ಲಿಂಗಸುಗೂರು: ಅಪಘಾತ, ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಡಲು ಪಟ್ಟಣದ ಪ್ರಮುಖ ಎರಡು ವೃತ್ತಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಇದ್ದೂ ಇಲ್ಲದಂತಾಗಿವೆ. ಪಟ್ಟಣದ ಗಡಿಯಾರ ವೃತ್ತ, ಹೊಸ ಬಸ್ ನಿಲ್ದಾಣ ವೃತ್ತಗಳಲ್ಲಿ ಒಟ್ಟು 8 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಗಡಿಯಾರ ವೃತ್ತಕ್ಕೆ ಅನ್ಯ ಊರು ಹಾಗೂ ಬಡಾವಣೆ ಸೇರಿದಂತೆ 8 ರಸ್ತೆಗಳು ಸೇರುತ್ತವೆ. ಅಲ್ಲದೇ ಪಟ್ಟಣದ ಪ್ರಮುಖ ವ್ಯಾಪಾರ, ವಹಿವಾಟು ನಡೆಯುವ ಹೃದಯ ಭಾಗವಾಗಿದೆ.
ಇನ್ನೂ ಹೊಸ್ ಬಸ್ ನಿಲ್ದಾಣದ ವೃತ್ತಕ್ಕೆ 4 ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಇಲ್ಲಿ 2 ರಾಷ್ಟ್ರೀಯ ಹೆದ್ದಾರಿ ಸೇರುತ್ತವೆ. ಅಲ್ಲದೇ ಪಟ್ಟಣಕ್ಕೆ ಎಲ್ಲ ಬಗೆ ವಾಹನಗಳು ಒಳ ಬರುವ ಮತ್ತು ಹೊರ ಹೋಗುವುದೇ ಇದೇ ವೃತ್ತದ ಮೂಲಕ. ಪ್ರಮುಖ ಬ್ಯಾಂಕುಗಳು ಇದೇ ವೃತ್ತದ ಸುತ್ತಮುತ್ತಲ ಇವೆ. ದುಷ್ಕೃತ್ಯಗಳ ಮೇಲೆ ನಿಗಾ ಇರಿಸಲು ಪೊಲೀಸ್ ಇಲಾಖೆ ಬೇಡಿಕೆಯಂತೆ ಪುರಸಭೆಯಿಂದ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾಗಳಿಗೆ ನಿರ್ವಹಣೆ ಸಹ ಇಲ್ಲ. ಹಾಗಾಗಿ ಅದರ ವೈಯರ್‌ಗಳು ಕಿತ್ತು ಹೋಗಿವೆ.
ಇತ್ತೀಚೆಗೆ ಪಟ್ಟಣದಲ್ಲಿ ಹಾಡಹಗಲೇ ವ್ಯಕ್ತಿಯೋಬ್ಬನನ್ನು ಕಾರಿನಲ್ಲಿ ಬಂದ ಆಗಂತಕರು ಅಪಹರಿಸಿಕೊಂಡು ಹೋಗಿದ್ದರು. ಆದರೆ ಖಾಸಗಿ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು. ನಂತರ ಪೊಲೀಸರು ಪ್ರಕರಣವನ್ನು 24 ಗಂಟೆಯಲ್ಲಿಯೇ ಬೇಧಿಸಿದ್ದರು. ಆದರೆ ಈ ವೇಳೆ ವೃತ್ತದಲ್ಲಿ ಅಳವಡಿಸಿದ ಕ್ಯಾಮೆರಾಗಳು ಬಂದ್ ಆಗಿದ್ದವು. ಅಪರಾಧ ಕೃತ್ಯಗಳ ಪತ್ತಗೆ ಸಹಕಾರಿಯಾಗುವ ಜತೆಗೆ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆ ಸಮಸ್ಯೆಯಾದರೆ ಇದರ ದೃಶ್ಯಗಳು ಸಿಪಿಐ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೂ ಮಾಹಿತಿ ರವಾನೆಯಾಗುತ್ತಿತ್ತು. ಅಲ್ಲದೇ ಬಸ್ ನಿಲ್ದಾಣದ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ. ಸಂಚಾರ ಸಮಸ್ಯೆ, ವಾಹನಗಳ ಯತ್ವಾತದ್ವಾ ನಿಲುಗಡೆ ಹೇಗೆ ನಿಯಂತ್ರಣ ಮಾಡುತ್ತಾರೆ ಎಂದು ಸಿಪಿಐ ಕಚೇರಿಯಲ್ಲಿ ಕುಳಿತೆ ವೀಕ್ಷಣೆ ಮಾಡಲು ಅವಕಾಶವಿತ್ತು. ಆದರೆ ಕ್ಯಾಮೆರಾಗಳು ಕೆಟ್ಟು 6 ತಿಂಗಳು ಆಗಿದ್ದರೂ ದುರಸ್ತಿ ಮಾಡಿಸಿಲ್ಲ.
ಮೊದಲು ಸಿಸಿ ಕ್ಯಾಮೆರಾ ಅಳವಡಿಸಿದ ಸಂಸ್ಥೆಗೆ ಪುರಸಭೆ ಇನ್ನೂ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ಅದರ ನಿರ್ವಹಣೆಗೆ ಸಂಸ್ಥೆಯವರು ಮುಂದಾಗುತ್ತಿಲ್ಲ. ಇದರಿಂದ ಸಿಸಿ ಕ್ಯಾಮೆರಾ ದೂಳುತ್ತಿನ್ನುತ್ತಿವೆ. ಸಿಸಿ ಕ್ಯಾಮೆರಾಗಳನ್ನು ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.