟಾವಿಗೆ ಬಂದಿದೆ. ಅಲ್ಲದೇ ಕೆಲವೆಡೆ ಕಟಾವು ಮಾಡಲಾಗುತ್ತಿದೆ. ಇದರ ಮಧ್ಯ ಮೋಡ ಕವಿದ ವಾತಾವರಣ ಆತಂಕ ಮೂಡಿಸಿದ್ದು, ಮಳೆ ಬಂದರೆ ಬೆಳೆದು ನಿಂತಿರುವ ಭತ್ತ ನೆಲ ಕಚ್ಚಲಿದೆ. ಅಲ್ಲದೇ ಮಳೆ ಹೊಡೆತಕ್ಕೆ ಭತ್ತದ ಕಾಳು ಉದುರಿ ಭೂಮಿಗೆ ಸೇರುವ ಭೀತಿ ಕೂಡ ರೈತರಿಗಿದೆ.
ಶೇಂಗಾಕ್ಕೆ ಹೆಚ್ಚಿದ ತೇವಾಂಶ: ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವುದರಿಂದ ಅನೇಕ ರೈತರು ಬೇಸಿಗೆ ಹಂಗಾಮಿಗೆ ಶೇಂಗಾ ಬಿತ್ತನೆ ಮಾಡಿದ್ದಾರೆ. ತೇವಾಂಶ ಹೆಚ್ಚಿರುವುದರಿಂದ ಶೇಂಗಾ ಬೆಳೆಯೂ ಕೂಡ ರೋಗಗಳಿಂದ ಹೊರತಾಗಿಲ್ಲ. ಮಳೆ ಬಂದರೆ ಬೇಸಿಗೆ ಹಂಗಾಮು ಶೇಂಗಾ ಸಂಕಷ್ಟಕ್ಕೆ ಸಿಲುಕಲಿದೆ ಎಂಬುದು ರೈತರು ಮಾತು.
ಜೋಳಕ್ಕೆ ಸೈನಿಕನ ಕಾಟ: ಜೋಳದ ಬೆಳೆ ಸೈನಿಕ ಹುಳು ಬಾಧೆಯಿಂದ ಜರ್ಝರಿತಗೊಂಡಿದೆ. ಹೊಸದಾಗಿ ಬಂದಿರುವ ಕ್ರಿಮಿಗಳಿಗೆ ಕೀಟನಾಶಕ ಸಿಂಪಡಣೆ ಮಾಡಿದರೂ ಹುಳು ಸಾಯುತ್ತಿಲ್ಲ. ಪರಿಣಾಮ ಬೆಳೆಯ ಮೇಲ್ಭಾಗದ ಸುಳಿಯಲ್ಲಿ ಅಡಗಿ ಕುಳಿತ ಸೈನಿಕ ಹುಳು ಬೆಳೆಯನ್ನು ತಿನ್ನುತ್ತಿದೆ. ಕೀಟಾಬಾಧೆ ನಿಯಂತ್ರಕ್ಕೆ ರೈತರು ಹೈರಾಣಾಗಿದ್ದಾರೆ. ಏಕೆಂದರೆ ಜೋಳದ ಬೆಳೆ ರೋಗದಿಂದ ಒಣಗಿದರೆ ಚಿಗುರಿ ಬೆಳೆಯುವುದಿಲ್ಲ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಕಟಾವು ಮಾಡಿ ಸಂಗ್ರಹಿಸಲಾಗಿದೆ. ಕೆಲವೆಡೆ ಹೊಟ್ಟೆಗಾಗಿ ಸಜ್ಜೆ ರಾಶಿ ಆರಂಭಿಸಿದ್ದಾರೆ. ಆದರೆ ಅನಿರೀಕ್ಷತ ಮಳೆ ಆಗಮನದ ಭೀತಿ ರೈತರನ್ನು ಕಾಡುತ್ತಿದೆ. ಮಳೆ ಬಂದರೆ ಸಜ್ಜೆ ಕಾಳಿನ ರಕ್ಷಣೆ ಒಂದೆಡೆಯಾದರೆ ದನ-ಕರುಗಳಿಗೆ ಆಸರೆಯಾಗುವ ಸಿಪ್ಪೆಯೂ ಹಾಳಾಗಲಿದೆ. ಮಳೆ ಉತ್ತಮವಾಗಿ ಸುರಿದ ಪರಿಣಾಮ ಬೆಳೆಗಳ ನಾನಾ ರೋಗ-ರುಜಿನು, ಕ್ರಿಮಿ-ಕೀಟಗಳ ಹಾವಳಿ ಮಧ್ಯೆಯೂ ಉತ್ತಮವಾಗಿವೆ. ಆದರೆ ಜೋಳ, ಶೇಂಗಾ ಬೆಳೆಯುವ ಹಂತದಲ್ಲಿವೆ.
ಸಜ್ಜೆ ರಾಶಿ ಮಾಡಲಾಗುತ್ತಿದೆ. ತೊಗರಿ ಕಾಳು ಕಟ್ಟಿವೆ. ಭತ್ತವು ಕಟಾವಿಗೆ ಬಂದಿದೆ. ಇಂತಹ ಸಮಯದಲ್ಲಿ ಮೋಡ ಕವಿದ ವಾತಾವರಣ ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಮೋಡ ಕವಿದ ವಾತಾವರಣ ಇನ್ನೂ ಎರಡು ದಿನಗಳವರೆಗೆ ಮುಂದುವರಿಯಲಿದೆ. ಇಂಥ ವಾತಾವರಣದಲ್ಲಿ ಕ್ರಿಮಿಕೀಟಗಳ ಉತ್ಪತ್ತಿ ಹೆಚ್ಚಾಗುವ ಲಕ್ಷಣಗಳಿವೆ. ಮಳೆ ಬಂದರೆ ಕಟಾವಿಗೆ ಬಂದಿರುವ ಭತ್ತ ನೆಲ ಕಚ್ಚಲಿದೆ. ಮಳೆ ಬರುವಿಕೆ ಲಕ್ಷಣಗಳು ಕಡಿಮೆ ಇವೆ.
ಮಹಾಂತೇಶ ಹವಾಲ್ದಾರ,
ಕೃಷಿ ನಿರ್ದೇಶಕರು, ಲಿಂಗಸುಗೂರು