ಲಿಂಗಸುಗೂರು: ತಾಲೂಕಿನ ದೇವರ ಭೂಪುರ ಗ್ರಾಮದಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಅನುಸರಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಎಸ್. ಪ್ರಸನ್ನಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ರೋಗಿಗಳಿಗೆ ತೊಂದರೆಯಾಗದಂತೆ ಶುದ್ಧ ನೀರು ಪೂರೈಸಬೇಕು. ಆಸ್ಪತ್ರೆಗೆ ಅಗತ್ಯ ಕೆಲಸಗಳಿಗೆ ಬಳಕೆದಾರರ ನಿಧಿಯಿಂದ ಅನುದಾನ ಬಳಸಿಕೊಳ್ಳಬೇಕೆಂದು ಮುಖ್ಯ ವೈದ್ಯಾಧಿಕಾರಿ ಡಾ| ಲಕ್ಷ್ಮಪ್ಪ ಅವರಿಗೆ ಸೂಚಿಸಿದರು.
ದೇವರಭೂಪುರದಲ್ಲಿ ವಾಂತಿ- ಭೇದಿ ಪ್ರಕರಣ ಕಂಡುಬಂದಿದ್ದು, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆಗೆ ಕ್ರಮವಹಿಸಿ ವಾಂತಿ-ಭೇದಿ ಪ್ರಕರಣಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ್‌ಗೆ ಸೂಚಿಸಿದರು.
ಪಟ್ಟಣದಲ್ಲಿ ಕುಡಿವ ನೀರಿನ ಪೈಪ್ ಗಳು ಸೋರುತ್ತಿದ್ದು, ಅವುಗಳನ್ನು ದುರಸ್ತಿ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ಮುತ್ತಪ್ಪಗೆ ತಿಳಿಸಿದರು. ಇದಕ್ಕೂ ಮುನ್ನ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಿಗಾವಹಿಸ ಲಾಗಿದೆ. ರೈತರು ಬೆಳೆ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಬೆಳೆ ಸಾಗಿಸಲು ಚೆಕ್ ಪೋಸ್ಟ್‌ನಲ್ಲಿ ತಡೆಯುವಂತಿಲ್ಲ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಇದ್ದರು.