Advertisement

ಮೂರು ಸಾವಿರ ದಾಳಿಂಬೆ ಗಿಡ ಬೇರು ಸಮೇತ ಸ್ಥಳಾಂತರ!

06:57 PM Jan 05, 2020 | Naveen |

ಲಿಂಗಸುಗೂರು: ಪ್ರಗತಿಪರ ರೈತರೊಬ್ಬರು 22 ಎಕರೆಯಲ್ಲಿ ಬೆಳೆಸಿದ್ದ ದಾಳಿಂಬೆಗಿಡಗಳಲ್ಲಿ ಮೂರು ಸಾವಿರ ಗಿಡಗಳನ್ನು ಬೇರು ಸಮೇತ ಬೇರೆ ಜಮೀನಿಗೆ ಸ್ಥಳಾಂತರಿಸುವ ಸಾಹಸಕ್ಕೆ ಕೈ ಹಾಕಿ ಇತರೆ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ಲಿಂಗಸುಗೂರು ಪಟ್ಟಣದ ಪ್ರಗತಿಪರ ರೈತ ಬಸವರಾಜಗೌಡ ಗಣೇಕಲ್‌ ಅವರೇ ಈ ಸಾಹಸಕ್ಕೆ ಕೈ ಹಾಕಿದವರು. ಅವರು ತಾಲೂಕಿನ ನೀರಲಕೇರಾ ಗ್ರಾಮದ ಬಳಿ ತಮ್ಮ 22 ಎಕರೆ ಜಮೀನಿನಲ್ಲಿ 2014ರಲ್ಲಿ 10 ಸಾವಿರ ದಾಳಿಂಬೆ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳು ಸದ್ಯ 10 ಅಡಿ ಎತ್ತರಕ್ಕೆ ಬೆಳೆದಿವೆ. ಇದರಲ್ಲಿ ಮೂರು ಸಾವಿರ ಗಿಡಗಳನ್ನು ಬೇರೆ ಜಮೀನಿಗೆ ಸ್ಥಳಾಂತರಿಸಲು ಮತ್ತು ಎರಡು ಸಾವಿರ ಗಿಡಗಳನ್ನು ತೆಗೆದುಹಾಕಲು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಅವರು ಸುಮಾರು 50ಕ್ಕೂ ಗಿಡಗಳನ್ನು ಪ್ರಾಯೋಗಿಕವಾಗಿ ಬೇರು ಸಮೇತ ಕಿತ್ತು ಬೇರೆಡೆ ನೆಟ್ಟಿದ್ದರು. ಅವು ಉತ್ತಮವಾಗಿ ಬೆಳೆದು ಫಲ ನೀಡುತ್ತಿವೆ. ಇದರಿಂದ ಸ್ಫೂರ್ತಿ ಪಡೆದು ಈಗ ಮೂರು ಸಾವಿರ ಗಿಡಗಳನ್ನು ಬೇರೆ ಜಮೀನಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ತೋಟಗಾರಿಕೆ ಇಲಾಖೆ ಮತ್ತು ಕೃಷಿ ತಜ್ಞರ ಸಲಹೆಯನ್ನು ಪಡೆದಿದ್ದಾರೆ.

ಏಕೆ ಸ್ಥಳಾಂತರ: ಆರು ವರ್ಷದ ಗಿಡಗಳು ಸದ್ಯ 10 ಅಡಿ ಬೆಳೆದುನಿಂತಿವೆ. ಆದರೆ ಇಳುವರಿ ಕುಂಠಿತಗೊಂಡಿದ್ದರಿಂದ 10 ಸಾವಿರ ಗಿಡಗಳ ಪೈಕಿ ಮೂರುಸಾವಿರ ಗಿಡಗಳನ್ನು ಬೇರು ಸಮೇತ ಕಿತ್ತು ನಾಲ್ಕು ಕಿ.ಮೀ. ದೂರದ ಕರಡಕಲ್‌ ಹೊರಭಾಗ ಘನತ್ಯಾಜ್ಯ ವಿಲೇವಾರಿ ಘಟಕದ ಎದುರಿನ 10 ಎಕರೆ ಜಮೀನಿಗೆ ತಂದು ನೆಡಲಾಗುತ್ತಿದೆ. ಇದಕ್ಕಾಗಿ 20 ಲಕ್ಷ ರೂ. ವ್ಯಯಿಸುತ್ತಿದ್ದು, ಈಗಾಗಲೇ ಒಂದು ಸಾವಿರ ಗಿಡಗಳನ್ನು ನಡೆಲಾಗಿದೆ.

