ಲಿಂಗಸುಗೂರು: ಮನುಷ್ಯ ಸತ್ತ ನಂತರ ಶವ ಸಂಸ್ಕಾರಕ್ಕೆ ಕನಿಷ್ಠ ಮೂರಡಿ-ಆರಡಿ ಭೂಮಿ ಬೇಕು. ಆದರೆ ತಾಲೂಕಿನ 70ಕ್ಕೂ ಅಧಿಕ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಮೂರಡಿ ಭೂಮಿ ಇಲ್ಲ…! ಇದು ನಿಜ, ತಾಲೂಕಿನ ಸುಮಾರು 70ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿಯೇ ಇಲ್ಲ. ಈ ಗ್ರಾಮಗಳಲ್ಲಿ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಕುಟುಂಬದವರಿಗೆ ಅಗಲಿಕೆಯ ದುಃಖ ಒಂದೆಡೆಯಾದರೆ, ಮತ್ತೂಂದೆಡೆ ಅಂತ್ಯ ಸಂಸ್ಕಾರ ಎಲ್ಲಿ ನಡೆಸಬೇಕೆಂಬ ನೋವು ಮನೆಯವರ ಜೊತೆ ಊರವರನ್ನೂ ಕಾಡುತ್ತಿದೆ.
ಗ್ರಾಮಗಳಲ್ಲಿ ಹೊಲ, ತೋಟ ಇರುವವರು ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಹೇಗೋ ತಮ್ಮ ಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸುತ್ತಾರೆ. ಆದರೆ ತುಂಡು ಭೂಮಿ ಇಲ್ಲದವರು, ಬಡವರ ಮನೆಯಲ್ಲಿ ನಿಧನರಾದರೆ ಶವ ಸಂಸ್ಕಾರಕ್ಕೆ ಜಾಗೆ ಹುಡುಕುವುದೇ ಸಮಸ್ಯೆ. ಸತ್ತವರಿಗೆ ಮುಕ್ತಿ ದೊರಕಿಸಲು ಊರಿಗೊಂದು ಸ್ಮಶಾನ ಇರಬೇಕು ಎಂಬ ಕಾರಣಕ್ಕೆ ಬಹಳ ಹಿಂದಿನಿಂದಲೂ ಪ್ರತಿ ಊರಲ್ಲಿ ಸ್ಮಶಾನ ಭೂಮಿ ಗುರುತಿಸಲಾಗುತ್ತಿತ್ತು.
ಊರುಗಳು ಬೆಳೆದಂತೆ, ಬಡಾವಣೆಗಳಾದ ಬಳಿಕ ಮನೆ, ಕಟ್ಟಡಗಳು ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತೇ ಹೊರತು ಸ್ಮಶಾನಕ್ಕೆ ಭೂಮಿ ಗುರುತಿಸುವಲ್ಲಿ ಆಳುವವರು, ಸರ್ಕಾರ, ಅಧಿಕಾರಿಗಳು, ಸಮುದಾಯ ನಿರ್ಲಕ್ಷಿಸುತ್ತ ಬಂದ ಪರಿಣಾಮ ಈಗ ಶವ ಸಂಸ್ಕಾರವೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸತ್ತರೆ ಶವ ಹೂಳಲು ಮೂರಡಿ ಅಡಿ ಜಾಗ ಇಲ್ಲದ ಮೇಲೆ ಎಷ್ಟು ಆಸ್ತಿ ಮಾಡಿದರೆ ಏನು ಪ್ರಯೋಜನ ಎಂಬುದು ಹಿರಿಯರ ಮಾತಾಗಿದೆ. ಇದ್ದಾಗ ಸುಖಪಡಲಿಲ್ಲ ಸತ್ತಾಗಲಾದರೂ ಗೊಂದಲ ಗೋಜಲುಗಳಿಲ್ಲದೆ ಮುಕ್ತಿ ಕೊಡಿ ಎಂದು ಹಿರಿಯರು ಹೇಳುತ್ತಾರೆ. ಆದರೆ ಅಂತ್ಯಸಂಸ್ಕಾರಕ್ಕೆ ಕನಿಷ್ಠ ಜಾಗವೂ ಇಲ್ಲದಿರುವುದು ಮತ್ತಷ್ಟು ನೋವು ತರುವಂತಾಗಿದೆ.
ಲಿಂಗಸುಗೂರು ಪಟ್ಟಣದಲ್ಲಿ ಕೆಲವು ಸಮುದಾಯಗಳಿಗೆ ಸಶ್ಮಾನವೇ ಇಲ್ಲ. ಕರಡಕಲ್ ಕೆರೆ ತಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಹುಲಿಗುಡ್ಡ ಗ್ರಾಮಸ್ಥರು ಅರಣ್ಯ ಭೂಮಿಯಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗೆ ಇದ್ದರೂ ಸಶ್ಮಾನಕ್ಕೆ ಜಾಗ ಇಲ್ಲದಾಗಿದೆ.
ಗುರುತಿಸುವಿಕೆಯಲ್ಲಿ ಕಾಲಹರಣ: ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ನೀಡುವ ಬಗ್ಗೆ ಕಂದಾಯ ಇಲಾಖೆ ಜಾಗ ಗುರುತಿಸುವುದರಲ್ಲೇ ಕಾಲಹರಣ ಮಾಡುತ್ತಿದೆ ವಿನಃ ಜಾಗ ಗುರುತಿಸುವ ಕೆಲಸ ನಡೆಯುತ್ತಿಲ್ಲ. ಇದಲ್ಲದೆ ಸರ್ಕಾರ ನಿಗದಿಪಡಿಸಿದ ಬೆಲೆಗೆ ಭೂಮಿ ಮಾರಾಟ ಮಾಡಲು ಯಾರೂ ಮುಂದೆ ಬರದ ಹಿನ್ನೆಲೆಯಲ್ಲಿ ಸಶ್ಮಾನಕ್ಕೆ ಜಾಗವೂ ಇಲ್ಲಿ ಗಗನ ಕುಸಮವಾಗಿದೆ. ತಾಲೂಕು ಆಡಳಿತ ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗೆ ಒದಗಿಸಲು ಮುಂದಾಗಬೇಕಿದೆ.