Advertisement

ಘೋಷಣೆಗೆ ಸೀಮಿತ ಮೈತ್ರಿ ಭರವಸೆ

10:20 AM Jul 01, 2019 | Suhan S |

ಹಾವೇರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು ಸಮ್ಮಿಶ್ರ ಸರ್ಕಾರದಿಂದ ಜಿಲ್ಲೆಗೆ ಈವರೆಗೆ ಯಾವುದೇ ವಿಶೇಷ ಸೌಲಭ್ಯ ದೊರೆಯದೇ ಜಿಲ್ಲೆಯ ಮಟ್ಟಿಗೆ ಇದು ಶೂನ್ಯ ಸಾಧನೆಯ ವರ್ಷವಾಗಿ ಪರಿಣಮಿಸಿದೆ.

Advertisement

ಈ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಎರಡು ಬಜೆಟ್ ಮಂಡಿಸಿದ್ದು ಎರಡೂ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಿದ ಯಾವುದೇ ಸೌಲಭ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಇನ್ನು ಬಜೆಟ್ ಹೊರತಾಗಿ ಜಿಲ್ಲೆಗೆ ಈವರೆಗೆ ಮೈತ್ರಿ ಸರ್ಕಾರದಿಂದ ಯಾವುದೇ ವಿಶೇಷ ಅನುದಾನವೂ ಜಿಲ್ಲೆಗೆ ದೊರಕಿಲ್ಲ. ಹೀಗಾಗಿ ಬಜೆಟ್ ಘೋಷಣೆ ಬರೀ ಘೋಷಣೆಯಾಗಿಯೇ ಉಳಿದಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಮಂಡನೆಯಾದ ಚೊಚ್ಚಲ ಬಜೆಟ್‌ನಲ್ಲಿ ಇಸ್ರೇಲ್ ಮಾದರಿಯಲ್ಲಿ ಜಿಲ್ಲೆಯ 5000ಹೆಕ್ಟೇರ್‌ ಪ್ರದೇಶ ನೀರಾವರಿ ಕಲ್ಪಿಸುವ ಒಂದೇ ಒಂದು ಯೋಜನೆ ಘೋಷಿಸಲಾಗಿತ್ತು. ಆದರೆ, ಘೋಷಿಸಿದ ಆ ಒಂದೇ ಒಂದು ಸೌಲಭ್ಯ ಕೂಡ ಈವರೆಗೆ ಅನುಷ್ಠಾನಗೊಂಡಿಲ್ಲ.

ಇಸ್ರೇಲ್ ಮಾದರಿ ಕೃಷಿ ಮಾಡಿ ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇಲ್ಲಿಯ ಕೆರಿಮತ್ತಿಹಳ್ಳಿ ಬಳಿ 18 ಎಕರೆ ಭೂಮಿ ಗುರುತಿಸಿದ್ದನ್ನು ಹೊರತುಪಡಿಸಿದರೆ ಇಸ್ರೆಲ್ ಮಾದರಿ ತೋಟಗಾರಿಕೆ ಮಾಡುವ ಕೆಲಸ ಆಗಿಲ್ಲ. ಇದಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನವೂ ಬಿಡುಗಡೆಯಾಗಿಲ್ಲ.

ಮೊದಲ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡದೆ ನಿರಾಸೆ ಮೂಡಿಸಿದ್ದ ಮೈತ್ರಿ ಸರ್ಕಾರ, ಎರಡನೇ ಬಜೆಟ್‌ನಲ್ಲಾದರೂ ಜಿಲ್ಲೆಗೆ ವಿಶೇಷ ಕೊಡುಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆಗಲೂ ಜಿಲ್ಲೆಯ ನಿರೀಕ್ಷೆ ಹುಸಿಯಾಯಿತು. ಜಿಲ್ಲೆಯ ಪ್ರಮುಖ ಬೇಡಿಕೆ ಹೊರತುಪಡಿಸಿ ಕೆಲವೇ ಕೆಲವು ಸೌಲಭ್ಯಗಳನ್ನು ಘೋಷಿಸಿತು. ಘೋಷಿಸಿದ ಯೋಜನೆಗಳಲ್ಲಿ ಯಾವುದೂ ಈವರೆಗೆ ಅನುಷ್ಠಾನಗೊಳ್ಳದಿರುವುದು ವಿಷಾದನೀಯ.

