Advertisement
ಭಾರತೀಯ ಹವಾಮಾನ ಇಲಾಖೆ ಕೂಡ ಮೇ 14ರ ವರೆಗೆ ಕರ್ನಾಟಕವೂ ಸೇರಿ ದೇಶದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಗುಡುಗು ಜತೆಗೆ ಗಾಳಿ-ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಕರ್ನಾಟಕದಲ್ಲಿ ಶನಿವಾರ ಅಪರಾಹ್ನ 2 ಗಂಟೆ ವೇಳೆಗೆ ಮಳೆ ಪ್ರಮಾಣ ಹೆಚ್ಚಾಗಬಹುದು ಎಂದು ಹೇಳಿರುವ ವಿಪತ್ತು ನಿರ್ವಹಣ ಕೇಂದ್ರದ ಅಧಿಕಾರಿಗಳು, ಬೆಳಗ್ಗೆಯೇ ಮತ ಚಲಾಯಿಸುವಂತೆ ತಿಳಿಸಿದ್ದಾರೆ.
ಎಪ್ರಿಲ್ – ಮೇ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆಯೋಗ ಈ ಬಾರಿ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಿತ್ತು. ಆದರೆ ಈಗ ರಾಜ್ಯದ ಹೆಚ್ಚಿನೆಡೆ ಮಳೆಯಾಗುತ್ತಿದ್ದು, ಎಲ್ಲೂ ಬಿಸಿಲಿನ ಅಬ್ಬರ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ಒಂದು ವೇಳೆ ಶನಿವಾರ ಮಳೆ ತೀರಾ ಹೆಚ್ಚಿದಲ್ಲಿ ಅವರನ್ನು ಮತಗಟ್ಟೆಗೆ ಕರೆದು ತರುವ ಕೆಲಸವನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಳೆಯಿಂದಾಗಿ ಇದುವರೆಗೆ ನಡೆಸಿರುವ ಪ್ರಚಾರ, ಸಿದ್ಧತೆಗಳೆಲ್ಲವೂ ನಾಶವಾಗುವ ಸಾಧ್ಯತೆ ಇರುವುದರಿಂದ ಮತದಾರರ ದೂರವಾಣಿ ಸಂಖ್ಯೆ ಸಂಗ್ರಹಿಸಿಟ್ಟು ಅವರನ್ನು ಕರೆತರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಕಾರಣವೇನು ? ಅರಬಿ ಸಮುದ್ರ ಮತ್ತು ಬಂಗಾಲ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಮೋಡಗಳನ್ನು ಸೆಳೆಯುತ್ತಿದೆ. ಹೀಗಾಗಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ವಾರಾಂತ್ಯದಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂಬುದು ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರದ ಅಧಿಕಾರಿಗಳ ಮುನ್ಸೂಚನೆ. ಎಲ್ಲೆಲ್ಲ ಮಳೆ ನಿರೀಕ್ಷೆ ?
ದಕ್ಷಿಣ ಒಳನಾಡು ಪ್ರದೇಶ
ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ. ಮಲೆನಾಡು ಪ್ರದೇಶ
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಸುತ್ತಮುತ್ತಲ ಪ್ರದೇಶಗಳು.