ಲಿಂಗಸುಗೂರು: 315 ಎಕರೆ ವಿಸ್ತರಾದ ಬಿಲ್ಲಮರಾಜನ ಕೆರೆ ಎಂದು ಕರೆಯಲಾಗುತ್ತಿದ್ದ ಕರಡಕಲ್ ಕೆರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಜನರ ತಾತ್ಸಾರಕ್ಕೆ ಒಳಗಾಗಿ ಗಲೀಜು ನೀರು, ತ್ಯಾಜ್ಯ ಸಂಗ್ರಹ ತಾಣವಾಗಿ ಮಾರ್ಪಟ್ಟಿದ್ದು, ನೀರು ಗಬ್ಬೆದ್ದು ಹೋಗಿದೆ.
ಕೆರೆಯಲ್ಲಿ ಕಸಕಡ್ಡಿ, ಕೋಳಿಪುಚ್ಚ, ಕೂದಲು, ಹಳೆ ಬಟ್ಟೆ, ಪಟ್ಟಣದ ತ್ಯಾಜ್ಯವಸ್ತುಗಳನ್ನು ತಂದು ಸುರಿಯಲಾಗುತ್ತಿದೆ. ಸತ್ತ ಬೀದಿ ನಾಯಿ, ಹಂದಿಗಳನ್ನು ತಂದು ಕೆರೆ ದಂಡೆಯಲ್ಲೇ ಎಸೆಯಲಾಗುತ್ತಿದೆ. ಹಂದಿಗಳನ್ನು ಕೆರೆ ದಂಡೆ ಹತ್ತಿರ ತಂದು ಸಾಯಿಸಿ ಸುಡುವ ಕೆಲಸವನ್ನೂ ಸಹ ಇಲ್ಲಿಯೇ ಮಾಡಲಾಗುತ್ತಿದೆ. ದಂಡೆಯ ಮೇಲೆ ಮಲ ಮೂತ್ರ ವಿಸರ್ಜಿಸಲಾಗುತ್ತಿದ್ದು, ಕೆರೆ ಸುತ್ತಮುತ್ತ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಹೋಗಬೇಕಿದೆ. ಕೆರೆಯಲ್ಲಿ ಜಾನುವಾರುಗಳು ಹಾಗೂ ವಾಹನಗಳನ್ನು ತೊಳೆಯಲಾಗುತ್ತಿದೆ. ಇದರಿಂದಾಗಿ ಕೆರೆ ದುರ್ನಾತ ಬೀರುವ ಕೇಂದ್ರವಾಗಿ ಬದಲಾವಣೆಯಾಗುತ್ತಿದೆ. ನೀರು ಕೆಂಪು ಬಣ್ಣಕ್ಕೆ ತಿರುಗಿದೆ.
ಬೋಟ್ ಪ್ಲಾಟ್ಫಾರಂ: ತ್ಯಾಜ್ಯ ಸಂಗ್ರಹಣ ಕೇಂದ್ರವಾಗಿ ಮಾರ್ಪಾಡಾಗಿರುವ ದುರ್ನಾತ ಬೀರುತ್ತಿರುವ ಕರಡಕಲ್ ಕೆರೆಯೇ ಇನ್ನೂ ಅಭಿವೃದ್ಧಿಗೊಳಿಸಿಲ್ಲ. ಅದಕ್ಕೂ ಮುನ್ನವೇ ಪುರಸಭೆ ಆಡಳಿತ ವರ್ಗ ಎರಡು ವರ್ಷಗಳ ಹಿಂದೆಯೇ 10 ಲಕ್ಷ ರೂ. ಖರ್ಚು ಮಾಡಿ ಬೋಟಿಂಗ್ ಪ್ಲಾಟ್ಫಾರಂ ನಿರ್ಮಿಸಿದೆ. ಅದೂ ಕೂಡಾ ಹಾಳಾಗುತ್ತಿದೆ.
ಅಭಿವೃದ್ಧಿ ಗಗನಕುಸುಮ: ಕರಡಕಲ್ ಕೆರೆ ಜಿಲ್ಲೆಯಲ್ಲೇ ದೊಡ್ಡ ಕೆರೆ ಎನಿಸಿದೆ. ಆದರೆ ಅಭಿವೃದ್ಧಿ ಎಂಬುದು ಗಗನ ಕುಸಮವಾಗಿದೆ. ನಗರ ಪ್ರದೇಶದಲ್ಲಿ ಕೆರೆ ಅಭಿವೃದ್ಧಿಗೊಳಿಸಿ ಪ್ರವಾಸಿತಾಣವನ್ನಾಗಿ ಮಾಡಲಾಗಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಈ ಕೆರೆ ಅಭಿವೃದ್ಧಿ ಮಾಡಬೇಕೆಂಬ ಯೋಚನೆಯೇ ಇಲ್ಲದಾಗಿದೆ.
ಕರಡಕಲ್ ಕೆರೆ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ. ಚರಂಡಿ ನೀರು ಕೆರೆಗೆ ಹರಿಬಿಡಲಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ಶಾಸಕರು, ಅಧಿಕಾರಿಗಳು ಕೆರೆ ಅಭಿವೃದ್ಧಿಗೆ ಮುಂದಾಗಿ ಜಲ ಮೂಲ ಸಂರಕ್ಷಿಸಬೇಕಿದೆ.
•
•ಮೋಹನ ಗೋಸ್ಲೆ, ಕರಡಕಲ್ ನಿವಾಸಿ
ಕೆರೆಗೆ ಸೇರುವ ಚರಂಡಿ ನೀರನ್ನು ಪಕ್ಕದ ಹಳ್ಳಕ್ಕೆ ಹರಿಬಿಡಲು ಚರಂಡಿ ನಿರ್ಮಿಸಲಾಗುತ್ತಿದೆ. ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
•
•ಕೆ.ಮುತ್ತಪ್ಪ, ಮುಖ್ಯಾಧಿಕಾರಿ ಪುರಸಭೆ ಲಿಂಗಸುಗೂರು
ಶಿವರಾಜ ಕೆಂಬಾವಿ