Advertisement

ದರಕ್ಕೆ ಮಿತಿ, ಪರೀಕ್ಷೆ ಹೆಚ್ಚಳ ; ದಿಲ್ಲಿಯಲ್ಲಿ ಕೋವಿಡ್ ವ್ಯಾಪಿಸುವಿಕೆ ತಡೆಗೆ ಹಲವು ಕ್ರಮ

10:25 AM Jun 15, 2020 | mahesh |

ಹೊಸದಿಲ್ಲಿ: ಚಿಕಿತ್ಸೆಯ ದರಕ್ಕೆ ಮಿತಿ, 500 ರೈಲ್ವೆ ಬೋಗಿಗಳು, ಮನೆ-ಮನೆ ಸಮೀಕ್ಷೆ, ಪರೀಕ್ಷಾ ಪ್ರಮಾಣ ಹೆಚ್ಚಳ… ಇವು ದಿಲ್ಲಿಯಲ್ಲಿ ಅವ್ಯಾಹತವಾಗಿ ಹಬ್ಬುತ್ತಿರುವ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಲಾದ ಮಹತ್ವದ ನಿರ್ಧಾರಗಳು. ರವಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಪ್ರಮುಖರು ಸಭೆ ನಡೆಸಿ, ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ದಿಲ್ಲಿಯಲ್ಲಿ ಸೋಂಕಿತರ ಸಂಖ್ಯೆ 39 ಸಾವಿರ ದಾಟಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

Advertisement

ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯವನ್ನೂ ನೀಡುವುದಾಗಿ ಕೇಜ್ರಿವಾಲ್‌ ಸರಕಾರಕ್ಕೆ ಕೇಂದ್ರ ಸರಕಾರ ಭರವಸೆ ನೀಡಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ನಿವಾರಣೆ, ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವುದು, ಆರೋಗ್ಯ ಮೂಲಸೌಕರ್ಯಗಳ ಪೂರೈಸುವಿಕೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಅಮಿತ್‌ ಶಾ ತಿಳಿಸಿದ್ದಾರೆ.

ಸಭೆಯಲ್ಲಿ ಶಾ, ಕೇಜ್ರಿವಾಲ್‌ ಹೊರತುಪಡಿಸಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌, ಡಿಸಿಎಂ ಮನೀಷ್‌ ಸಿಸೋಡಿಯಾ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ಗೃಹ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ತದನಂತರ ಸಂಜೆ ದಿಲ್ಲಿಯ 3 ನಗರ ಪಾಲಿಕೆಗಳ ಮೇಯರ್‌ಗಳೊಂದಿಗೂ ಅಮಿತ್‌ ಶಾ ಅವರು ಸಭೆ ನಡೆಸಿ, ಕೋವಿಡ್ ಸ್ಥಿತಿಗತಿ ಕುರಿತು ಚರ್ಚಿಸಿದ್ದಾರೆ.
ಅಧಿಕಾರಿಗಳ ನಿಯೋಜನೆ: ಸಭೆಯ ಬೆನ್ನಲ್ಲೇ ಅಮಿತ್‌ ಶಾ ಅವರು ನಾಲ್ವರು ಐಎಎಸ್‌ ಅಧಿಕಾರಿಗಳನ್ನು ತತ್‌ಕ್ಷಣವೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ನಾಲ್ವರು ಕೂಡ ದಿಲ್ಲಿ ಸರಕಾರಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರವಾಗಲಿದ್ದಾರೆ. ಜತೆಗೆ, ಕೇಂದ್ರ ಸರಕಾರದ ಇಬ್ಬರು ಅಧಿಕಾರಿಗಳನ್ನು ಕೂಡ ದಿಲ್ಲಿಗೆ ನಿಯೋಜಿಸಲಾಗಿದೆ.

