ಲಿಂಗಸುಗೂರು: ಕೇಂದ್ರ ಸರ್ಕಾರ ಘೋಷಿಸುವ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಿ ಭತ್ತ ಮತ್ತು ತೊಗರಿ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಗುರುವಾರ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಅವರಿಗೆ ಮನವಿ ಸಲ್ಲಿಸಿದರು.
ಭತ್ತ ಪ್ರತಿ ಕ್ವಿಂಟಲ್‌ಗೆ 1100 ದಿಂದ 1300 ರೂ. ಮತ್ತು ತೊಗರಿ 4500 ರೂ.ವರೆಗೆ ದರ ನಿಗದಿ ಮಾಡಿ ವ್ಯಾಪಾರಸ್ಥರು ಬೇಕಾಬಿಟ್ಟಿಯಾಗಿ ಖರೀದಿಸುತ್ತಿದ್ದಾರೆ. ಭತ್ತ ಕ್ವಿಂಟಲ್‌ಗೆ 1835 ರೂ.
ದರಕ್ಕೆ 700 ರೂ ಪ್ರೋತ್ಸಾಹ ಧನ ನೀಡಿ 2500 ರೂ.ದಂತೆ ಖರೀದಿಸಬೇಕು. ಹಾಗೂ ತೊಗರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ 5800 ರೂ. ಗೆ ರಾಜ್ಯ ಸರ್ಕಾರ ಕನಿಷ್ಠ 1200 ರೂ. ಪ್ರೋತ್ಸಾಹ ಧನ ನೀಡಿ 7000 ರೂ.ಗೆ ಖರೀದಿಸಿ ರೈತರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಭೂಮಾಪನ ಕಚೇರಿಯಲ್ಲಿ ರೈತರು ಸರ್ವೇಗಾಗಿ ಕೊಟ್ಟ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡುತ್ತಿಲ್ಲ. ಇಲ್ಲಸಲ್ಲದ ನೆಪಹೇಳಿ ಎರಡ್ಮೂರು ವರ್ಷಗಳಾದರೂ ಸರ್ವೇ ಕಾರ್ಯ ಮಾಡಿ ರೈತರಿಗೆ ನಕಾಶೆ ನೀಡುತ್ತಿಲ್ಲ. ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ರಾಯಚೂರು ಜಿಲ್ಲೆಯು ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಜಿಲ್ಲೆಯ ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 12 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೋತಿ ವೀರಾಸತ್ ಆದಾಲತ್ ನಡೆಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಗೌಡೂರು ಇತರರು ಇದ್ದರು.