Advertisement

ಮಲೇಷ್ಯಾ ಬ್ಯಾಡ್ಮಿಂಟನ್‌: ಲಿನ್‌ ಡಾನ್‌ಗೆ ಪ್ರಶಸ್ತಿ

10:27 PM Apr 07, 2019 | Sriram |

ಕೌಲಾಲಂಪುರ: ಚೀನಾದ ಆಟಗಾರ ಲಿನ್‌ ಡಾನ್‌ “ಮಲೇಷ್ಯಾ ಓಪನ್‌’ ಪ್ರಶಸ್ತಿ ಜಯಿಸುವ ಮೂಲಕ 2 ವರ್ಷಗಳ ಅನಂತರ ಪ್ರಮುಖ ಕೂಟವೊಂದರ ಚಾಂಪಿಯನ್‌ ಆಗಿ ಮೆರೆದಿದ್ದಾರೆ.

Advertisement

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗ ಫೈನಲ್‌ನಲ್ಲಿ ಲಿನ್‌ ಡಾನ್‌ ತಮ್ಮದೇ ದೇಶದ ಚೆನ್‌ ಲಾಂಗ್‌ ವಿರುದ್ಧ 9-21, 21-17, 21-11 ಗೇಮ್‌ಗಳ ಗೆಲುವು ದಾಖಲಿಸಿದರು. ಇಂಡೋನೇಷ್ಯಾ ಓಪನ್‌, ಜರ್ಮನ್‌ ಓಪನ್‌, ಆಲ್‌ ಇಂಗ್ಲೆಂಡ್‌ ಓಪನ್‌ ಮೊದಲಾದ ಕೂಟಗಳಲ್ಲಿ ಶೀಘ್ರ ನಿರ್ಗಮನ ಕಂಡ ಬಳಿಕ 5 ಬಾರಿಯ ವಿಶ್ವ ಚಾಂಪಿಯನ್‌ ಲಿನ್‌ ಡಾನ್‌ ಅವರಿಗೆ ಈ ಪ್ರಶಸ್ತಿ ಒಲಿದಿದೆ. 78 ನಿಮಿಷಗಳ ಹೋರಾಟದಲ್ಲಿ ಮೊದಲ ಗೇಮ್‌ನಲ್ಲಿ ಹೀನಾಯವಾಗಿ ಸೋತ ಲಿನ್‌ ಡಾನ್‌, ಅನಂತರದ ಎರಡೂ ಗೇಮ್‌ಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಇದು 2017ರ ಮಲೇಷ್ಯಾ ಓಪನ್‌ ಪ್ರಶಸ್ತಿ ಅನಂತರ ಲಿನ್‌ ಡಾನ್‌ ಪಾಲಾದ ಮೊದಲ ಪ್ರಮುಖ ಪ್ರಶಸ್ತಿಯಾಗಿದೆ.

“ಕಳೆದ ವರ್ಷ ನನ್ನ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಇದರಿಂದ ನನ್ನ ಮೇಲೆ ಹೆಚ್ಚಿನ ಒತ್ತಡವಿತ್ತು. ಅಲ್ಲದೆ ನನ್ನ ಮೇಲೆ ಸಂಶಯ ಬರಲಾರಂಭಿಸಿತ್ತು. ಆದರೆ ಮಲೇಶ್ಯದಲ್ಲಿ ಉತ್ತಮ ಆಟವಾಡಬೇಕೆಂದು ಪಣತೊಟ್ಟಿದ್ದೆ. ಜಯದ ಹಸಿವೂ ನನ್ನಲ್ಲಿತ್ತು. ಎಲ್ಲ ಕೆಟ್ಟದಿನಗಳಿಗೆ ಇಂದು ತೆರೆಬಿದ್ದಿದೆ’ ಎಂದು ಲಿನ್‌ ಡಾನ್‌ ಪ್ರತಿಕ್ರಿಯಿಸಿದರು.

ತೈ ತ್ಸುಗೆ 3ನೇ ಪ್ರಶಸ್ತಿ
ವನಿತಾ ಸಿಂಗಲ್ಸ್‌ ಪ್ರಶಸ್ತಿ ಕಾದಾಟದಲ್ಲಿ ಚೈನೀಸ್‌ ತೈಪೆಯ ತೈ ಜು ಯಿಂಗ್‌ 3ನೇ ಬಾರಿಗೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ 21-16, 21-19 ನೇರ ಗೇಮ್‌ಗಳಿಂದ ಜಯಿಸಿದರು. ಯಿಂಗ್‌ 2013, 2018ರಲ್ಲಿ ಪ್ರಶಸ್ತಿ ಗೆದ್ದಿದ್ದರು.

ಉಳಿದಂತೆ ಮಿಕ್ಸೆಡ್‌ ಡಬಲ್ಸ್‌, ಪುರುಷರ ಡಬಲ್ಸ್‌ ಮತ್ತು ವನಿತಾ ಡಬಲ್ಸ್‌ನಲ್ಲೂ ಚೀನದ ಆಟಗಾರರು ಪ್ರಾಬಲ್ಯ ಮೆರೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next