Advertisement

ಬಸವಸಾಗರ ಉದ್ಯಾನ ಅಭಿವೃದ್ಧಿ ಯಾವಾಗ?

10:47 AM Jun 05, 2019 | Naveen |

ಲಿಂಗಸುಗೂರು: ನಾಡಿನ ಎಲ್ಲ ಜಲಾಶಯಗಳಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಆದರೆ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಮಾತ್ರ ಈವರೆಗೆ ಈ ಭಾಗ್ಯ ಇಲ್ಲದಾಗಿದ್ದು, ಇಲ್ಲಿನ ಜಲಾಶಯ ಬರೀ ಜಾಲಿಗಿಡಗಳಿಂದ ಕಂಗೊಳಿಸುತ್ತಿದೆ!

Advertisement

1982ರಲ್ಲಿ ನಾಡಿಗೆ ಸಮರ್ಪಣೆಗೊಂಡ ನಾರಾಯಣಪುರ ಬಸವಸಾಗರ ಜಲಾಶಯ ರಾಜ್ಯದ ಮೂರನೇ ದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದಿದೆ. ಇದು ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಬಸವಸಾಗರ ಜಲಾಶಯ ನಿರ್ಮಾಣಕ್ಕಾಗಿ ಲಿಂಗಸುಗೂರು, ಮುದ್ದೇಬಿಹಾಳ ಹಾಗೂ ಸುರಪುರ ತಾಲೂಕುಗಳ ಒಟ್ಟು 77 ಹಳ್ಳಿಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ.

ಆಲಮಟ್ಟಿ ಜಲಾಶಯದಲ್ಲಿ 1993-94ರಿಂದ ಈವರೆಗೆ ಮೂರು ಹಂತದಲ್ಲಿ 33,506 ಎಕರೆ ಪ್ರದೇಶದಲ್ಲಿ ವಿವಿಧ ಉದ್ಯಾನವನಗಳನ್ನು ನಿರ್ಮಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಬಸವಸಾಗರ ಜಲಾಶಯ ನಾಡಿಗೆ ಸಮರ್ಪಣೆಗೊಂಡು 36 ವರ್ಷ ಗತಿಸಿದರೂ ಈವರೆಗೂ ಪ್ರವಾಸಿಗರನ್ನು ಆರ್ಕಷಿಸುವಂತಹ ಉದ್ಯಾನವನ ಅಥವಾ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ.

ಎಲ್ಲಿ ನೋಡಿದಲ್ಲಿ ಜಾಲಿಗಿಡ: ಬಸವಸಾಗರ ಜಲಾಶಯ ಮುಂಭಾಗದ ನೂರಾರು ಎಕರೆ ಜಮೀನು ಪಾಳು ಬಿದ್ದಿದ್ದು, ಎಲ್ಲಿ ನೋಡಿದಲ್ಲಿ ಮುಳ್ಳಿನ ಜಾಲಿಗಿಡಗಳು ಹೆಮ್ಮರವಾಗಿ ಬೆಳೆವೆ. ಇದು ಬಸವಸಾಗರ ಜಲಾಶಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಲ್ಲಿ ಬೇಸರ ಮೂಡಿಸುತ್ತಿದೆ. ಈ ಪ್ರದೇಶದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಅನುಕೂಲವಾಗಲಿದೆ.

ನಾಡಿನಲ್ಲಿರುವ ಎಲ್ಲ ಜಲಾಶಯಗಳಲ್ಲಿ ಉದ್ಯಾನವನ ನಿರ್ಮಿಸಿ ಅಣೆಕಟ್ಟೆಗಳ ಸೌಂದರ್ಯ ಹೆಚ್ಚಿಸಲಾಗಿದೆ. ಆದರೆ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಈ ಭಾಗ್ಯ ಇಲ್ಲದಾಗಿದೆ. ಈ ಹಿಂದಿನ ಸರಕಾರದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದವರೇ ಪ್ರವಾಸೋದ್ಯಮ, ಜಲಸಂಪನ್ಮೂಲ ಸಚಿವರಾಗಿದ್ದರೂ ಬಸವಸಾಗರ ಜಲಾಶಯ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಇಂದು ಜಲಾಶಯದ ನೂರಾರು ಎಕರೆ ಜಮೀನು ಪಾಳುಬಿದ್ದಿದೆ. ಇಲ್ಲಿ ಉದ್ಯಾನ ನಿರ್ಮಾಣ ಮಾಡುವುದು ಒಂದು ಕಡೆ ಇರಲಿ ಇಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ ಇನ್ನಿತರ ಗಿಡಗಳನ್ನು ಬೆಳೆಸುವುದಕ್ಕೂ ಇಲ್ಲಿನ ಅಧಿಕಾರಿಗಳು ಮುಂದಾಗದೇ ಇರುವುದು ಇಲ್ಲಿನ ಜನರ ದೌರ್ಬಾಗ್ಯವೇ ಸರಿ.

