Advertisement

ಚಾಮುಂಡಿ ಬೆಟ್ಟದ ತಪ್ಪಲಿನ ತಂಗುದಾಣಗಳಿಗೆ ಸುಣ್ಣ ಬಣ್ಣ

09:22 PM Jul 02, 2019 | Lakshmi GovindaRaj |

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ತಂಗುದಾಣಗಳ ಸೂಕ್ತ ನಿರ್ವಹಣೆ ಅಗತ್ಯತೆಯನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪರಿಸರ ತಂಡದ ವತಿಯಿಂದ ತಂಗುದಾಣಗಳನ್ನು ಶುಚಿಗೊಳಿಸಿ, ಸುಣ್ಣ -ಬಣ್ಣ ಬಳಿಯಲಾಯಿತು.

Advertisement

ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ದೇಶ-ವಿದೇಶದಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಈ ಪೈಕಿ ಸಾವಿರಾರು ಮಂದಿ ಮೆಟ್ಟಿಲು ಹತ್ತುವ ಮೂಲಕ ದೇವಿಯ ದರ್ಶನ ಪಡೆಯುತ್ತಾರೆ.

ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಿಲು ಹತ್ತಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳ ವಿಶ್ರಾಂತಿಗಾಗಿ ರಾಜರು ಕಟ್ಟಿಸಿದ್ದ ತಂಗುದಾಣಗಳು ಪುಂಡ ಪೋಕರಿಗಳ ತಾಣವಾಗಿರುವುದಲ್ಲದೇ ತಂಗುದಾಣದ ಗೋಡೆಗಳ ಮೇಲೆ ಮಸಿಯಿಂದ ಹೆಸರುಗಳು, ವಿಕೃತವಾಗಿ ಚಿತ್ರಗಳನ್ನು ಬಿಡಿಸಿರುವ ದೃಶ್ಯ ಎದುರಾಗುತ್ತದೆ.

ದೇವರ ದರ್ಶನಕ್ಕೆಂದು ಧಾರ್ಮಿಕ ಭಾವನೆಯಿಂದ ಆಗಮಿಸಿದವರು ಈ ವಿಕೃತವನ್ನು ನೋಡಿ ಮುಜುಗರಕ್ಕೆ ಒಳಗಾಗುತ್ತಾರೆ. ಚಾಮುಂಡಿ ಬೆಟ್ಟವನ್ನು ಮೆಟ್ಟಿಲಿನಿಂದ ಹತ್ತುವಾಗ ತಂಗುದಾಣಗಳ ದುಸ್ಥಿತಿ ಕಣ್ಣಿಗೆ ಬಿತ್ತು. ಹೀಗಾಗಿ ಅದನ್ನು ಅಳಿಸಿ ಹಾಕಲು ಸುಣ್ಣ ಹೊಡೆಯಲು ತೀರ್ಮಾನಿಸಲಾಯಿತು.

ಐತಿಹಾಸಿಕ ಪ್ರಸಿದ್ಧವಾದ ಈ ಗೋಪುರಗಳಿಗೆ ರಕ್ಷಣೆ ನೀಡಿ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವಂತೆ ಜಿಲ್ಲಾಡಳಿತದ ಗಮನ ಸೆಳೆಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಂಡದ ಅಧ್ಯಕ್ಷ ಲೋಹಿತ್‌ ತಿಳಿಸಿದರು.

Advertisement

15 ತಂಗುದಾಣ: ಬೆಟ್ಟವನ್ನು ಹತ್ತಿ-ಇಳಿಯುವವರು ವಿಶ್ರಾಂತಿ ಪಡೆಯಲು ಹಾಗೂ ದಣಿದು ಬಂದವರಿಗೆ ಪಾನಕ ಇನ್ನಿತರ ತಂಪುಪಾನೀಯ ವಿತರಿಸಲು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 15 ತಂಗುದಾಣಗಳನ್ನು ಮಹಾರಾಜರು ಕಟ್ಟಿಸಿದ್ದರು. ಈಗ ಇವು ಪುಂಡ ಪೋಕರಿಗಳ ಆಸರೆ ತಾಣವಾಗಿರುವುದಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿದೆ.

ಇಲ್ಲಿ ಸದ್ಯ ಪಾನಕ ವಿತರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ತಂಗುದಾಣಗಳಿಗೆ ರಕ್ಷಣೆ ನೀಡಿ ಉತ್ತಮ ವಾತಾವರಣ ನಿರ್ಮಾಣವಾಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಇದಲ್ಲದೆ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ ಬರುವ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ಟಿಲು ಮಾರ್ಗದಲ್ಲಿ ನೇರವಾಗಿ ದೇವರ ದರ್ಶನದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಬಿಜೆಪಿ ಮುಖಂಡ ಜೋಗಿ ಮಂಜು, ಬಿಜೆಪಿ ಯುವ ಮುಖಂಡ ಶ್ರೀಮಧು ಎನ್‌. ಪೂಜಾರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚೇತನ್‌ ಮಂಜುನಾಥ್‌, ಅಶೋಕ್‌ ಬಸವರಾಜ್‌, ಜೀವನ್‌, ಸುರೇಂದ್ರ, ನವೀನ್‌, ಪ್ರಮೋದ್‌, ರಾಜು, ಸೂರ್ಯ, ಚಿರಾಗ್‌ ಹಾಗೂ ಪರಿಸರ ಸ್ನೇಹಿ ತಂಡದ 30ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next