Advertisement

13 ಕಡೆಗಳಲ್ಲಿ ತೊಗರಿ ಖರೀದಿ ಕೇಂದ್ರ ಆರಂಭ

06:23 PM Feb 10, 2020 | Naveen |

ಲಿಂಗಸುಗೂರು: ತಾಲೂಕಿನ ವಿವಿಧೆಡೆ 13 ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಈಗಾಗಲೇ 6 ಸಾವಿರ ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.

Advertisement

ಪಟ್ಟಣದ ಎಪಿಎಂಸಿಯಲ್ಲಿ ರವಿವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ 13 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 6 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. ಪ್ರತಿ ಪಹಣಿಗೆ 10 ಕ್ವಿಂಟಲ್‌ ಖರೀದಿಗೆ ಅವಕಾಶವಿದ್ದು, ಇದನ್ನು 20 ಕ್ವಿಂಟಲ್‌ಗೆ ಹೆಚ್ಚಿಸುವಂತೆ ಕಲುಬುರಗಿಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಎರಡ್ಮೂರು ದಿನದಲ್ಲಿ ಈ ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಭತ್ತದ ಬೆಲೆ ಕುಸಿದಿದ್ದರಿಂದ ಸರ್ಕಾರದಿಂದಲೇ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಭತ್ತ ಖರೀದಿ ಕೇಂದ್ರ ತೆರೆಯುವಂತೆ ಇಲ್ಲಿನ ರೈತರು ಒತ್ತಾಯಿಸುತ್ತಿದ್ದಾರೆ. ಅದ್ದರಿಂದ ಕೇಂದ್ರ ಆರಂಭಿಸಲು ರೈತರ ನೋಂದಣಿ ಕಾರ್ಯ ಆರಂಭಿಸಿ ಎಷ್ಟು ರೈತರು ನೋಂದಣಿ ಮಾಡಿಸುತ್ತಾರೋ ನೋಡಿಕೊಂಡು ಅಷ್ಟು ಕೇಂದ್ರಗಳನ್ನು ತೆರೆಯಲು ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಗಿದ್ದು, ಇದಕ್ಕೆ ಸಿದ್ಧತೆ ನಡೆದಿದೆ ಎಂದರು.

ಸಹಕಾರಿ ಕ್ಷೇತ್ರ ಅ ಧಿಕಾರಿ ಶೇಖ್‌ಹುಸೇನ್‌ ಮಾತನಾಡಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಭತ್ತ ಖರೀದಿಸಲಾಗುತ್ತಿದೆ. 1,210 ಅರ್ಜಿಗಳು ಬಂದಿವೆ. ನಾಳೆಯಿಂದ ಖರೀದಿ ಕಾರ್ಯ ಆರಂಭಿಸಲಾಗುವುದು ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಶಶಿಧರ ಪಾಟೀಲ, ಎಪಿಎಂಸಿ ಅಧ್ಯಕ್ಷ ಜಂಬನಗೌಡ ಕಾಚಾಪುರ, ಮುಖಂಡರಾದ ಪಾಮಯ್ಯ ಮುರಾರಿ, ಮಹ್ಮದ್‌ ರಫಿ, ಚೆನ್ನಾರೆಡ್ಡಿ ಬಿರಾದಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next