ಲಿಂಗಸುಗೂರು: ಬರ ಅಧ್ಯಯನ ಪ್ರವಾಸಕ್ಕೆ ಶನಿವಾರ ತಾಲೂಕಿಗೆ ಭೇಟಿ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲಿನ ಬಿಜೆಪಿ ಮುಖಂಡರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದು ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಿಂದ ಜಾನುವಾರುಗಳನ್ನು ಕಸಾಯಿಖಾನೆಯತ್ತ ಮಾರಾಟ ಮಾಡುವ ಸ್ಥಿತಿ ತಲುಪಿದೆ. ಇದರ ವೀಕ್ಷಣೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಶನಿವಾರ ತಾಲೂಕಿನ ಮುದಗಲ್ ಹೋಬಳಿ ಛತ್ತರ ತಾಂಡಾದಲ್ಲಿ ಬರ ಪರಿಶೀಲನೆ ನಡೆಸಿ ಲಿಂಗಸುಗೂರಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಭರ್ಜರಿ ಸ್ವಾಗತ: ಬಿ.ಎಸ್.ಯಡಿಯೂರಪ್ಪ ಅವರು ತಾಲೂಕಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಮುಖಂಡರು ನೂರಾರು ಸಂಖ್ಯೆಯಲ್ಲಿ ಬ್ಯಾನರ್ ಹಾಗೂ ಕಟೌಟ್ ಹಾಕುವ ಮೂಲಕ ಭರ್ಜರಿ ಸ್ವಾಗತ ನೀಡಿದ್ದು ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ನಾಯಕರು ಭೇಟಿ ನೀಡಿರುವುದು ಬರ ಪರಿಶೀಲನೆಗಾಗಿ. ಆದರೆ ಇಲ್ಲಿನ ನಾಯಕರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬ್ಯಾನರ್‌ಗಳನ್ನು ಹಾಕಿ ಸ್ವಾಗತ ಕೋರಿದ್ದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯದಾಗಿದೆ.
ವಿಪಕ್ಷ ನಾಯಕರು ತಾಲೂಕಿಗೆ ಭೇಟಿ ನೀಡುತ್ತಿದ್ದರಿಂದ ಜಿಲ್ಲೆಯ ಬಿಜೆಪಿ ಶಾಸಕ, ಮಾಜಿ ಶಾಸಕ ಹಾಗೂ ಹಿರಿಯ ಮುಖಂಡರ ದಂಡೇ ತಾಲೂಕಿಗೆ ಆಗಮಿಸಿತ್ತು. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡುವ ಬದಲು ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಬಹುದಾಗಿತ್ತು. ಬ್ಯಾನರ್‌ಗಳಿಗಾಗಿ ಸಾವಿರಾರು ರೂ.ಗಳನ್ನು ಖರ್ಚು ಮಾಡುವ ಬದಲು ಪಕ್ಷದ ವತಿಯಿಂದ ಮೇವು ಖರೀದಿಸಿ ಅದನ್ನು ರೈತರಿಗೆ ಉಚಿತವಾಗಿ ನೀಡಬಹುದಾಗಿತ್ತು. ಆದರೆ ಇದನ್ನೆಲ್ಲಾ ಮರೆತು ತಮ್ಮ ನಾಯಕನಿಗೆ ಅದ್ಧೂರಿ ಸ್ವಾಗತ ಕೋರಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಭೇಟಿ ನೀಡಿಲ್ಲ: ತಾಲೂಕಿನಲ್ಲಿ ಭೀಕರ ಬರವಿದ್ದರೂ, ವಿವಿಧ ದೊಡ್ಡಿಗಳಲ್ಲಿ ನೀರಿನ ಸಮಸ್ಯೆಯಿದ್ದರೂ ಇಲ್ಲಿನ ಬಿಜೆಪಿ ನಾಯಕರು ಕ್ಷೇತ್ರದ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿ ಜನತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ಜನತೆ ಬಳಿ ಹೋಗುವ ರಾಜಕೀಯ ಮುಖಂಡರು ಚುನಾವಣೆ ಮುಗಿದ ನಂತರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿಬಂದಿದೆ.
ಯಡಿಯೂರಪ್ಪನವರು ಬರ ಪರಿಶೀಲನೆಗೆ ಬಂದಿರುವುದು ಸ್ವಾಗತಾರ್ಹ. ಇಲ್ಲಿರುವ ಸಂಕಷ್ಟ ಪರಿಹಾರ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು.
•
ಅಮರಣ್ಣ ಗುಡಿಹಾಳ,
ರೈತ ಸಂಘದ ಮುಖಂಡರು, ಲಿಂಗಸುಗೂರು.
ಮಾಜಿ ಸಿಎಂ ಯಡಿಯೂರಪ್ಪ ಅವರು ತಾಲೂಕಿಗೆ ಬರ ಪರಿಶೀಲನೆಗಾಗಿ ಬಂದಿರುವುದು ಕೇವಲ ಕಾಟಾಚಾರಕ್ಕಾಗಿ ಮಾತ್ರ. ವಿಧಾನಸಭೆಯಲ್ಲಿ ಸುಮ್ಮನೆ ಕುಳಿತು ಈಗ ರಾಜಕೀಯ ದುರುದ್ದೇಶದಿಂದ ಬರ ಪರಿಶೀಲನೆ ನಡೆಸುತ್ತಿದ್ದಾರೆ. ಇವರಿಗೆ ಅದ್ಧೂರಿ ಸ್ವಾಗತ ನೀಡಿರುವುದು ಬರದ ಬಗ್ಗೆ ಅವರಿಗೆ ಎಷ್ಟು ಕಾಳಜಿಯಿದೆ ಎಂಬುದು ತೋರುತ್ತಿದೆ.
•
ಭೂಪನಗೌಡ ಕರಡಕಲ್.
ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಲಿಂಗಸುಗೂರು.