ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ.
ಪ್ರಿಯ ಹುಣ್ಣಿಮೆ..
ನಿನ್ನ ಬಗೆಗಿನ ಅಷ್ಟೂ ತುಮುಲಗಳನ್ನು ಅರುಹಿ, ವಿವರಿಸುವ ಯಾವ ಸದ್ವಿವಿವೇಕವೂ ಈಗ ನನ್ನಲ್ಲಿಲ್ಲ. ಒಲವು ಹೂಡಿರುವ ಈ ಚಳವಳಿಗೆ ಕಾರಣ ನಿನ್ನದೇ ಕಣ್ಣೋಟ. ಅದು ಪುಸಲಾಯಿಸಿ, ಬೆಂಬಲ ಸೂಚಿಸುವ ರೀತಿ ನಿನ್ನ ಗಮನಕ್ಕಿರಲಿಕ್ಕಿಲ್ಲ. ಅಂತೆಯೇ, ಈ ಅನಿರೀಕ್ಷಿತ ಆಂದೋಲನದಲ್ಲಿ ನನ್ನ ಕುಮ್ಮಕ್ಕೂ ಇಲ್ಲವೆಂದು ಸ್ಪಷ್ಟೀಕರಿಸುವೆ. ಪ್ರೇಮದ ಉಸಿರು ತಾಕುವುದು ಹೃದಯ-ಹೃದಯಗಳಿಗಲ್ಲವೇ?
ನಿನ್ನ ಸನಿಹದ ತಣ್ಣನೆ ಸ್ಪರ್ಷ, ಮತ್ತೆ ಮತ್ತೆ ನನ್ನನ್ನು ಅವಾಕ್ಕಾಗಿ ಮಾಡಿದೆ. ನಿನ್ನ ಆ ನಗು ಉಂಟು ಮಾಡುವ ಅವಾಂತರಗಳಿಗೆ ಏನೆನ್ನಲಿ..? ದಾಹದ ತೊಳಲಿಕೆಯಲ್ಲಿ ದಣಿದವನಿಗೆ ನಿನ್ನ ಹೃದಯದ ಒರತೆಯಿಂದ ಮೊಗೆದು, ತಿಳಿನೀರನ್ನಾದರೂ ಬಸಿದು ಕುಡಿಸು.
ನಿನ್ನ ಮೊದಲ ನೋಟದಲ್ಲೇ ನನ್ನ ಕನಸುಗಳು ಪ್ರಕಾಶಿಸಿದ್ದು. ಆ ಮಲ್ಲಿಗೆಯ ಘಮಲು ಅಮಲೇರಿಸಿದಾಗ. ಬಿಳಿ ಬಣ್ಣದ ಚಿತ್ತಾರದ ಸೀರೆಯ ನೆರಿಗೆಯ ನಡುವಲ್ಲಿ ಬದುಕು ಕಿಸಕ್ಕೆಂದು ನಕ್ಕೀತು. ಕಾಲೇಜು ಕಾರಿಡಾರಿನಲ್ಲಿ “ಪ್ರೀತಿ’ ಎಂಬ ಮಾಯದ ಬಳ್ಳಿ ಹುಟ್ಟಿದ್ದು ಆಗಲೇ.!! ಹುಟ್ಟಿದ್ದಷ್ಟೇ, ನಿನ್ನ ಅವಜ್ಞೆಯನ್ನು ಮೀರಿ ವಿಕಸಿತಗೊಳ್ಳಲೇ ಇಲ್ಲ ನೋಡು. ಆ ಬಿಗುಮಾನ ಕೊನೆಗಾಣಿಸಿ ನನ್ನ ಬಗ್ಗೆ, ಅಲ್ಲಲ್ಲ… ನಮ್ಮಿಬ್ಬರ ಬಗ್ಗೆ ಒಂದಷ್ಟು ಗಂಭೀರವಾಗಿ ಯೋಚಿಸುವ ತುರ್ತಿದೆ. ಆದುದರಿಂದ ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ, ಅಲ್ಲಿ ಕೊನೆಯಿಲ್ಲದೆ ನಗಲಿ ಪ್ರೀತಿ ಲತೆಯ ಹೂವು..
ನಿನ್ನೂರ ದಾರಿಯಲ್ಲಿ ಸಾಲು ಸಾಲು ದೀಪಗಳಂತೆ, ಹೌದೇ..? ಹಾಗಿದ್ದರೆ ತಡ ಮಾಡಬೇಡ. ದೀಪ ದೀಪಗಳ ಬೆಳಕ ನುಂಗಿ ನನ್ನೂರ ಎದೆಯ ಕಗ್ಗತ್ತಲ ಹಾದಿಗೆ ಹುಣ್ಣಿಮೆಯಾಗು.
ನಿರೀಕ್ಷಿತ ಪ್ರೇಮಿ
-ನಾಗರಾಜ ಮಗ್ಗದ, ಕೊಟ್ಟೂರು