ದಕ್ಷಿಣ ದಿಲ್ಲಿಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ 10 ಸಾವಿರ ಹಾಸಿಗೆಗಳುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣವಾಗಲಿದ್ದು, ರವಿವಾರ ಲೆ| ಗ| ಅನಿಲ್‌ ಬೈಜಲ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ದಿಲ್ಲಿ-ಹರಿಯಾಣ ಗಡಿಯಲ್ಲಿನ ರಾಧಾ ಸೋಮಿ ಸತ್ಸಂಗ್‌ ಬೀಸ್‌ ಎಂಬ ಆಧ್ಯಾತ್ಮಿಕ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ನಡುವೆ, ಉತ್ತರ ದಿಲ್ಲಿ ನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಹಿಂದೂ ರಾವ್‌ ಆಸ್ಪತ್ರೆಯನ್ನು ಕೋವಿಡ್ ಕೇಂದ್ರಿತ ಆಸ್ಪತ್ರೆ ಎಂದು ದಿಲ್ಲಿ ಸರಕಾರ ಘೋಷಿಸಿದೆ.

ನವೆಂಬರ್‌ನಲ್ಲಿ ಸೋಂಕು ಉತ್ತುಂಗಕ್ಕೆ
ಎಂಟು ವಾರಗಳ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಸೋಂಕಿನ ಉತ್ತುಂಗದ ಅವಧಿ ಮುಂದೂಡಲ್ಪಟ್ಟಿದೆ. ಆದರೆ ನವೆಂಬರ್‌ ಮಧ್ಯದಲ್ಲಿ ಸೋಂಕು ಉತ್ತುಂಗಕ್ಕೇರಲಿದೆ ಎಂದು ಅಧ್ಯಯ ನವೊಂದು ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋ ಧನಾ ಮಂಡಳಿಯೇ ರಚಿಸಿದ ಆಪರೇಷನ್ಸ್‌ ರಿಸರ್ಚ್‌ ಗ್ರೂಪ್‌ನ ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದಾರೆ. ಅದರಂತೆ, ದೇಶವ್ಯಾಪಿ ನಿರ್ಬಂಧದ ಫ‌ಲ ವೆಂಬಂತೆ, ಕೊರೊನಾ ಉತ್ತುಂಗಕ್ಕೇರುವ ಅವಧಿಯು 34 ರಿಂದ 76 ದಿನಗಳಿಗೆ ಏರಿಕೆಯಾಗಿದೆ. ಹೀಗಾಗಿ, ದೇಶಾದ್ಯಂತ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸಲು, ವೈದ್ಯಕೀಯ ಮೂಲ ಸೌಕರ್ಯಗಳನ್ನು, ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಧ್ಯವಾಗಿದೆ. ಇದರಿಂದಾಗಿ ಸೋಂಕಿತರ ಪ್ರಮಾಣ ಕೂಡ ಶೇ.69ರಿಂದ 97ರಷ್ಟು ಇಳಿದಿದೆ ಎಂದು ವರದಿ ಹೇಳಿದೆ. ಪ್ರಸ್ತುತ ಆರೋಗ್ಯ ಮೂಲಸೌಕರ್ಯಗಳನ್ನು ಗಮನಿಸಿದರೆ, ನವೆಂಬರ್‌ ಮೊದಲ ವಾರದವರೆಗೆ ವೈದ್ಯ ಕೀಯ ಬೇಡಿಕೆ ಯನ್ನು ಪೂರೈಸಲು ಸಾಧ್ಯವಾಗಬಹುದು. ಅನಂತರದ 4-5ತಿಂಗಳ ಕಾಲ ಐಸೋಲೇಷನ್‌ ಹಾಸಿಗೆಗಳ ಕೊರತೆ ಉಂಟಾಗಬಹುದು, 4-6 ತಿಂಗಳ ಕಾಲ ಐಸಿಯು ಬೆಡ್‌ಗಳು ಸಿಗಲಿಕ್ಕಿಲ್ಲ, 3-9 ತಿಂಗಳ ಕಾಲ ವೆಂಟಿಲೇಟರ್‌ ಲಭ್ಯವಿರುವುದಿಲ್ಲ ಎಂದು ಈ ವರದಿ ಅಂದಾಜಿಸಿದೆ.

