Advertisement

ಅಕ್ರಮ ಮದ್ಯ ಮಾರಾಟ ಜೋರು

01:43 PM Jul 08, 2019 | Naveen |

ಶಿವರಾಜ ಕೆಂಭಾವಿ
ಲಿಂಗಸುಗೂರು:
ತಾಲೂಕಿನ ಹಳ್ಳಿಗಳಿಗೆ ಸಕಾಲಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಆದರೆ ಅಕ್ರಮವಾಗಿ ಮದ್ಯ ಮಾತ್ರ ಎಲ್ಲೆಡೆ ಸರಾಗವಾಗಿ ದೊರೆಯುತ್ತಿದೆ. ಇದಕ್ಕೆ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯೇ ಕಾರಣವಾಗಿದೆ.

Advertisement

ತಾಲೂಕಿನಲ್ಲಿ ಸಿಎಲ್-2 ಲೈಸನ್ಸ್‌ ಹೊಂದಿದ 14, ಸಿಎಲ್-4 ಲೈಸನ್ಸ್‌ನ 1, ಸಿಎಲ್-7 ಲೈಸನ್ಸ್‌ನ 4. ಸಿಎಲ್-9 ಲೈಸನ್ಸ್‌ನ 18. ಎಮ್‌ಎಸ್‌ಐಎಲ್ 4. ವೈನ್‌ 1 ಸೇರಿ ಒಟ್ಟು 42 ಮದ್ಯದಂಗಡಿಗಳಿಗೆ ಪರವಾನಗಿ ಇದೆ. ಆದರೆ ಅನಧಿಕೃತವಾಗಿ ತಾಲೂಕಿನ ಹಳ್ಳಿಗಳಲ್ಲಿ ಎಲ್ಲೆಡೆ ಮದ್ಯ ದೊರೆಯುತ್ತಿದೆ. ಪಾನ್‌ಶಾಪ್‌, ಕಿರಾಣಿ ಅಂಗಡಿ, ಹೋಟೆಲ್ ಮತ್ತು ಕೆಲ ಮನೆಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಲಾಗುತ್ತಿದೆ. ಹಳ್ಳಿಗಳಿಗೆ ಪಟ್ಟಣದಲ್ಲಿನ ಮದ್ಯದಂಗಡಿಗಳಿಂದಲೇ ಮದ್ಯ ಸರಬರಾಜು ಆಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟಗಾರರು ಪಟ್ಟಣ ಪ್ರದೇಶದಲ್ಲಿನ ಮದ್ಯದಂಗಡಿಗಳಿಂದ ಎಲ್ಲ ಬ್ರ್ಯಾಂಡ್‌ನ‌ ಮದ್ಯಗಳನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದಾರೆ.

ಸಮಯ ಪಾಲನೆ ಇಲ್ಲ: ಲೈಸನ್ಸ್‌ಗೆ ಅನುಗುಣವಾಗಿ ಮದ್ಯದಂಗಡಿಗಳನ್ನು ತೆರೆಯಬೇಕು, ಮುಚ್ಚಬೇಕೆಂಬ ನಿಯಮವಿದೆ. ಸಿಎಲ್-2ಗೆ ಬೆಳಗ್ಗೆ 10ರಿಂದ ರಾತ್ರಿ 10:30ರವರೆಗೆ, ಸಿಎಲ್-4ಗೆ ಬೆಳಗ್ಗೆ 9ರಿಂದ ಮಧ್ಯರಾತ್ರಿ 12ರವರೆಗೆ. ಸಿಎಲ್-7ಗೆ ಬೆಳಗ್ಗೆ 9 ರಿಂದ ರಾತ್ರಿ 12ರವರೆಗೆ. ಸಿಎಲ್-9ಗೆ ಬೆಳಗ್ಗೆ 10ರಿಂದ ರಾತ್ರಿ 11:30ರವರೆಗೆ. ಅಬಕಾರಿ ನಿಯಮಗಳ ಪ್ರಕಾರ ಬಾರ್‌ ಅಥವಾ ವೈನ್‌ಸ್ಟೋರ್‌ ಬೆಳಗ್ಗೆ 10ರಿಂದ ರಾತ್ರಿ 10:30ರವವರೆಗೆ ತೆರೆದಿರಬೇಕು. ಆದರೆ ಈ ಸಮಯಪಾಲನೆ ಆದೇಶ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಯಾವುದೇ ಮದ್ಯದಂಗಡಿಗಳು ಸಮಯ ಪಾಲನೆ ಮಾಡುತ್ತಿಲ್ಲ. ಪಟ್ಟಣದಲ್ಲಿನ ಕೆಲ ಪ್ರದೇಶದ ಮದ್ಯದಂಗಡಿಗಳನ್ನು ಬೆಳಗಿನ ಜಾವವೇ ಆರಂಭಿಸಲಾಗುತ್ತಿದೆ. ಇದಲ್ಲದೇ ನಗರದ ಕೆಲ ಮನೆಗಳಲ್ಲಿ ಎಲ್ಲ ಬ್ರ್ಯಾಂಡ್‌ಗಳ ಮದ್ಯ ಮಾರಲಾಗುತ್ತಿದೆ. ಇದು ಸುತ್ತಲಿನ ಸಭ್ಯ ಗೃಹಸ್ಥರನ್ನು ಮುಜುಗರಕ್ಕೀಡು ಮಾಡುತ್ತಿದೆ. ಇನ್ನು ಚುನಾವಣೆ, ಹಬ್ಬ ಹರಿದಿನಗಳಲ್ಲಿ, ಬಾರ್‌ ಬಂದ್‌ ಇರುವ ವೇಳೆಯಲ್ಲಿ ಎಂದಿಗಿಂತ ಅಕ್ರಮ ಮದ್ಯ ಮಾರಾಟವೇ ಜೋರಾಗಿರುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸೌಲಭ್ಯಕ್ಕಿಂತ ದರ ಹೆಚ್ಚು: ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಶೌಚಾಲಯ, ಶುದ್ಧವಾದ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಮದ್ಯದ ದರಪಟ್ಟಿ ಹಾಕಬೇಕೆಂದು ಅಬಕಾರಿ ನಿಯಮ ಇದೆ. ಆದರೆ ಯಾವುದೇ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಸೌಲಭ್ಯವಿಲ್ಲ. ಇವು ಯಾವು ಇಲ್ಲಿನ ಬಾರ್‌ಗಳಲ್ಲಿ ಇಲ್ಲದಾಗಿದೆ. ಎಂಆರ್‌ಪಿ ಧರಕ್ಕಿಂತ ಶೇ.20 ರಷ್ಟು ಅಕ ಹಣ ತೆಗೆದುಕೊಳ್ಳತ್ತಿದ್ದಾರೆ. ಸಿಎಲ್ 7 ಬಾರ್‌ಗಳಲ್ಲಿ ಶೌಚಾಲಯವೇ ಇಲ್ಲ ಆದರೆ ದರ ಮಾತ್ರ ಹೆಚ್ಚಿಗೆ ಪಡೆಯುವುದನ್ನು ಮಾತ್ರ ಮರೆಯೋಲ್ಲ.

