Advertisement

ಜಪ್ತಿ ವಾಹನಗಳಿಗಿಲ್ಲ ಮುಕ್ತಿ

11:19 AM Jun 17, 2019 | Team Udayavani |

ಶಿವರಾಜ ಕೆಂಭಾವಿ
ಲಿಂಗಸುಗೂರು:
ಅಪಘಾತಕ್ಕೀಡಾದ, ವಿವಿಧ ಕಾನೂನು ಬಾಹಿರ ಚಟುವಟಿಕೆಗೆ ಬಳಸಿದ ಬೈಕ್‌ ಇತರೆ ವಾಹನಗಳು ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ಮಳೆ, ಬಿಸಿಲಿಗೆ ಹಾಳಾಗಿ ತುಕ್ಕು ಹಿಡಿಯುತ್ತಿವೆ.

Advertisement

ಅಪಘಾತ, ಕಳ್ಳತನ, ಕೋಳಿ ಪುಂಜ, ಜೂಜಾಟ ಸೇರಿ ಇತರೆ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಬೈಕ್‌, ಲಾರಿ, ಕಾರ್‌ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ನಿಂತಿವೆ. ಕೆಲ ವಾಹನಗಳು ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದರೆ, ಹೆಚ್ಚಿನ ನೂರಾರು ವಾಹನಗಳು ಉತ್ತಮ ಕಂಡೀಷನ್‌ನಲ್ಲಿವೆ. ಇವುಗಳಲ್ಲಿ ಕೆಲವು ಹೊಸ ವಾಹನಗಳಿದ್ದರೆ, ಇನ್ನೂ ಕೆಲವು ಕೆಲ ವರ್ಷಗಳಷ್ಟು ಹಿಂದಿನವು.

ಅಕ್ರಮ ಸಾಗಾಟಕ್ಕೆ ಬಳಸಿದ ವಾಹನಗಳು: ಅಕ್ರಮ ಸಾಗಾಟಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡ ಬಳಿಕ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿದರೂ ವಾಹನಗಳನ್ನು ಬಿಟ್ಟುಕೊಡುವ ಹಾಗಿಲ್ಲವಂತೆ. ಕಾನೂನು ಉಲ್ಲಂಘಿಸಿದ ಕಾರಣ ವಾಹನಗಳ ಮಾಲೀಕರು ತಮ್ಮ ವಾಹನಗಳತ್ತ ತಲೆ ಹಾಕುವುದಿಲ್ಲ. ನ್ಯಾಯಾಲಯವಂತೂ ವಾಹನಗಳನ್ನು ಸುಲಭದಲ್ಲಿ ಬಿಟ್ಟು ಕೊಡುತ್ತಿಲ್ಲ. ಹಾಗಾಗಿ ಲಾರಿ, ಟಾಟಾ ಏಸ್‌ ಸೇರಿ ಇನ್ನಿತರ ವಾಹನಗಳು ಪೊಲೀಸ್‌ ಠಾಣೆ ಆವರಣದಲ್ಲಿ ಕೊಳೆಯುತ್ತಿವೆ.

ಜಾಗೆ ಕೊರತೆ: ಯಾವ ಗ್ಯಾರೇಜ್‌, ಶೋರೂಮ್‌ಗಳಲ್ಲೂ ಇಲ್ಲದಷ್ಟು ವಾಹನಗಳು ಪೊಲೀಸ್‌ ಠಾಣೆಯಲ್ಲಿ ಬಿಡಾರ ಹೂಡಿವೆ. ಅಪಘಾತಕ್ಕೀಡಾದ ಬೈಕ್‌, ಕಾರು ಇನ್ನಿತರ ವಾಹನಗಳು ಇಲ್ಲಿವೆ. ಬೈಕ್‌ಗಳಿಗಂತೂ ಜಾಗವಿಲ್ಲದಂತಾಗಿದೆ.

ಕಾರಣ..?: ಯಾವುದೇ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್‌ ಠಾಣೆಯಿಂದ ಬಿಡುಗಡೆಯಾಗಬೇಕಾದರೆ ವಾಹನದ ನೋಂದಣಿ, ವಿಮೆ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿ ಇದ್ದರೆ ಮಾತ್ರ ವಾಹನ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಬೈಕ್‌ಗಳು ಇಲ್ಲಿ ಕೊಳೆಯುತ್ತಿವೆ. ಇದಲ್ಲದೆ ಬೈಕ್‌ ಅಪಘಾತದಲ್ಲಿ ಸವಾರರು ಮೃತಪಟ್ಟಿದ್ದರೆ ಅವರ ಕುಟಂಬಸ್ಥರು ನಮ್ಮವರೇ ಅಪಘಾತದಲ್ಲಿ ತೀರಿ ಹೋದ ಮೇಲೆ ಬೈಕ್‌ ನಮಗ್ಯಾಕೆ ಬೇಕು ಎನ್ನುವ ಕಾರಣಕ್ಕೆ ಬಿಡಿಸಿಕೊಳ್ಳಲು ಮುಂದಾಗುವುದಿಲ್ಲ. ಇಲ್ಲಿ ಬಿಸಿಲಿಗೆ, ಮಳೆಗೆ ಮೈಯೊಡ್ಡಿವೆ. ಇನ್ನೂ ಕೆಲವು ಅಪಘಾತದಲ್ಲಿ ನುಜ್ಜಗುಜ್ಜಾಗಿರುವ ಕಾರಣ ರಿಪೇರಿ ಮಾಡಿಸುವ ಬದಲು ಹೊಸ ವಾಹನಗಳನ್ನು ಕೊಳ್ಳಬಹುದು ಎಂಬ ಕಾರಣಕ್ಕೆ ಕೆಲವರು ಬೈಕ್‌ಗಳನ್ನು ಬಿಡಿಸಿಕೊಳ್ಳದ್ದಕ್ಕೆ ಅನೇಕ ವರ್ಷಗಳಿಂದ ಪೊಲೀಸ್‌ ಠಾಣೆಯಲ್ಲಿ ಮೂಲೆಗುಂಪಾಗಿವೆ.

Advertisement

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ನೂರಾರು ಬೈಕ್‌ಗಳ ರಾಶಿಯೇ ಇದೆ. ಆದರೆ ಇವುಗಳ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮೇಲಾಧಿಕಾರಿಗಳು ಗಮನ ಹರಿಸಬೇಕಾಗಿದೆ.

ಪೊಲೀಸ್‌ ಇಲಾಖೆ ಜಪ್ತಿ ಮಾಡಿದ ಬೈಕ್‌, ಕಾರ್‌ ಸೇರಿ ಯಾವುದೇ ವಾಹನಗಳಾಗಲಿ ಅಗತ್ಯ ದಾಖಲೆಗಳು ಇದ್ದರೆ ಮಾತ್ರ ಬಿಡುಗಡೆಗೆ ಸುಪ್ರೀಂಕೋರ್ಟ್‌ ಆದೇಶವಿದೆ. ದಾಖಲಾತಿ ಇರಲಾರದ ವಾಹನಗಳೇ ಇಲ್ಲಿವೆ.
•ದಾದಾವಲಿ,
ಪಿಎಸ್‌ಐ, ಲಿಂಗಸುಗೂರು

Advertisement

Udayavani is now on Telegram. Click here to join our channel and stay updated with the latest news.

Next