ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ ಬಿದ್ದವರು ಲಕ್ಷ್ಮೀಬಾಯಿ. ಗಂಡ ತೀರಿಕೊಂಡ ನಂತರ ಹಿಡಿದ ತಕ್ಕಡಿಯನ್ನು ಇಂದಿಗೂ ಇಳಿಸಿಲ್ಲ ಈ ಮಹಾತಾಯಿ…
ವಿಜಯಪುರ ನಗರದ ಮೀನಾಕ್ಷಿ ಚೌಕ್‌ನ ಬಳಿ ನೀವು ಓಡಾಡಿದ್ದರೆ, ಲಕ್ಷ್ಮೀಬಾಯಿಯನ್ನು ನೋಡಿರುತ್ತೀರಿ. ಬೆಳಗ್ಗೆ 9ರಿಂದ ರಾತ್ರಿ 8 ರವರೆಗೆ, ಮಳೆ- ಬಿಸಿಲೆನ್ನದೆ ರಸ್ತೆ ಬದಿಯಲ್ಲಿ ಕುಳಿತು ಸುಣ್ಣ ಮಾರುವ ಆಕೆಯ ವಯಸ್ಸು 70 ವರ್ಷ! ವಯಸ್ಸು ನೋಡ್ಕೊಂಡು ಕೂತರೆ, ಹೊಟ್ಟೆ ತುಂಬೋದು ಬೇಡವೇ ಅಂತ ಕೇಳುವ ಲಕ್ಷ್ಮೀಬಾಯಿ, ಕಡು ಬಡ ಕುಟುಂಬದಿಂದ ಬಂದವರು. ಬಾಲ್ಯ ವಿವಾಹವಾಗಿ ಗಂಡನ ಮನೆ ಸೇರಿದ ಆಕೆ, ಸಣ್ಣ ವಯಸ್ಸಿನಲ್ಲೇ ಸಂಸಾರದ ನೊಗ ಹೊರಬೇಕಾಯ್ತು.
ಆಕೆಯ ಗಂಡ, ಮನೆಗೆ ಹಚ್ಚುವ ಸುಣ್ಣವನ್ನು ಮಾರುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಜನಿಸಿದ ನಂತರ, ಅನಾರೋಗ್ಯದಿಂದಾಗಿ ಲಕ್ಷ್ಮೀಬಾಯಿಯ ಗಂಡ ತೀರಿಕೊಂಡುಬಿಟ್ಟರು. ಸಂಸಾರದ ಬಂಡಿ ಸಾಗಿಸಲು ಆಕೆಗಿದ್ದ ಒಂದೇ ಒಂದು ದಾರಿಯೆಂದರೆ ಸುಣ್ಣದ ವ್ಯಾಪಾರ. 50 ವರ್ಷಗಳ ಹಿಂದೆ ಸುಣ್ಣದ ತಕ್ಕಡಿ ಹಿಡಿದ ಲಕ್ಷ್ಮೀಬಾಯಿ, ಇಂದಿಗೂ ಅದನ್ನೇ ನಂಬಿ ಬದುಕುತ್ತಿದ್ದಾರೆ.
ಹಿಂದೆಲ್ಲಾ ಸುಣ್ಣದ ಮನೆಗಳು ಜಾಸ್ತಿಯಿದ್ದ ಕಾರಣ, ಸುಣ್ಣದ ಚೀಲಗಳೂ ಹೆಚ್ಚಾಗಿ ಮಾರಾಟವಾಗುತ್ತಿದ್ದವು. ದೀಪಾವಳಿ, ಶ್ರಾವಣ ಮಾಸ, ಹೋಳಿ ಹುಣ್ಣಿಮೆ, ದಸರಾ ಹಬ್ಬದ ಸಮಯದಲ್ಲಿ, ಲಕ್ಷ್ಮೀಬಾಯಿಗೂ ಹಬ್ಬ. ಆದರೀಗ, ಸಿಮೆಂಟಿನ ಕಟ್ಟಡಗಳೇ ಹೆಚ್ಚಿದ್ದು, ಮಾರ್ಕೆಟ್‌ಗೆ ಲಗ್ಗೆಯಿಟ್ಟಿರುವ ಬಣ್ಣ ಬಣ್ಣದ ಪೇಂಟ್‌ಗಳು ಇವರ ವ್ಯಾಪಾರಕ್ಕೆ ಬಲವಾದ ಹೊಡೆತ ನೀಡಿವೆ.
ಈಗ ಒಂದು ಚೀಲ ಸುಣ್ಣಕ್ಕೆ 150 ರೂ. ಇದ್ದು, ದಿನಕ್ಕೆ ಹೆಚ್ಚೆಂದರೆ ನಾಲ್ಕು ಚೀಲ ಮಾರಾಟವಾಗುತ್ತದೆ. ಆ ಹಣದಿಂದ ಸಂಸಾರ ತೂಗಿಸುವುದು ಬಹಳ ಕಷ್ಟ. ಹಬ್ಬದ ದಿನಗಳಲ್ಲಿ ವ್ಯಾಪಾರ ಸ್ವಲ್ಪ ಚೇತರಿಸಿಕೊಳ್ಳುತ್ತದಷ್ಟೆ. ಹಾಗಾಗಿ, ಉಳಿದ ಸಮಯದಲ್ಲಿ ಮನೆಗೆಲಸಕ್ಕೂ ಹೋಗುತ್ತೇನೆ ಎನ್ನುತ್ತಾರೆ ಲಕ್ಷ್ಮೀಬಾಯಿ.
ಐವತ್ತು ವರ್ಷದಿಂದ ನನ್ನ ಕೈ ಹಿಡಿದಿರೋದೇ ಸುಣ್ಣದ ವ್ಯಾಪಾರ. ಇದರಲ್ಲಿ ಗಳಿಸಿದ ಹಣದಿಂದಲೇ ಇಬ್ಬರು ಹೆಣ್ಣುಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದೇನೆ. ಮೂವರು ಮೊಮ್ಮಕ್ಕಳಿದ್ದಾರೆ. ಮುಪ್ಪಿನಲ್ಲಿ ಯಾರಿಗೂ ಭಾರವಾಗಬಾರದೆಂದು ಈ ಕೆಲಸ ಮುಂದುವರಿಸುತ್ತಿದ್ದೇನೆ. ನನ್ನ ಹೊಟ್ಟೆ ತುಂಬುವಷ್ಟು ವ್ಯಾಪಾರವಾದರೆ ಸಾಕು.
– ಲಕ್ಷ್ಮೀಬಾಯಿ
– ವಿದ್ಯಾಶ್ರೀ ಗಾಣಿಗೇರ