ಕಾರ್ಯಾಚರಣೆ ಹೇಗೆ?: ನೀರಲಕೇರಾ ಬಳಿಯ 22 ಎಕರೆ ಜಮೀನಿನಲ್ಲಿ ದಾಳಿಂಬೆ ಗಿಡದ ಸುತ್ತಲು ಗುಂಡಿ ತೆಗೆದು ಅದಕ್ಕೆ ನೀರು ಹಾಕಿ ಮಣ್ಣು ಹಾಗೂ ಬೇರುಗಳನ್ನು ಸಡಿಲಿಸಲಾಗಿದೆ. ಅದೇ ರೀತಿ ಕರಡಕಲ್‌ ಬಳಿಯ ಜಮೀನಿನಲ್ಲೂ ಬೇರು ಸಮೇತ ದಾಳಿಂಬೆ ಗಿಡ ನೆಡಲು ಗುಂಡಿಗಳನ್ನು ತೋಡಲಾಗಿದೆ. ಎರಡು ದಿನಗಳ ಮೊದಲೇ ನೀರು ಹರಿಸಲಾಗಿದೆ. ತಾಯಿ ಬೇರು ಹಾಗೂ ಮಣ್ಣು ಸಹಿತವಾಗಿ ಗಿಡಗಳನ್ನು ಹಿಟಾಚಿ ಮೂಲಕ ಕಿತ್ತು ಒಂದು ಟ್ರ್ಯಾಕ್ಟರ್‌ನಲ್ಲಿ ಆರು ಗಿಡಗಳಂತೆ ಕರಡಕಲ್‌ ಬಳಿಯ ಜಮೀನಿಗೆ ತಂದು ಗುಂಡಿಯಲ್ಲಿ ನಡೆಲಾಗಿದೆ. ಈ ಗುಂಡಿಗೆ ಕ್ರಿಮಿನಾಶಕ, ಗೊಬ್ಬರ ಹಾಕಿ ನೆಟ್ಟ ಗಿಡಗಳನ್ನು ಸಂರಕ್ಷಿಸುವ ಕೆಲಸ ನಡೆದಿದೆ.

ಬಹುತೇಕರು ಬೆಳೆ ಹಾನಿ, ಕೃಷಿ ದುಬಾರಿ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಗಣೇಕಲ್‌ ಅವರು ಹೊಸ ಪ್ರಯತ್ನಕ್ಕೆ ಕೈಹಾಕಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಮೂರು ಸಾವಿರ ಗಿಡಗಳನ್ನು ಕಿತ್ತಲು ಎರಡು ಹಿಟಾಚಿ ಬಳಸುತ್ತಿದ್ದಾರೆ. ಗಿಡಗಳನ್ನು ಬೇರೆ ಜಮೀನಿಗೆ ಸಾಗಿಸಲು ಆರು ಟ್ರ್ಯಾಕ್ಟರ್‌ಗಳನ್ನು ಬಳಸುತ್ತಿದ್ದಾರೆ. ಸುಮಾರು 80 ಕೂಲಿ ಕಾರ್ಮಿಕರು ಕಳೆದ ವಾರದಿಂದ ಕೆಲಸ ಮಾಡುತ್ತಿದ್ದಾರೆ.

Advertisement

ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next