ನವದೆಹಲಿ: ಐಪಿಎಲ್ ವೀಕ್ಷಕರ ಪಾಲಿಗೆ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. ಭಾನುವಾರದಿಂದ ಯುಎಇಯ 3 ತಾಣಗಳಲ್ಲಿ ಮುಂದುವರಿಯಲಿರುವ ಪಂದ್ಯಾವಳಿಗೆ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ಕಲ್ಪಿಸಲು ಸಂಘಟಕರು ನಿರ್ಧರಿಸಿದ್ದಾರೆ.
ಯುಎಇಯಲ್ಲಿ ನಡೆಯಲಿರುವ 2021ನೇ ಸಾಲಿನ ದ್ವಿತೀಯಾರ್ಧದ ಐಪಿಎಲ್ ಪಂದ್ಯಾವಳಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೊಂದು ವಿಶೇಷ ಸಂದರ್ಭವಾಗಲಿದೆ. ಸ್ಟೇಡಿಯಂಗಳಿಗೆ ವೀಕ್ಷಕರನ್ನು ಮರಳಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಕೋವಿಡ್ ನಿಯಮಾವಳಿ ಹಾಗೂ ಯುಎಇ ಸರಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಪ್ರೇಕ್ಷಕರಿಗೆ ಸ್ಟೇಡಿಯಂಗಳ ಬಾಗಿಲು ತೆರೆಯಲಾಗುವುದು’ ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪಂದ್ಯಗಳು ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನಗಳಲ್ಲಿ ನಡೆಯಲಿವೆ.
2019ರ ಬಳಿಕ ಅವಕಾಶ: 2019ರ ಬಳಿಕ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಲಭಿಸುತ್ತಿರುವುದು ಇದೇ ಮೊದಲು. ಕೊರೊನಾ ಕಾರಣದಿಂದ ಯುಎಇಯಲ್ಲೇ ನಡೆದ 2020ರ ಪಂದ್ಯಾವಳಿಗೆ ವೀಕ್ಷಕರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಬಳಿಕ ಈ ವರ್ಷ ಭಾರತದಲ್ಲಿ ಆಡಲಾದ ಪ್ರಥಮಾರ್ಧದ ಪಂದ್ಯಗಳಿಗೂ ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿತ್ತು.
ಶೇ. 50 ವೀಕ್ಷಕರು?: ಯುಎಇಯಲ್ಲಿ ನಡೆಯಲಿರುವ ಪಂದ್ಯಗಳ ವೇಳೆ ಎಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂಬುದನ್ನು ಸಂಘಟಕರು ಇನ್ನೂ ಸ್ಪಷ್ಟಪಡಿಸಿಲ್ಲ. ಮೂಲವೊಂದರ ಪ್ರಕಾರ, ಸ್ಟೇಡಿಯಂ ಸಾಮರ್ಥ್ಯದ ಶೇ. 50ರಷ್ಟು ವೀಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಸೆ.16ರಿಂದ ಟಿಕೆಟ್ ಲಭ್ಯ: ಗುರುವಾರದಿಂದ ಐಪಿಎಲ್ ಪಂದ್ಯಗಳ ಆನ್‌ಲೈನ್ ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ. ಕೂಟದ ಅಧಿಕೃತ ಐಪಿಎಲ್ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಕಾದಿರಿಸಬಹುದಾಗಿದೆ. ಪ್ಲಾಟಿನಮ್‌ಲಿಸ್ಟ್.ನೆಟ್‌ನಲ್ಲೂ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ತಂಡದ ಆಯೋಜಕರು ತಿಳಿಸಿದ್ದಾರೆ.