ಲಿಂಗಸುಗೂರು: ಗದಗ-ವಾಡಿ ಸೇರಿ ನನೆಗುದಿಗೆ ಬಿದ್ದ ಈ ಭಾಗದ ರೈಲ್ವೆ ಯೋಜನೆಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಬಿಜೆಪಿ ಮಂಡಲ ವತಿಯಿಂದ ಶನಿವಾರ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ರಾಯಚೂರು ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಲಿಂಗಸುಗೂರು ತಾಲೂಕಿನ ಮೊದಲಿಗ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ. ರಾಯಚೂರು-ಯಾದಗಿರಿ ಜಿಲ್ಲೆಗಳ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ್ದಾರೆ. ಕ್ಷೇತ್ರದ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ರಾಷ್ಟ್ರದಲ್ಲಿ ಸುಭದ್ರ ಸರ್ಕಾರ ತರಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಅದರಂತೆ ಮೋದಿಯವರು ಎರಡನೇ ಬಾರಿ ಪ್ರಧಾನಿ ಆಗಿದ್ದಾರೆ. ಅವರ ನೇತೃತ್ವದಲ್ಲಿ ದೇಶವನ್ನು ಸದೃಢವಾಗಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಆಡಳಿತ ಚುರುಕು ಪಡೆದಿಲ್ಲ. ಇದರಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರದಿಂದ ಜಾನುವಾರುಗಳಿಗೆ ಮೇವು ಕೊರತೆ ಇದೆ. ಇದಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಬರೀ ಒಂದು ಗ್ರಾಮ ನೋಡಲು ಒಂದು ವರ್ಷ ಬೇಕಾಯಿತು. ಇನ್ನು ರಾಜ್ಯದ ಅಭಿವೃದ್ಧಿಗೆ ಎಷ್ಟು ದಿನ ಬೇಕಾಗುಬಹುದು ಎಂದು ಲೇವಡಿ ಮಾಡಿದರು.
ಸಮಾರಂಭ ಉದ್ಘಾಟಿಸಿದ ಸುರಪುರ ಶಾಸಕ ರಾಜುಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತ ತಲೆ ಹಾಕಿ ಮಲಗಿಲ್ಲ, ಒಂದು ವರ್ಷ ಕಾಲ ಫೈವ್‌ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದ ಅವರು ಈಗ ಗ್ರಾಮದ ಕಡೆ ಮುಖ ಮಾಡಿದ್ದಾರೆ. ಸಿಎಂ ಏನೇ ನಾಟಕ ಮಾಡಿದರೂ ಜನರು ಪ್ರಜ್ಞಾವಂತರಾಗಿದ್ದಾರೆ. ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಹೀನಾಯ ಸೋಲೇ ಇದಕ್ಕೆ ತಾಜಾ ಉದಾಹರಣೆವಾಗಿದೆ. ಈ ಹಿಂದೆ ವಿವಿಧ ಗ್ರಾಮಗಳಲ್ಲಿ, ಮನೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಮೊದಲೇ ಮಾಡಿಸಿದ ನಂತರವೇ ಕುಮಾರಸ್ವಾಮಿಯವರು ವಾಸ್ತವ್ಯ ಮಾಡಿದ್ದರಿಂದ ಆ ಮನೆಯವರು ಸಾಲಗಾರರಾಗಿದ್ದಾರೆ. ಗ್ರಾಮ ವಾಸ್ತವ್ಯ ಯಾರ ಉದ್ಧಾರಕ್ಕಾಗಿ..? ಅದರ ಬದಲು ವಿಧಾನಸೌಧದಲ್ಲಿ ವಾಸ್ತವ್ಯ ಮಾಡಿ ಆಡಳಿತದಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಲಿ ಎಂದರು. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರಲ್ಲ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮತ್ತೂಮ್ಮೆ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಶಾಸಕ ಶಿವರಾಜ ಪಾಟೀಲ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಗಂಗಾಧರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಜೆ. ಶರಣಪ್ಪಗೌಡ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಮುಖಂಡರಾದ ರಾಜಾ ಶ್ರೀನಿವಾಸ ನಾಯಕ, ಡಾ| ಶಿವಬಸಪ್ಪ, ಶರಣಬಸಪ್ಪ ಗುಡದನಾಳ, ಶಂಕರಗೌಡ ಅಮರಾವತಿ, ಕೆ.ಶರಣಪ್ಪ, ಕೆ.ಆಂಜಿನೇಯ, ದೊಡ್ಡನಗೌಡ ಹೊಸಮನಿ, ಜಗನ್ನಾಥ ಕುಲಕರ್ಣಿ, ಗುಂಡಪ್ಪಗೌಡ ಹಟ್ಟಿ, ಕಂಠೆಪ್ಪಗೌಡ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಗೋವಿಂದ ನಾಯಕ ಸೇರಿ ಬಿಜೆಪಿ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕ ಹಾಗೂ ಮುಖಂಡರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕೇಂದ್ರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗದಗ-ವಾಡಿ ರೈಲ್ವೆ ಯೋಜನೆ ಜಾರಿಗೆ ಕಾರ್ಯ ಪ್ರವೃತ್ತನಾಗುತ್ತೇನೆ. ಈ ಭಾಗದ ನಾರಾಯಣಪುರ ಬಲದಂಡೆ, ಏತ ನೀರಾವರಿ ನಾಲೆಗಳು ಆಧುನೀಕರಣಗೊಳಿಸಬೇಕಾಗಿದೆ.
•
•ರಾಜಾ ಅಮರೇಶ್ವರ ನಾಯಕ,
ಸಂಸದ