Advertisement
2022ರ ಅಗಸ್ಟ್ ಮೊದಲಲ್ಲಿ ಭಾರೀ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಹಾನಿ ಸಂಭವಿಸಿತ್ತು. ಹೊಳೆಯಲ್ಲಿ ಭಾರೀ ಪ್ರಮಾಣದ ನೆರೆ ನೀರು ಬಂದು ಹರಿಹರ ಪಲ್ಲತ್ತಡ್ಕ ಪೇಟೆ ನೆರೆ ನೀರಿನಿಂದ ಆವೃತಗೊಂಡಿತ್ತು. ಪೇಟೆಯ ಎರಡು ಅಂಗಡಿಗಳು ನೀರು ಪಾಲಾಗಿತ್ತು. ಬಾಳುಗೋಡು ಸಂಪರ್ಕದ ಸೇತುವೆಯಲ್ಲಿ ಮರ, ರೆಂಬೆ ಇತ್ಯಾದಿ ಸಿಲುಕಿಕೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು. ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಉಂಟಾಗಿತ್ತು.
ತಾತ್ಕಾಲಿಕ ಪರಿಹಾರ ಕಾರ್ಯ ನಡೆಸಿದ ಬಳಿಕ ಮುಂದೆ ಅನುದಾನದಲ್ಲಿ ಶಾಶ್ವತ ಕೆಲಸ ಮಾಡುವ ಬಗ್ಗೆ ಅಂದು ಸಂಬಂಧಿಸಿದವರು ಮಾಹಿತಿ ನೀಡಿದ್ದರೂ ಅದು ಯಾವುದೂ ಕಾರ್ಯಗತ ಗೊಂಡಿಲ್ಲ. ಶೀಘ್ರ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಮತ್ತೆ ಹೊಳೆಯಲ್ಲಿ ನೀರು ಹರಿದು ಬಂದಾಗ ಬಾಳುಗೋಡು ಸಂಪರ್ಕ ರಸ್ತೆಯಲ್ಲಿ ಕುಸಿತ ಸಂಭವಿಸಿ ಆ ಭಾಗದ ಸಂಪರ್ಕವೇ ಕಡಿತಗೊಳ್ಳುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬಾಳುಗೋಡು ಸಂಪರ್ಕ ಸೇತುವೆ ಬ್ರಿಟಿಷರ ಕಾಲದ ಸೇತುವೆಯಾಗಿದ್ದು, ಅದೂ ಶಿಥಿಲವಾಗಿದೆ ಎನ್ನಲಾಗಿದೆ. ಹರಿಹರ ಪಲ್ಲತ್ತಡ್ಕ ಪೇಟೆಗೆ ಹೊಂದಿಕೊಂಡು ಹರಿಯುತ್ತಿರುವ ಹೊಳೆ ಬದಿಗೆ ತಡೆಗೋಡೆ ನಿರ್ಮಾಣವಾಗಬೇಕಿದೆ. ಕುಸಿತಗೊಂಡಿದ್ದ ಸಂಪರ್ಕ ರಸ್ತೆಯಲ್ಲಿ ಗೋಣಿಚೀಲ ಇರಿಸಲಾದ ಸ್ಥಳದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗಬೇಕಿದೆ. ಚುನಾವಣೆಯ ಹೆಸರಿನಲ್ಲಿ ಕಾಮಗಾರಿ ಬಾಕಿಯಿರಿಸಿದರೆ ಅಪಾಯ ನಿಶ್ಚಿತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.