ಸಿಎಲ್-7 ಲೈಸನ್ಸ್‌ ನೀಡಲು ಸರ್ಕಾರ ವಿಧಿಸಿದ ಹತ್ತಾರು ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಪರವಾನಗಿ ನೀಡಲಾಗುತ್ತಿದೆ. ಆದರೆ ಇಲ್ಲಿನ ಸಿಎಲ್- 7 ಲೈಸನ್ಸ್‌ ಹೊಂದಿದ ಅಂಗಡಿಕಾರರು ಪಾರ್ಕಿಂಗ್‌ ಸೌಲಭ್ಯ ಕೂಡ ಕಲ್ಪಿಸುವುದಿಲ್ಲ. ಪ್ರವಾಸಿಗರು ವಾಹನಗಳನ್ನು ಬಯಲಲ್ಲೇ ನಿಲ್ಲಿಸಬೇಕು. ಪಾರ್ಕಿಂಗ್‌ಗೆಂದು ತೋರಿಸಿರುವ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ.

Advertisement

ಕಳ್ಳದಾರಿ: ತಾಲೂಕ ಕೇಂದ್ರದಲ್ಲಿನ ಬಾರ್‌ಗಳು ಬೆಳಿಗ್ಗೆ ಆರು ಗಂಟೆಯಿಂದಲೇ ಗ್ರಾಹಕರಿಗೆ ನಶೆ ಏರಿಸುತ್ತಿವೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಯಾವುದೇ ಸಮಯ ನಿಗದಿ, ನೀತಿ ನಿಯಮಗಳಿದ್ದಂತೆ ಕಾಣುತ್ತಿಲ್ಲ. ಮೊದಲು ಒಂದು ಸಣ್ಣ ಬಾಗಿಲನ್ನು ತೆರೆದು ಸೇವೆ ಆರಂಭಿಸಿ 9 ಗಂಟೆಯ ನಂತರ ಮುಖ್ಯ ಬಾಗಿಲು ತೆರೆಯಲಾಗುತ್ತಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಪಟ್ಟಣ ಸೇರಿ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ.
ಆಂಜನೇಯ ಭಂಡಾರಿ,
ಕರವೇ ಅಧ್ಯಕ್ಷ ಲಿಂಗಸುಗೂರು.

ಕಳೆದ ಮೂರು ತಿಂಗಳ ಕಾಲ ಚುನಾವಣೆ ನಿಮಿತ್ತ ಬೇರೆಡೆ ವರ್ಗವಾಗಿತ್ತು. ಮತ್ತೆ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವೆ.
ಸರಸ್ವತಿ,
ಅಬಕಾರಿ ನಿರೀಕ್ಷಕರು ಲಿಂಗಸುಗೂರು.

Advertisement

Udayavani is now on Telegram. Click here to join our channel and stay updated with the latest news.

Next