Advertisement

ಆರ್ಭಟಿಸಿದ ಕೃಷ್ಣಾ ಈಗ ಶಾಂತ

11:11 AM Aug 21, 2019 | Team Udayavani |

ಶಿವರಾಜ ಕೆಂಭಾವಿ
ಲಿಂಗಸುಗೂರು:
ಕಳೆದ ತಿಂಗಳೊಪ್ಪತ್ತಿನಿಂದ ಕೃಷ್ಣಾ ನದಿ ಆರ್ಭಟಿಸಿ ತೀರದ ಜನರಲ್ಲಿ ಆತಂಕ ಸೃಷ್ಠಿಸಿ ಈಗ ಶಾಂತವಾಗಿದ್ದು, ಪ್ರವಾಹದಲ್ಲಿ ಬದುಕು ಕಳೆದುಕೊಂಡ ಸಂತ್ರಸ್ಥರು ಸರ್ಕಾರದ ನೆರವಿನತ್ತ ಮುಖ ಮಾಡಿದ್ದಾರೆ.

Advertisement

ಜುಲೈ 25ರಂದು ಬಸವಸಾಗರ ಜಲಾಶಯದಿಂದ 10 ಸಾವಿರ ಕ್ಯೂಸೆಕ್‌ ನೀರು ಹೊರ ಹರಿವಿನಿಂದ ಆರಂಭವಾಗಿ 6.30 ಲಕ್ಷ ಕ್ಯೂಸೆಕ್‌ ನೀರು ಹರಿದು ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ. ಜಲಾಶಯದಿಂದ ಹೊರ ಹರಿವು ಮಂಗಳವಾರ ಸಂಪೂರ್ಣ ಬಂದ್‌ ಮಾಡಿದ್ದರಿಂದ ಕೃಷ್ಣಾ ನದಿ ಆರ್ಭಟ ಸಂಪೂರ್ಣ ತಗ್ಗಿದೆ.

ಅನೇಕ ದಶಕಗಳಿಂದ 6.30 ಲಕ್ಷ ಕ್ಯೂಸೆಕ್‌ ನೀರು ಬಸವಸಾಗರ ಜಲಾಶಯಕ್ಕೆ ಬಂದ ಹಾಗೂ ಹೊರಕ್ಕೆ ಹರಿಸಿದ ಉದಾಹರಣೆಗಳು ಇಲ್ಲ. ಆದರೆ ಈ ವರ್ಷ ಪ್ರವಾಹ ಆರ್ಭಟ ಜೋರಾಗಿತ್ತು. ಇದರಿಂದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳ ನದಿತೀರದ ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ಅಲ್ಲಿನ ಜನರ ಬದುಕು ಮೂರಾಬಟ್ಟೆಗೊಳಿಸಿ ಈಗ ಕೃಷ್ಣಾ ಮೌನಕ್ಕೆ ಶರಣಾಗಿದೆ.

ಪ್ರವಾಹದಿಂದ ಅನೇಕ ಜನರು ತಮ್ಮ ಹೊಲದಲ್ಲಿ ಬೆಳೆದ ಬೆಳೆ, ಮನೆ, ಮನೆಯಲ್ಲಿನ ಬಟ್ಟೆಬರೆ, ಬೆಲೆಬಾಳುವ ವಸ್ತುಗಳು, ಮೇವು, ಜಾನುವಾರುಗಳನ್ನು ಕಳೆದುಕೊಳ್ಳುವಂತಾಗಿದೆ. ಸಂತ್ರಸ್ತರ ಬದುಕು ಅತಂತ್ರಕ್ಕೆ ಸಿಲುಕಿದಂತಾಗಿದೆ.

ತಾಲೂಕಿನ ಕೆಲವು ನದಿ ತೀರದ ಗ್ರಾಮಗಳಲ್ಲಿ ಸಂತ್ರಸ್ತರಾಗಿರುವ ಜನರಿಗೆ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿಸಲಾಗಿದೆ. ಆದರೆ ಸಂತ್ರಸ್ತರು ಬೆಳೆ ಪರಿಹಾರ, ಮನೆ ಪುನರ್‌ ನಿರ್ಮಾಣ, ಜಾನುವಾರು ಕಳೆದ ಕೊಂಡುವವರಿಗೆ ಪರಿಹಾರ ಹಾಗೂ ನಡುಗಡ್ಡೆ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆ ಗ್ರಾಮಗಳ ಸ್ಥಳಾಂತರ. ಗೋನವಾಟ್ಲ-ಕಡದರಗಡ್ಡಿ ಸೇತುವೆ ನಿರ್ಮಾಣ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದಲ್ಲ ಹತ್ತಾರು ಭರವಸೆಗಳನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಈ ಎಲ್ಲ ಭರವಸೆಗಳು ಈಡೇರಿಕೆಯತ್ತ ಸಂತ್ರಸ್ತರು ಮುಖ ಮಾಡಿ ಕಾತರರಾಗಿದ್ದಾರೆ. 2009ರಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ಸಿಲುಕಿದ್ದ ಚಿಕ್ಕ ಉಪ್ಪೇರಿ, ಸುಣಕಲ್ ಗ್ರಾಮಗಳ ಸಂತ್ರಸ್ತರಿಗಾಗಿ 367 ಮನೆಗಳನ್ನು ಗ್ರಾಮಗಳ ಹೊರಭಾಗದಲ್ಲಿ ಹಟ್ಟಿ ಚಿನ್ನದ ಗಣಿ ಸಹಯೋಗದಲ್ಲಿ ನಿರ್ಮಿಸಲಾಗಿತ್ತು. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಾಗಿದೆ. ಸುಣಕಲ್ ಗ್ರಾಮದ ಆಸರೆ ಮನೆಗಳಲ್ಲಿ ಕೆಲವೇ ಕೆಲವು ಕುಟಂಬಗಳು ಹರುಕು-ಮುರುಕು ಆಸರೆ ಮನೆಗಳಲ್ಲಿ ಕ್ರಿಮಿಕಿಟ, ವಿಷಜಂತುಗಳ ಮಧ್ಯೆ ಅನಿವಾರ್ಯವಾಗಿ ವಾಸ ಮಾಡುತ್ತಿದ್ದಾರೆ. ಇನ್ನೂ ಚಿಕ್ಕ ಉಪ್ಪೇರಿ ಗ್ರಾಮಗಳಲ್ಲಿ ಆಸರೆ ಮನೆಗಳ ಇನ್ನೂ ಸಂತ್ರಸ್ತರಿಗೆ ಹಸ್ತಾಂತರಿಸಿಲ್ಲ. ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸದೇ ಇರುವುದು ರ್ದುದೈವದ ಸಂಗತಿಯಾಗಿದೆ.

Advertisement

2009ರಲ್ಲಿನ ಹಾಗೂ ಈ ವರ್ಷದ ಪ್ರವಾಹ ಸಂತ್ರಸ್ತರ ಅನುಭವಿಸಿದ ಯಾತನೆಯನ್ನು ದೂರ ಮಾಡಲು ತಾಲೂಕಿನ ಅಧಿಕಾರಿಗಳು ಕಾಳಜಿ ವಹಿಸಿ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಮಾಡಬೇಕಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next