Advertisement

ಭರವಸೆಗೆ ಸೀಮಿತ ಕೆ.ಸಿ.ರೆಡ್ಡಿ ಸ್ಮಾರಕ

10:52 AM May 04, 2019 | Suhan S |

ಬೇತಮಂಗಲ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಇನ್ನೂ ಕಾರ್ಯಗತ ಮಾಡಿಲ್ಲ. ಕೆ.ಸಿ.ರೆಡ್ಡಿ ಹುಟ್ಟೂರಾದ ಕ್ಯಾಸಂಬಳ್ಳಿ ಹೋಬಳಿಯ ರಾಮಪುರ ಗ್ರಾಮದ ಹೊರವಲಯದಲ್ಲಿರುವ 20 ಎಕರೆ ಸರ್ಕಾರಿ ಜಮೀನಿನಲ್ಲಿ 2 ಕೋಟಿ ರೂ. ಅನುದಾನದಲ್ಲಿ ಸ್ಮಾರಕ ಸ್ಥಾಪನೆ ಮಾಡುವುದಾಗಿ ಘೋಷಿಸಿ ಒಂದು ವರ್ಷ ಕಳೆದಿದೆ. ಇದುವರೆಗೂ ನಿರ್ಮಾಣದ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ.

Advertisement

ಕೆ.ಸಿ.ರೆಡ್ಡಿ ಅವರ ಸವಿ ನೆನಪಿಗಾಗಿ ಸ್ಮಾರಕದೊಂದಿಗೆ ಪ್ರವಾಸಿ ತಾಣ ನಿರ್ಮಿಸಲು ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಮಲಿಂಗರೆಡ್ಡಿ ಕೆಜಿಎಫ್ ನಗರಕ್ಕೆ ಭೇಟಿ ನೀಡಿದ್ದ ವೇಳೆ ರೆಡ್ಡಿ ಸಮುದಾಯದ ಮುಖಂಡರು ಸ್ಮಾರಕ ನಿರ್ಮಾಣದ ಬಗ್ಗೆ ಪ್ರಾಸ್ತಾಪಿಸಿದ್ದರು. ಸ್ಥಳ ಪರೀಶಿಲನೆ ನಡೆಸಿ, ಸರ್ಕಾರದ ಜಮೀನಿನ ಸರ್ವೇ ನಡೆಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರು. ಸರ್ವೇ ನಡೆಸಿದ ಅಧಿಕಾರಿಗಳು 18 ಎಕರೆ ಜಮೀನು ಲಭ್ಯವಿದೆ ಎಂಬ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದರು. ಆದರೆ, ಸರ್ಕಾರದಿಂದ ಬಿಡುಗಡೆಗೊಂಡಿರುವ ಅನುದಾನ ಇದುವರೆಗೂ ಸದ್ಬಳಕೆಯಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

1947ರಲ್ಲಿ ದಿ.ಕೆ.ಚೆಂಗಲರಾಯ ರೆಡ್ಡಿ, ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು. ನೆಹರು ಸಂಪುಟದಲ್ಲಿ ಉತ್ಪಾದನಾ ಖಾತೆ ಸಚಿವರಾಗಿ, ಗೃಹ ನಿರ್ಮಾಣ ಮತ್ತು ಸರಬ ರಾಜು ಖಾತೆ ಸಚಿವರಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ರಾಗಿ, ಮಧ್ಯಪ್ರದೇಶದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಆರೋಗ್ಯ ತಪಾಸಣೆ ಶಿಬಿರ: ಕೆ.ಸಿ.ರೆಡ್ಡಿ 117ನೇ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾಸಂಬಳ್ಳಿ ಗ್ರಾಮದ ವೇಮನ ವಿದ್ಯಾಸಂಸ್ಥೆಯ ಆವರಣದಲ್ಲಿ ರೆಡ್ಡಿ ಯುವಕ ಬಳಗದವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next