Advertisement

ನರ್ಸರಿ: ಜಲಾಶಯದ ಬಲಭಾಗದಲ್ಲಿ ಆಲಮಟ್ಟಿ ಅರಣ್ಯ ವಿಭಾಗದ ರೋಡಲಬಂಡಾ ವಲಯದಲ್ಲಿ ಬಸವಸಾಗರ ನರ್ಸರಿ ಇದೆ. ಇಲ್ಲಿ 50 ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಅವುಗಳನ್ನು ಆಲಮಟ್ಟಿ ಉದ್ಯಾನ ಸೇರಿ ಇನ್ನಿತರ ಕಡೆಗೆ ರವಾನಿಸಲಾಗುತ್ತಿದೆ. ಇಲ್ಲಿ ಬೆಳೆದ ಸಸಿಗಳು ಆಲಮಟ್ಟಿ ಉದ್ಯಾನಕ್ಕೆ ಬೇಕು. ಆದರೆ ಬಸವಸಾಗರ ಜಲಾಶಯಕ್ಕೆ ಮಾತ್ರ ಉದ್ಯಾನ ಭಾಗ್ಯ ಇಲ್ಲದಿರುವುದು ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ.

ಪ್ರವಾಸಿ ತಾಣಗಳು: ನಾರಾಯಣಪುರ ಜಲಾಶಯದಲ್ಲಿ ಉದ್ಯಾನ ಅಭಿವೃದ್ಧಿಪಡಿಸಿದರೆ ಈ ಭಾಗದಲ್ಲಿರುವ ಇತರೆ ಪ್ರವಾಸಿ ತಾಣಗಳ ವೀಕ್ಷಣೆಗೂ ಜನರು ಹರಿದುಬರುವಂತಾಗಲಿದೆ. ತಾಲೂಕಿನ ಜಲದುರ್ಗ ಕೋಟೆ, ಛಾಯಾಭಗವತಿ, ಚಾಲುಕ್ಯ ಶೈಲಿಯ ಜಡೆ ಶಂಕರಲಿಂಗೇಶ್ವರ ದೇವಸ್ಥಾನ ಸೇರಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಣ್ಣಪುಟ್ಟ ಪ್ರವಾಸಿ ತಾಣಗಳು ಜಲಾಶಯಕ್ಕೆ ಹತ್ತಿರದಲ್ಲಿವೆ. ಮತ್ತಷ್ಟು ಪ್ರವಾಸಿಗರನ್ನು ಇತ್ತ ಸೆಳೆಯುವ ಉದ್ದೇಶದಿಂದ ಇಲ್ಲಿ ಉದ್ಯಾನವನ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಆಲಮಟ್ಟಿ ಮಾದರಿಯಲ್ಲೇ ಇಲ್ಲೂ ಕೂಡಾ ಉದ್ಯಾನವನ ನಿರ್ಮಾಣ ಮಾಡಬೇಕೆಂಬುದು ಇಲ್ಲಿನ ಪ್ರವಾಸಿಗರ ಒತ್ತಾಯವಾಗಿದೆ.

ಬಸವಸಾಗರ ಜಲಾಶಯದ ಮುಂಭಾಗದಲ್ಲಿ ನೂರಾರು ಎಕರೆ ಜಾಗ ಈಗ ಪಾಳು ಬಿದ್ದಿದೆ. ಉದ್ಯಾನ ನಿರ್ಮಿಸಿದರೆ ನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರ ಸುತ್ತಮುತ್ತಲಿನ ಐತಿಹಾಸಿಕ ತಾಣಗಳಿಗೆ ಹೆಚ್ಚಿನ ಮನ್ನಣೆ ನೀಡಿದಂತಾಗುತ್ತಿದೆ. ಸರ್ಕಾರ ಉದ್ಯಾನ ನಿರ್ಮಿಸಲು ಮುಂದಾಗಬೇಕು.
ಅನಿಲ ಅಲಬನೂರ, ಪ್ರವಾಸಿಗ

ಬಸವಸಾಗರ ಜಲಾಶಯಕ್ಕೆ ಮತ್ತಷ್ಟು ಮೆರಗು ನೀಡಲು ಉದ್ಯಾನವನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶ್ವಬ್ಯಾಂಕ್‌ ನೆರವು ದೊರೆಯುವ ವಿಶ್ವಾಸವಿದೆ.
ಆರ್‌.ಎಲ್. ಹಳ್ಳೂರು
ಜೆಇ ಆಣೆಕಟ್ಟು ವಿಭಾಗ

ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next