ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಮುದ್ದೇಬಿಹಾಳ ಪಶು ಸಂಗೋಪನಾ ಇಲಾಖೆ ಮತ್ತು ಪಶು ಆಸ್ಪತ್ರೆವತಿಯಿಂದ ರವಿವಾರ ದನಗಳಿಗೆ ಗೋಟ್ ಫಾಕ್ಸ್ ಲಸಿಕಾ ಶಿಬಿರ ಏರ್ಪಡಿಸಲಾಗಿತ್ತು. ಅಂದಾಜು 200 ದನಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಅರಿವು ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ದನಗಳಿಗೆ ಎದೆಬಾವು, ಗಂಟುರೋಗ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ಲಿಂಪಿ ಸ್ಕಿನ್ ಡಿಸೀಸ್ (ಗಂಟು ಚರ್ಮರೋಗ) ಎಂದುಹೆಸರಿಸಲಾಗಿದೆ. ಇದು ಫಾಕ್ಸ್ ವೈರಸ್‌ನಿಂದ ಬರುವ ರೋಗ ವಾಗಿದ್ದು ಪ್ರಾಯೋಗಿಕವಾಗಿ ಹಾಗೂ ಮುನ್ನೆ ಚ್ಚರಿಕೆ ಕ್ರಮವಾಗಿ ಗೋಟ್ ಫಾಕ್ಸ್ ಲಸಿಕೆ ಕೊಡಲಾಗುತ್ತಿದೆ.ಒಂದು ದನದಿಂದ ಇನ್ನೊಂದು ದನಕ್ಕೆ ಹರಡುವ ಸಾಂಕ್ರಾಮಿಕ ರೋಗ ಇದಾಗಿದ್ದು ದನಗಳ ಮಾಲೀಕರು ರೋಗ ಕಾಣಿಸಿಕೊಂಡ ದನಗಳನ್ನು ಪ್ರತ್ಯೇಕವಾಗಿ ಇರಿಸಬೇಕಿದೆ ಎಂದು ಮುದ್ದೇಬಿಹಾಳ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾ ಧಿಕಾರಿ ಡಾ| ಸುರೇಶ ಭಜಂತ್ರಿ ತಿಳಿಸಿದರು.
ಈ ರೋಗದಿಂದ ಮನುಷ್ಯರಿಗೆ ಯಾವುದೇ ಅಪಾಯ ಇಲ್ಲ. ದನಗಳ ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುವುದು, ಗುಳ್ಳೆ ಏಳುವುದು ರೋಗದ ಲಕ್ಷಣವಾಗಿದೆ. ಪ್ರಾರಂಭದಲ್ಲಿ ಕಾಲುಗಳಲ್ಲಿ ಬಾವುಬರಲು ಪ್ರಾರಂಭಿಸುತ್ತದೆ. ಮಂಡಿಯಿಂದ ಕೆಳಗೆ ತೊಂದರೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ ಕೊಡದಿದ್ದಲ್ಲಿ ಕಾಲಲ್ಲಿ, ಗಡ್ಡೆಗಳಲ್ಲಿ ಗಾಯಗಳು ಕಾಣಿಸಿಕೊಳ್ಳುತ್ತವೆ ಎಂದರು.
ಈಗ ಮಳೆಯಿಂದಾಗಿ ಎಲ್ಲೆಡೆ ಕೆಸರು ಉಂಟಾಗಿದ್ದು ದನಗಳು ಅದರಲ್ಲಿ ತಿರುಗಾಡುವುದರಿಂದ ಬೇಗ ಗುಣಮುಖರಾಗುವುದು ಸ್ವಲ್ಪ ಕಷ್ಟಕರ. ಆಕಳು, ಎತ್ತು, ಎಮ್ಮೆ, ಕೋಣ ಮುಂತಾದ ದನಗಳಲ್ಲಿ ಇದು ಕಾಣಿಸಿಕೊಂಡರೂ ಅಂಥ ದನಗಳು ಸಾವನ್ನಪ್ಪುವುದಿಲ್ಲ. ಪೂರ್ವ ಚಿಕಿತ್ಸೆ ಕೊಡದಿದ್ದರೆ ಮಾತ್ರ ಅಪಾಯಕಾರಿ ಆಗುತ್ತದೆ. ಕಾಲಲ್ಲಿ ಗಾಯ ಆಗಿ ಬೇಗ ಗುಣಮುಖವಾಗುವುದಿಲ್ಲ. ಇದನ್ನುತಡೆಯಲು ಗೋಟ್ ಫಾಕ್ಸ್ ಲಸಿಕೆ ಕಡ್ಡಾಯವಾಗಿದೆ. ಇಂಥ ರೋಗ ಬಂದ ದನಗಳನ್ನು ಪ್ರತ್ಯೇಕವಾಗಿರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಪ್ರಭಾರ ಪಶು ವೈದ್ಯಾಧಿಕಾರಿ ಡಾ| ಶಿವಾನಂದ ಮೇಟಿ, ಡಾ| ಭಾಸ್ಕರ್, ಡಾ| ಎಚ್.ಎಸ್. ಸೀತಿಮನಿ, ಮೈತ್ರಿ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡು ಲಸಿಕೆ ನೀಡಿದರು. ಬಿಜೆಪಿ ಧುರೀಣ ಲಕ್ಷ್ಮಣ ಬಿಜೂjರ ಶಿಬಿರ ಏರ್ಪಡಿಸಲು ನೆರವಾಗಿದ್ದರು.