ತಂಜಾವೂರು: ತಮಿಳುನಾಡಿನ ತಂಜಾವೂರ್‌ನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್‌ನಲ್ಲಿ ಇದ್ದ 500 ಕೋಟಿ ರೂ. ಮೌಲ್ಯದ ಪಚ್ಚೆ ಮತ್ತು ಹರಳುಯುಕ್ತ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್.ಅರುಣ ಭಾಸ್ಕರ ಎಂಬಾತನನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮನೆಯೊಂದರಲ್ಲಿ ದೇಗುಲಗಳಲ್ಲಿನ ಹಳೆಯ ವಿಗ್ರಹಗಳ ಮಾರಾಟದ ಜಾಲ ನಡೆಯುತ್ತಿದೆ ಎಂಬ ಬಗ್ಗೆ ಸುಳಿವು ಪೊಲೀಸರಿಗೆ ಲಭಿಸಿತ್ತು. ಅದರ ಆಧಾರದ ಮೇಲೆ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್.ರಾಜಾರಾಮ್ ಮತ್ತು ಇತರ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅರುಣ ಭಾಸ್ಕರ ತನ್ನ ತಂದೆ ಎನ್.ಎ.ಸಾಮಿಯಪ್ಪನ್ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ರೂ. ಮೌಲ್ಯದ ಶಿವಲಿಂಗ ಇರುವ ಬಗ್ಗೆ ಮಾಹಿತಿ ನೀಡಿದ್ದ. ಅದರ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೇ ಇದ್ದ ಕಾರಣ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್: ಕಾನ್ವೆ ಶತಕ; ಚೇತರಿಸಿದ ಕಿವೀಸ್
ಶಿವಲಿಂಗ ಎಂಟು ಸೆಂಟಿಮೀಟರ್ ಉದ್ದ, 500 ಗ್ರಾಮ್ ಭಾರ ಇದೆ. ತಿರುವರೂರ್ ಜಿಲ್ಲೆಯಲ್ಲಿರುವ ತಿರುಕ್ಕುವಲೈ ಎಂಬಲ್ಲಿರುವ ದೇವಸ್ಥಾನದಿಂದ ಶಿವಲಿಂಗ ಕಳವಾಗಿತ್ತು. ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ ಪತ್ತೆಯಾಗಿರುವ ಶಿವಲಿಂಗ ಆ ದೇಗುಲದ್ದೇ ಎಂದು ಹೇಳಲಾಗುತ್ತಿದೆ.