Advertisement

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸರ್ಕಾರಿ ಕಟ್ಟಡಗಳು

11:21 AM May 17, 2019 | Naveen |

ಲಿಂಗಸುಗೂರು: ಸರ್ಕಾರ ಹಾಗೂ ಆಯಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿಗೃಹಗಳು ಪಾಳುಬಿದ್ದು ಹಾಳಾಗುತ್ತಿವೆ.

Advertisement

ಆಂಗ್ಲರ ಆಡಳಿತದಲ್ಲಿ ಸೈನಿಕರ ನೆಲೆಯಾಗಿದ್ದ ಲಿಂಗಸುಗೂರನ್ನು ಛಾವಣಿ ಎಂದು ಕರೆಯಲಾಗುತ್ತಿತ್ತು. ಆಂಗ್ಲರು ತಮ್ಮ ಅಧಿಕಾರಿಗಳಿಗಾಗಿ ಕಚೇರಿ ಮತ್ತು ನಿವಾಸಗಳನ್ನು ವಿಶಾಲವಾದ ಜಾಗೆಯಲ್ಲಿ ನಿರ್ಮಿಸಿದ್ದರು. ಅಂದು ಬಳಕೆ ಮಾಡಿದ ಕಟ್ಟಡಗಳಲ್ಲಿಯೇ ಇಂದು ಕೆಲವು ಇಲಾಖೆಗಳ ಕಚೇರಿಗಳನ್ನು ನಡೆಸಲಾಗುತ್ತಿದೆ.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿವಾಸಕ್ಕಾಗಿ ಪಟ್ಟಣದಲ್ಲಿ ವಿಶಾಲ ಆವರಣದಲ್ಲಿ ಮನೆ ನಿರ್ಮಿಸಲಾಗಿತ್ತು. ಆದರೆ ಕಳೆದ 8-10 ವರ್ಷಗಳಿಂದ ತಾಪಂ ಕಾ.ನಿ. ಅಧಿಕಾರಿಗಳು ಇಲ್ಲಿ ವಾಸಿಸುತ್ತಿಲ್ಲ. ಹೀಗಾಗಿ ಮನೆ ಪಾಳುಬಿದ್ದಿದೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ವಸತಿಗೆ ನಿರ್ಮಿಸಿದ ಮನೆ ಶಿಥಿಲಗೊಂಡಿದೆ. ಇದರ ಪಕ್ಕದಲ್ಲೇ ಪಿಎಸ್‌ಐಗೆ ಹೊಸ ಮನೆ ನಿರ್ಮಿಸಲಾಗಿದೆ. ಆದರೆ ಹಳೆ ಕಟ್ಟಡ ತೆರವುಗೊಳಿಸದೇ ಹಾಗೇ ಬಿಡಲಾಗಿದೆ. ಇದಲ್ಲದೆ ಠಾಣೆ ಆವರಣದಲ್ಲಿ ಹಳೆಯ ಠಾಣೆ ಸೇರಿ ಇನ್ನೂ ಎರಡ್ಮೂರು ಕಟ್ಟಡಗಳು ಪಾಳು ಬಿದಿದ್ದು, ಘನತ್ಯಾಜ್ಯ ಸಂಗ್ರಹ ಕೇಂದ್ರಗಳಾಗಿವೆ.

ಸಹಾಯಕ ಆಯುಕ್ತರ ಕಚೇರಿ ಬಳಿಯಲ್ಲಿ ಈ ಹಿಂದೆ ಚುನಾವಣೆ ವಿಭಾಗ ಹಾಗೂ ಸಭಾಭವನದ ಕಟ್ಟಡ ನಿರ್ವಹಣೆ ಹಾಗೂ ಬಳಕೆಯ ಕೊರತೆಯಿಂದ ಪಾಳು ಬಿದ್ದು ಹಾಳಾಗಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡ ಶಿಥಿಲಗೊಂಡಿದೆ. ಇದಲ್ಲದೆ ತಾಲೂಕಿನ ಈಚನಾಳ, ಹಿರೇಹೆಸರೂರು, ನರಕಲದಿನ್ನಿ, ಮಿಂಚೇರಿ, ನಾಗರಹಾಳ, ರೋಡಲಬಂಡಾ(ಯುಕೆಪಿ) ಹಾಗೂ ಇನ್ನಿತರ ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ, ಸಮುದಾಯ ಭವನದ ಕಟ್ಟಡಗಳು ಪಾಳು ಬಿದ್ದಿವೆ.

ನಿರುಪಯುಕ್ತ: ವಸತಿ, ಕಚೇರಿ ಕಟ್ಟಡಗಳು ಹಲವು ವರ್ಷಗಳಿಂದ ನಿರುಪಯುಕ್ತವಾಗಿವೆ. ಸರ್ಕಾರಿ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ. ಕೆಲ ಕಟ್ಟಡ ಗಟ್ಟಿಮುಟ್ಟಾಗಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿವೆ. ಕೆಲ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಸಹಾಯಕ ಆಯುಕ್ತರ ಕಚೇರಿ ಬಳಿ, ಹಾಗೂ ತಾಪಂ ಎಇ ನಿವಾಸದ ಕಟ್ಟಡಗಳು ಇರುವ ಅಷ್ಟೂ ಜಾಗದಲ್ಲಿ ಮುಳ್ಳಿನಗಿಡಗಳು ಬೆಳೆದಿವೆ. ರಾತ್ರಿಯಾದ ಮೇಲೆ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಾಡಾಗಿವೆ.

Advertisement

ಬಾಡಿಗೆ ಕಟ್ಟಡದಲ್ಲಿ: ಸಿಡಿಪಿಒ, ಅಬಕಾರಿ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಡಗಳ ವರ್ಗಗಳ ಇಲಾಖೆ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಭೂಸೇನಾ ನಿಗಮ ಇನ್ನಿತರ ಕಚೇರಿಗಳು ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವುಗಳಿಗೆ ಜಾಗದ ಕೊರತೆಯಿದೆ. 101 ಬಾಗಿಲು ಎಂದು ಕರೆಯುತ್ತಿದ್ದ ಈಗಿನ ಸಹಾಯಕ ಆಯುಕ್ತರ ಕಚೇರಿಯ ಸಂಕೀರ್ಣದಲ್ಲಿ ಹಲವಾರು ಕಟ್ಟಡಗಳು ಖಾಲಿ ಇವೆ. ಇದಲ್ಲದೇ ಆವರಣದಲ್ಲಿ ಶಿಥಿಲಾವಸ್ಥೆ ಕಟ್ಟಡಗಳಿದ್ದು ಅವುಗಳನ್ನು ತೆರವುಗೊಳಿಸಿದರೆ ಸಾಕಷ್ಟು ಜಾಗ ಲಭ್ಯವಾಗುತ್ತದೆ. ಹೊಸ ಕಟ್ಟಡ ನಿರ್ಮಿಸಿದರೆ ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳಿಗೆ ಸ್ವಂತ ಕಟ್ಟಡಗಳ ಭಾಗ್ಯ ನೀಡಿದಂತಾಗುತ್ತದೆ ಹಾಗೂ ಸರ್ಕಾರಿ ಹಣ ಉಳಿಸಿದಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಿ ಶಿಥಿಲಗೊಂಡ ಹಾಗೂ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಜಾಗವನ್ನು ಸಮರ್ಪಕ ಬಳಕೆಗೆ ಮುಂದಾಗಬೇಕಿದೆ.

ಕೆಲ ಸರ್ಕಾರಿ ಕಚೇರಿಗಳಿಗೆ ಜಾಗವಿಲ್ಲ. ಹಳೆಯ ಕಟ್ಟಡಗಳನ್ನು ದುರಸ್ತಿಗೊಳಿಸಲು ಇಲ್ಲವೇ ತೆರವುಗೊಳಿಸಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ಅಧಿಕಾರಿಗಳು ಮುಂದಾಗಬೇಕು.
•ತಿರುಪತಿ ಉಪ್ಪಾರ, ಸ್ಥಳೀಯ ನಿವಾಸಿ

ಡಿವೈಎಸ್‌ಪಿ ಹಾಗೂ ಸಿಪಿಐಗೆ ಕ್ವಾಟರ್ಸ್‌ ಇಲ್ಲ, ಪಟ್ಟಣದ ಪೊಲೀಸ್‌ ಠಾಣೆಯಲ್ಲಿರುವ ಹಳೆಯ ಕಟ್ಟಡಗಳ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ನಂತರ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
•ಎಸ್‌.ಎಚ್. ಸುಬೇದಾರ,
ಡಿವೈಎಸ್ಪಿ, ಲಿಂಗಸುಗೂರು.

ಲಿಂಗಸುಗೂರು ಪಟ್ಟಣದಲ್ಲಿರುವ ಹಳೆ ತಹಶೀಲ್ದಾರ್‌ ಕಟ್ಟಡ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದೇನೆ. ನಂತರ ಬಾಡಿಗೆ ಕಟ್ಟಡದಲ್ಲಿರುವ ಕೆಲ ಇಲಾಖೆ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು.
•ರಾಜಶೇಖರ ಡಂಬಳ,
ಸಹಾಯಕ ಆಯುಕ್ತರು ಲಿಂಗಸುಗೂರು.

ಶಿವರಾಜ ಕೆಂಬಾವಿ

Advertisement

Udayavani is now on Telegram. Click here to join our channel and stay updated with the latest news.

Next