Advertisement

ಬಜೆಟ್ ಘೋಷಣೆ: ಎರಡನೇ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಹಾವೇರಿ ಹಾಗೂ ರಾಮನಗರದಲ್ಲಿ ರೇಷ್ಮೆ ಮಾರುಕಟ್ಟೆ ಆಧುನೀಕರಣ ಹಾಗೂ ಬಲವರ್ಧನೆಗೆ 10 ಕೋಟಿ ರೂ. ಘೋಷಿಸಲಾಗಿತ್ತು. ಹಾವೇರಿ, ರಾಯಚೂರು, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರಗಿ, ಕೋಲಾರ, ಹಾಸನ ಹಾಗೂ ಧಾರವಾಡದಲ್ಲಿ ಬಾಲಕಿಯರ ಪ್ರತ್ಯೇಕ ಕ್ರೀಡಾ ವಸತಿ ಶಾಲೆ ಸ್ಥಾಪನೆಗಾಗಿ 15ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.

ಹಾವೇರಿ ಸೇರಿದಂತೆ ಗದಗ, ಕುಂದಗೋಳ, ಹುಬ್ಬಳ್ಳಿ, ಅಣ್ಣಿಗೇರಿಯಲ್ಲಿ ಮೆಣಸು ಹಾಗು ಹೆಸರಕಾಳು ಸಂಸ್ಕರಣಾ ಘಟಕ ಸ್ಥಾಪನೆಗಾಗಿ 160 ಕೋಟಿ ರೂ., ರಟ್ಟಿಹಳ್ಳಿ ತಾಲೂಕಿನ ಮಗದ ಮಾಸೂರು ಕೆರೆ ಸಮಗ್ರ ಅಭಿವೃದ್ಧಿಗಾಗಿ 25ಕೋಟಿ ರೂ., ಹಾವೇರಿಯಲ್ಲಿ ಡಿಜಿಟಲ್ ಸ್ತನರೇಖನ ವ್ಯವಸ್ಥೆಗೆ ಒಂದು ಕೋಟಿ ರೂ., ಅಂಬಿಗರ ಚೌಡಯ್ಯ ಗುರುಪೀಠ ಅಭಿವೃದ್ಧಿಗೆ ಒಂದು ಕೋಟಿ ರೂ., ಹೊಸರಿತ್ತಿಯ ಗುದ್ದಲಿ ಮಠ ಅಭಿವೃದ್ಧಿಗೆ ಒಂದು ಕೋಟಿ ರೂ. ಘೋಷಿಸಲಾಗಿತ್ತು. ಘೋಷಣೆಯಾದ ಈ ಯಾವ ಯೋಜನೆಗಳಿಗೂ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಜೆಟ್‌ನಲ್ಲಿ ಘೋಷಿಸಿದ ಸೌಲಭ್ಯಗಳು ಬಜೆಟ್ ಕಾಗದಕ್ಕೆ ಸೀಮಿತವಾದಂತಾಗಿದೆ.

‘ಬೆಲೆ’ ಸಿಗದ ಬೇಡಿಕೆಗಳು: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಬೇಡಿಕೆಗಳು ಬಹಳಷ್ಟಿವೆ. ಈ ಬೇಡಿಕೆಗಳ ಬಗ್ಗೆ ಪ್ರತಿವರ್ಷ ಸರ್ಕಾರದ ಗಮನಸೆಳೆಯಲಾಗುತ್ತಿದೆ. ಆದರೆ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯೇ ದೊರೆತಿಲ್ಲ. ಹೀಗಾಗಿ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ, ಪ್ರತ್ಯೇಕ ಕೆ.ಎಂ.ಎಫ್‌. ಘಟಕ ಸ್ಥಾಪನೆ, ಜವಳಿ ಪಾರ್ಕ್‌ ಸ್ಥಾಪನೆ, ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮಾರುಕಟ್ಟೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಎಲ್ಲವೂ ಕನಸಾಗಿಯೇ ಉಳಿದಿವೆ.

ಒಟ್ಟಾರೆ ಮೈತ್ರಿ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ಬಿಡುಗಡೆ, ವಿಶೇಷ ಯೋಜನೆ ಅನುಷ್ಠಾನ ಆಗದೇ ಇರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next