Advertisement

ಹಲೋ ಡಾಕ್ಟರ್‌ ಎನ್ನುತ್ತಿಲ್ಲ, ಸೀದಾ ಒಪಿಡಿಗೆ ಹಾಜರ್‌!

03:11 PM Apr 28, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಸಂದರ್ಭದಲ್ಲಿ ತುರ್ತು ಆರೋಗ್ಯ ಸಲಹೆಗಳಿಗಾಗಿ ಜಿಲ್ಲಾಡಳಿತ ಹಾಗೂ ಕಿಮ್ಸ್‌ನಿಂದ ಆರಂಭಿಸಲಾಗಿದ್ದ ದೂರವಾಣಿ ವೈದ್ಯರ ಸಲಹಾ ಕೇಂದ್ರ (ಟೆಲಿ ಮೆಡಿಸಿನ್‌ ಸೆಂಟರ್‌)ವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜನ ನಿರುತ್ಸಾಹ ತೋರಿದ್ದಾರೆ.

Advertisement

ಏ.6ರಿಂದ ಕಿಮ್ಸ್‌ನಲ್ಲಿ 24/7 ಆಧಾರದಲ್ಲಿ ದೂರವಾಣಿ ಸಲಹಾ ಕೇಂದ್ರ ಆರಂಭಿಸಲಾಗಿತ್ತು. ಆರಂಭಿಸಿದ ಒಂದು ವಾರಗಳ ಕಾಲ ಹೆಚ್ಚಿನ ಜನರು ದೂರವಾಣಿ ಮೂಲಕ ಸಂಪರ್ಕಿಸಿ ಚಿಕಿತ್ಸೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಇದೀಗ ವೈದ್ಯರು ಇದ್ದಾರೆಯೇ, ಚಿಕಿತ್ಸೆ ಲಭ್ಯವಿದೆಯೇ ಎನ್ನುವುದಕ್ಕೆ ಮಾತ್ರ ದೂರವಾಣಿ ಸಲಹಾ ಕೇಂದ್ರ ಸೀಮಿತವಾಗುತ್ತಿದೆ.

ನೇರವಾಗಿ ಒಪಿಡಿಗೆ: ದಿನದ 24 ಗಂಟೆಯೂ ದೂರವಾಣಿ ವೈದ್ಯರ ಸಲಹಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಮೂರು ಶಿಫ್ಟ್‌ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಿಮ್ಸ್‌ನ ಎಲ್ಲಾ ವಿಭಾಗಗಳ 200 ವೈದ್ಯರು ದೂರವಾಣಿ ಮೂಲಕ ಜನರ ಆರೋಗ್ಯ ಸಮಸ್ಯೆಗೆ ಪರಿಹಾರಕ್ಕೆ ಮುಂದಾಗಿದ್ದರು. ಜನರು ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೇಂದ್ರದ ಸೌಲಭ್ಯ ಪಡೆದವರು ಕೆಲವರು ಮಾತ್ರ. ಸಾರ್ವಜನಿಕರು ನೇರವಾಗಿ ಒಪಿಡಿಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಲಾಭವೇನು?: ಅನಾರೋಗ್ಯವಾದಾಗ ತುರ್ತು ಪ್ರಾಥಮಿಕ ಚಿಕಿತ್ಸೆ ಕುರಿತು ವೈದ್ಯರಿಗೆ ಕರೆ ಮಾಡಿ ಮಾಹಿತಿ ಪಡೆಯಲು ದೂರವಾಣಿ ಮಾಹಿತಿ ಕೇಂದ್ರ ಅನುಕೂಲಕರವಾಗಿದೆ. ಮಾಹಿತಿ-ಸಲಹೆಯೇನೋ ಒಕೆ, ಆದರೆ ಚಿಕಿತ್ಸೆ ನೀಡಲು ಹೇಗೆ ಸಾಧ್ಯ ಎನ್ನುವುದು ಹಲವರ ವಾದ. ಕೇಂದ್ರದಿಂದ ಸಣ್ಣಪುಟ್ಟ ಅನಾರೋಗ್ಯಗಳಿಗೆ ಆಸ್ಪತ್ರೆ ಅಲೆದಾಟ ತಪ್ಪಲಿದೆ. ವೈದ್ಯರಿಂದ ಔಷಧ ಸಲಹೆ ಪಡೆದು ಗುಣಮುಖರಾಗಲು ಕೇಂದ್ರ ಅವಕಾಶ ಕಲ್ಪಿಸಲಿದೆ.

ರಾಜ್ಯ-ಜಿಲ್ಲೆಯಲ್ಲಿ ಲಾಕ್‌ಡೌನ್‌ ಮೇ 3ರ ವರೆಗೆ ಇದ್ದು, ಸಾರ್ವಜನಿಕರು ತುರ್ತು ಸೇವೆಗೆ ಆಸ್ಪತ್ರೆಗೆ ಆಗಮಿಸದೆ ದೂರವಾಣಿ ಸಲಹಾ ಕೇಂದ್ರದ ಮೂಲಕ ಚಿಕಿತ್ಸೆಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ದೂ: 0836-2370057, 0836-2373447, 0836-2373641ಕ್ಕೆ ಕರೆ ಮಾಡಿ ವೈದ್ಯರ ಸಲಹೆ ಪಡೆಯಬಹುದಾಗಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಗೂ ತುರ್ತು ಆರೋಗ್ಯ ಸಮಸ್ಯೆ ಆದವರಿಗೆ ಸಹಾಯವಾಗಲೆಂದು ದೂರವಾಣಿ ಸಲಹಾ ಕೇಂದ್ರ ಆರಂಭಿಸಲಾಗಿತ್ತು. ಆದರೆ ಈ ಸಲಹಾ ಕೇಂದ್ರ ವೈದ್ಯರು ಇದ್ದಾರೋ, ಇಲ್ಲವೋ ಎಂದು ಕೇಳಲು ಮಾತ್ರ ಸೀಮಿತವಾದಂತಿದೆ. ಆರಂಭದಲ್ಲಿದ್ದ ಸ್ಪಂದನೆ ನಂತರದಲ್ಲಿ ಇಲ್ಲವಾಗಿದೆ. ಸಾರ್ವಜನಿಕರು ನೇರವಾಗಿ ಒಪಿಡಿಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. -ಕಿಮ್ಸ್‌ ಹಿರಿಯ ವೈದ್ಯರು

 

­-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next