ಹಾವೇರಿ: ಪ್ರತಿ ಮನೆ ಮಠವಾಗಬೇಕು, ಪ್ರತಿ ಮಠವೂ ಶಿವಯೋಗವಾಗಬೇಕು. ಅಂತಹ ಸಂಸ್ಕಾರ ಸಿಗಬೇಕಾದರೆ ಅದಕ್ಕೆ ಮಹಾತ್ಮರ ಸಾರ್ಥಕ ಸೇವೆ ಕಾರಣವಾಗುತ್ತದೆ. ಅಂತಹ ಸಾರ್ಥಕ ಸೇವೆಯ ಮೂಲಕ ಭಕ್ತರ ಮನೆಯನ್ನು ಮಠವಾಗಿಸಿ, ಸಿಂದಗಿ ಮಠವನ್ನು ಶಿವಯೋಗವಾಗಿಸಿದ ಕೀರ್ತಿ ಲಿಂ| ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ಮಠದಲ್ಲಿ ಹಮ್ಮಿಕೊಂಡಿರುವ ಲಿಂ|ಶಾಂತವೀರ ಪಟ್ಟಾಧ್ಯಕ್ಷರ 42ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಕ್ತರ ಮನೆಯಂಗಳಕ್ಕೆ ಹೋಗಿ ಅವರ ಕಷ್ಟಗಳಿಗೆ ಸಾಂತ್ವನಪರ ಪರಿಹಾರ ಕಲ್ಪಿಸಿ, ತಮ್ಮ ಮಾತೇ ಮಂತ್ರವಾಗಿಸಿ, ಧಾರ್ಮಿಕ ಪಾಠಶಾಲೆ ಸ್ಥಾಪನೆ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯದ ಜೊತೆಗೆ ಆರೋಗ್ಯ ಭಾಗ್ಯ ನೀಡಿ, ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಶ್ರಮಿಸಿದ ಲಿಂ.ಶಾಂತವೀರ ಪಟ್ಟಾಧ್ಯಕ್ಷರು ದೂರದೃಷ್ಟಿಯುಳ್ಳ ಜನಪರ ಸ್ವಾಮೀಜಿಗಳಾಗಿದ್ದರು ಎಂದು ಹೇಳಿದರು.
ಮಹಾತ್ಮರ ಜೀವನ ದರ್ಶನ ಪ್ರವಚನ ನೀಡಿ ಮಾತನಾಡಿದ ಮುದುಗಲ್‌ನ ಮಹಾಂತ ಸ್ವಾಮೀಜಿ, ಮಾನವನ ಬದುಕಿನಲ್ಲಿ ತಾಯಿ, ಮಹಾತ್ಮ ಮತ್ತು ಪರಮಾತ್ಮ ಅವರ ಆಶೀರ್ವಾದ ಅತೀ ಅವಶ್ಯಕವಾಗಿದೆ. ಅವರ ಸ್ಮರಣೆ ಮತ್ತು ಸೇವೆ ಮಾಡುವುದರ ಮೂಲಕ ಅವರ ಪ್ರೀತಿಗೆ ಪಾತ್ರರಾದಾಗ ಬದುಕು ಪರಿಪೂರ್ಣವಾಗುತ್ತದೆ. ಅಂತಹ ಸ್ಮರಣೀಯರಲ್ಲಿ ಲಿಂ.ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಳೇಬಾಳುದ ಸೋಮಯ್ಯ ಹಿರೇಮಠ ಭಕ್ತಿ ಸಂಗೀತ ಸುಧೆ ಹರಿಸಿದರು. ಡಾ| ಎಸ್.ಬಿ.ಬೆನ್ನೂರ ಮತ್ತು ತಂಡದವರು ಜಾನಪದ ಸಂಗೀತ ಪ್ರಸ್ತುತ ಪಡಿಸಿದರು. ಸಮಾರಂಭದಲ್ಲಿ ಹೋತನಹಳ್ಳಿಯ ಶಂಭುಲಿಂಗ ಪಟ್ಟಾಧ್ಯಕ್ಷರು, ಭೈರನಹಟ್ಟಿಯದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ, ಎಂ.ಎಸ್.ಹಿರೇಮಠ, ಶಂಕರಣ್ಣ ಪಾಟೀಲ, ಚನ್ನವೀರಪ್ಪ ಬೋಳಕಟ್ಟಿ, ಚನ್ನಬಸವ ಹಿರೇಮಠ ಸೇರಿದಂತೆ ಇತರರು ಇದ್ದರು. ಜಿ.ಎಸ್ .ಭಟ್ ಸ್ವಾಗತಿಸಿ, ಶಿವಬಸಯ್ಯ ಆರಾಧ್ಯಮಠ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯದ ಜೊತೆಗೆ ಆರೋಗ್ಯ ಭಾಗ್ಯ ನೀಡಿ, ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಶ್ರಮಿಸಿದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ದೂರದೃಷ್ಟಿಯುಳ್ಳ ಜನಪರ ಸ್ವಾಮೀಜಿಗಳಾಗಿದ್ದರು.
ಸದಾಶಿವ ಸ್ವಾಮೀಜಿ,
ಹುಕ್ಕೇರಿಮಠ, ಹಾವೇರಿ