Advertisement

ಬೆಳಗಾವಿ: ನಿಗದಿತ ಸ್ಥಳದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ

01:55 PM Apr 03, 2020 | keerthan |

ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಹೋಲ್ ಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಸೋಮವಾರದಿಂದ ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

Advertisement

ಎಪಿಎಂಸಿ ಕಚೇರಿಯಲ್ಲಿ ಶುಕ್ರವಾರ  ನಡೆದ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು ಸೋಮವಾರದಿಂದ ನಗರದ ಹೊರವಲಯದ ಹಿಂಡಾಲ್ಕೋ ಮೈದಾನ, ಆರ್.ಟಿ.ಓ ಮೈದಾನ, ಪೊದ್ದಾರ್ ಶಾಲಾ ಮೈದಾನ ಹಾಗೂ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗಾಳಿಪಟ ಉತ್ಸವ (ಮಾಲಿನಿ ಸಿಟಿ) ಮೈದಾನ ಹೀಗೆ ನಾಲ್ಕು ದಿಕ್ಕುಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಈ ಸ್ಥಳಗಳಲ್ಲಿ ತಕ್ಷಣವೇ ವ್ಯಾಪಾರಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರದವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ವಹಿವಾಟು ನಡೆಸಬೇಕು. ನಂತರ ನಗರದ ಹೊರ ವಲಯದಲ್ಲಿ ಗುರುತಿಸಲಾಗುವ ನಿಗದಿತ ಮೂರ್ನಾಲ್ಕು ಸ್ಥಳಗಳಲ್ಲಿಯೇ ವಹಿವಾಟು ನಡೆಸಬೇಕು ಎಂದು ತಿಳಿಸಿದರು.

ಉಳ್ಳಾಗಡ್ಡಿ, ಆಲುಗಡ್ಡೆ ಮತ್ತು ಗೆಣಸು ಮಾತ್ರ ಮುಖ್ಯ ಪ್ರಾಂಗಣದಲ್ಲಿ ವಹಿವಾಟು ನಡೆಸಬೇಕು. ಉಳಿದ ತರಕಾರಿ ಮಾರಾಟವನ್ನು ನಾಲ್ಕು ಕಡೆ ಗುರುತಿಸಲಾಗುವ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ಸೂಚಿಸಿದರು. ಮತರಕಾರಿ ಸೇರಿಂದತೆ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ವಿನಾಕಾರಣ ವ್ಯತ್ಯಯ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ಇಡೀ ದೇಶವೇ ಸಂದಿಗ್ಧ ಸ್ಥಿತಿಯಲ್ಲಿ ಇರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ವ್ಯಾಪಾರಸ್ಥರು ಮತ್ತು ರೈತರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು. ರೈತರು, ವ್ಯಾಪಾರಸ್ಥರು, ಹಮಾಲರ ಕುಟುಂಬಗಳು ಸೇರಿದಂತೆ ಎಲ್ಲ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆದ್ದರಿಂದ ಸ್ವಲ್ಪ ಅನಾನುಕೂಲ ಆದರೂ ಸರಿ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಆಗುವಂತೆ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ವ್ಯಾಪಾರಿಗಳು, ಹಮಾಲರು ಸೇರಿದಂತೆ ಎಲ್ಲರಿಗೂ ಅಗತ್ಯವಿರುವಷ್ಟು ಪಾಸ್ ಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಿರುವುದರಿಂದ ಯಾರೂ ಕೂಡ ವ್ಯಾಪಾರ-ವಹಿವಾಟು ಬಂದ್ ಮಾಡದೇ ಸಾರ್ವಜನಿಕರ ದೃಷ್ಟಿಯಿಂದ ಇಂತಹ ತುರ್ತು ಸಂದರ್ಭದಲ್ಲಿ ಪರಸ್ಪರ ಸಹಕರಿಸಬೇಕು. ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಕೈಗೊಂಡರೂ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು ಎಂದರು.

ಪ್ರತಿದಿನ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ ಬರಲಿದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ ಮತ್ತಿತರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ವರ್ತಕರು ಮನವಿ ಮಾಡಿಕೊಂಡರು.

ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಹೋಲ್ ಸೇಲ್ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರು ಕೂಡ ತರಕಾರಿ ಖರೀದಿಸಲು ಇಲ್ಲಿಗೆ ಬರುತ್ತಿರುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಆದ್ದರಿಂದ ಹೋಲಸೇಲ್ ವ್ಯಾಪಾರಸ್ಥರನ್ನು ಹೊರತುಪಡಿಸಿ ಉಳಿದವರನ್ನು ನಿರ್ಬಂಧಿಸಬೇಕು ಎಂದು ವರ್ತಕರು ಸಲಹೆ ನೀಡಿದರು.

ಪ್ರತಿದಿನ ಎಲ್ಲ ಬಗೆಯ ವಹಿವಾಟು ಮಾಡುವ ಬದಲು ಒಂದು ದಿನ ತರಕಾರಿ, ಒಂದು ದಿನ ಕಾಳುಕಡಿ ಹೀಗೆ ದಿನವಾರು ವಹಿವಾಟು ನಿಗದಿಪಡಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯ ಎಂದು ಕೆಲವರು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ‌.ವಿ. ಮಾತನಾಡಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಗದಿಪಡಿಸುವ ಸ್ಥಳಗಳಲ್ಲಿ ವಹಿವಾಟು ನಡೆಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next