Advertisement

ಸಭೆಯ ಪ್ರಮುಖ ನಿರ್ಣಯಗಳು
ಮುಂದಿನ 2 ದಿನಗಳಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ದುಪ್ಪಟ್ಟು ಹೆಚ್ಚಳ, 6 ದಿನಗಳ ಬಳಿಕ ಮೂರು ಪಟ್ಟು ಹೆಚ್ಚಳ
ಕಂಟೈನ್ಮೆಂಟ್‌ ವಲಯಗಳಲ್ಲಿನ ಪ್ರತಿಯೊಂದು ಮತಗಟ್ಟೆಗಳಲ್ಲೂ ಪರೀಕ್ಷೆ ನಡೆಸಲು ವ್ಯವಸ್ಥೆ
ರೋಗಿಗಳಿಗೆ ಹಾಸಿಗೆ ಕೊರತೆ ನೀಗಿಸಲು
500 ರೈಲ್ವೇ ಬೋಗಿಗಳನ್ನು ದಿಲ್ಲಿ ಸರಕಾರಕ್ಕೆ ಹಸ್ತಾಂತರಿಸುವ ಭರವಸೆ
ಖಾಸಗಿ ಆಸ್ಪತ್ರೆಗಳಲ್ಲಿ ಶೇ.60 ಕೋವಿಡ್ ರೋಗಿಗಳ ಚಿಕಿತ್ಸೆ ಹಾಗೂ ಪರೀಕ್ಷೆಯ ದರ ನಿಗದಿ ಸಂಬಂಧ ನಿರ್ಧರಿಸಲು ಸಮಿತಿ ರಚನೆ. ಸೋಮವಾರದೊಳಗೆ ಸಮಿತಿಯಿಂದ ವರದಿ.
ಕಂಟೈನ್ಮೆಂಟ್‌ ವಲಯದಲ್ಲಿ ಮನೆ ಮನೆ ಸಮೀಕ್ಷೆ. ಇಲ್ಲಿನ ಪ್ರತಿಯೊಬ್ಬರ ಮೊಬೈಲ್‌ ಫೋನ್‌ಗಳಲ್ಲೂ ಆರೋಗ್ಯಸೇತು ಆ್ಯಪ್‌ ಕಡ್ಡಾಯ ಕೋವಿಡ್ ವಿರುದ್ಧದ ಹೋರಾಟದಲ್ಲಿ
ಸಹಕರಿಸಲು ಕೇಂದ್ರದ ಐವರು ಹಿರಿಯ ಅಧಿಕಾರಿಗಳ ನಿಯೋಜನೆ ಆಮ್ಲಜನಕದ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು, ಪಲ್ಸ್‌ ಆಕ್ಸಿಮೀಟರ್‌ಗಳು ಮತ್ತು ಇತರ ಎಲ್ಲ ಅಗತ್ಯ ಉಪಕರಣಗಳನ್ನು ಪೂರೈಸುವುದಾಗಿ ದಿಲ್ಲಿ ಸರಕಾರಕ್ಕೆ ಭರವಸೆ ಕಾಯುವಿಕೆಯ ಅವಧಿ ತಗ್ಗುವಂತೆ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿ ಬಿಡುಗಡೆ

ಕೇಂದ್ರ ಗೃಹ ಸಚಿವರೊಂದಿಗೆ ನಡೆಸಿದ ಸಭೆಯು ಸಂಪೂರ್ಣವಾಗಿ ಫ‌ಲಪ್ರದವಾಗಿದ್ದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿ ಜಯ ಗಳಿಸಬೇಕಿದೆ.
ಅರವಿಂದ ಕೇಜ್ರಿವಾಲ್‌, ದೆಹಲಿ ಸಿಎಂ

 

Advertisement

Udayavani is now on Telegram. Click here to join our channel and stay updated with the latest news.

Next