ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಮಾರ್ಗದ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಜೊತೆಗೆ ಈ ಭಾಗದ ಜನರ ನೀರಿನ ಅಗತ್ಯತೆ ಬಗ್ಗೆ ಸಹ ಗಮನ ಹರಿಸುವುದು ಒಳ್ಳೆಯದು ಎಂದರು.
ಈ ಭಾಗದ ಜನರ ನೀರಿನ ಕೊರತೆಯನ್ನು ಬಗೆಹರಿಸಿ ಬೆಂಗಳೂರಿಗೆ ಒಯ್ಯುವ ಬಗ್ಗೆ ಯೋಚಿಸಲಿ. ಜೊತೆಗೆ ನೀರು ತೆಗೆದುಕೊಂಡು ಹೋಗುವ ಬಗ್ಗೆ ಸ್ಥಾನಿಕ ಜನರು, ಪರಿಸರ ಸಂಘಟನೆಗಳ ಜೊತೆ ಚರ್ಚೆಯೇ ನಡೆಸಿಲ್ಲ. ಏಕಾಏಕಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಅಪಾರ ವೆಚ್ಚ ಮಾಡುವ ತೀರ್ಮಾನವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಹಣಕ್ಕಾಗಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನುವ ಅನುಮಾನ ಬರುತ್ತಿದೆ. ಚರ್ಚೆಯಾಗದೆ ಇಂತಹ ತೀರ್ಮಾನ ಮಾಡಿದರೆ ಈ ಭಾಗದ ಜನರ ತೀವ್ರ ವಿರೋಧ ಸರ್ಕಾರ ಎದುರಿಸಬೇಕಾಗುತ್ತದೆ. ಬಿಜೆಪಿ ಸಹ ಇದರ ಬಗ್ಗೆ ಚಿಂತನೆ ನಡೆಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಜಾಯಮಾನವೇ ಸುಳ್ಳಿನಿಂದ ಕೂಡಿರುವಂತಹದ್ದು. ಪದೇಪದೇ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮೂಡಾ ಹಗರಣ ಮೂಲಕ ಮಾಡಿರುವ ಭ್ರಷ್ಟಾಚಾರ ಜಗಜ್ಜಾಹೀರವಾಗಿದೆ. ಮೂಡಾ ಹಗರಣದ ವಾಸ್ತವಾಂಶವನ್ನು ಜನರಿಗೆ ತಿಳಿಸಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಿಸುವ ಕೆಲಸವನ್ನು ಬಿಜೆಪಿ ಮಾಡಿಯೇ ಮಾಡುತ್ತದೆ ಎಂದು ಹೇಳಿದರು.
ಸ್ನೇಹಕ್ಕೆ ಸಮಸ್ಯೆಯಾಗದ ವಿಪಕ್ಷ
ತಾಲೂಕಿನ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಚೇತನ್‌ರಾಜ್ ಕಣ್ಣೂರು ಅವರನ್ನು ಬಿಜೆಪಿ ಶಾಸಕ ಚನ್ನಬಸಪ್ಪ ಭೇಟಿಯಾದಾಗ ಯಾವ ಗೊಂದಲಗಳಿಗೆ ಅವಕಾಶವಿಲ್ಲದೆ ಹೃತ್ಪೂರ್ವಕವಾಗಿ ಅವರನ್ನು ಆಲಂಗಿಸಿ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು.