Advertisement

ಕಳೆದೆರಡು ವರ್ಷದಂತೆ ಈ ಬಾರಿಯೂ ಹಿಂಗಾರು ತಡ ಸಾಧ್ಯತೆ; ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ

07:57 PM Oct 11, 2019 | mahesh |

ಮಹಾನಗರ: ಮುಗಾರು ಪೂರ್ಣಗೊಂಡು ಅಕ್ಟೋಬರ್‌ ಮೊದಲ ವಾರದಲ್ಲಿ ಕರಾವಳಿ ಭಾಗಕ್ಕೆ ಹಿಂಗಾರು ಅಪ್ಪಳಿಸುವುದು ವಾಡಿಕೆ. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಕಳೆದ ಎರಡು ವರ್ಷಗಳ ಕಾಲ ರಾಜ್ಯಕ್ಕೆ ತಡವಾಗಿ ಹಿಂಗಾರು ಅಪ್ಪಳಿಸಿತ್ತು. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಈ ಬಾರಿಯೂ ವಾಡಿಕೆಗಿಂತ ಎರಡು ವಾರ ತಡವಾಗಿ ಅಂದರೆ ಈ ತಿಂಗಳ ಕೊನೆಯಲ್ಲಿ ಕರಾವಳಿಗೆ ಹಿಂಗಾರು ಆಗಮಿಸುವ ನಿರೀಕ್ಷೆ ಇದೆ.

Advertisement

2017ರಲ್ಲಿ ಅ.24ರಂದು, 2018ರಲ್ಲಿ ನ.3ರಂದು ಹಿಂಗಾರು ಪ್ರವೇಶ ಪಡೆದಿತ್ತು. ಹವಾಮಾನ ಇಲಾಖೆಯ ವಾಡಿಕೆಯಂತೆ ಸದ್ಯ ಮುಂಗಾರು ಪೂರ್ಣಗೊಂಡರೂ, ಮುಂಗಾರು ಮಾರುತಗಳು ಇನ್ನೂ ನಿರ್ಗಮಿಸಲಿಲ್ಲ. ವಾತಾವರಣದಲ್ಲಿ ತೇವಾಂಶ ಇದ್ದು, ಇದೇ ಕಾರಣಕ್ಕೆ ಮುಂದಿನ ಮೂರು ವಾರಗಳ ಕಾಲ ಹಿಂಗಾರು ಪ್ರಭಲಗೊಳ್ಳುವುದು ಅನುಮಾನ.

ವಾತಾವರಣದ ಗಾಳಿಯಲ್ಲಿ ತೇವಾಂಶ ಜಾಸ್ತಿ ಇರುವ ಕಾರಣದಿಂದಾಗಿ ಗರಿಷ್ಠ ಉಷ್ಣಾಂಶ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅ.1ರಂದು 32.4 ಡಿ.ಸೆ. ಇದ್ದ ಗರಿಷ್ಠ ಉಷ್ಣಾಂಶ ಅ.11ರಂದು 34 ಡಿ.ಸೆ.ಗೆ ಏರಿಕೆಯಾಗಿದೆ. ಇದರೊಂದಿಗೆ ಕಳೆದ ವರ್ಷದ ಅಕ್ಟೋಬರ್‌ ತಿಂಗಳಿಗೆ ಹೋಲಿಕೆ ಮಾಡಿದರೆ ಈ ವರ್ಷದ ಗರೀಷ್ಠ ಉಷ್ಣಾಂಶ ದಾಖಲೆಯ ಗಡಿಯತ್ತ ತಲುಪುತ್ತಿದೆ.

ಕಳೆದ ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಕಳೆದ ವರ್ಷ ಅ.27ರಂದು ಜಿಲ್ಲೆಯಲ್ಲಿ 36.1 ಡಿ.ಸೆ. ಗರೀಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಅಕ್ಟೋಬರ್‌ ತಿಂಗಳ ಸಾರ್ವಕಾಲಿಕ ದಾಖಲೆ. ಸದ್ಯ 34 ಡಿ.ಸೆ. ಸರಾಸರಿ ಉಷ್ಣಾಂಶವಿದ್ದು, ಮಧ್ಯಾಹ್ನದ ವೇಳೆ ಮತ್ತಷ್ಟು ಏರಿಕಾಯಾಗುತ್ತಿದೆ. ಕಳೆದ ನಾಲ್ಕು ದಿನಗಳಿಗೆ ಹೋಲಿಕೆ ಮಾಡಿದಾಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅ.8ರಂದು 32 ಡಿ.ಸೆ. ಇತ್ತು.ಅ.9, 10ರಂದು 33 ಮತ್ತು ಅ.11ರಂದು 34 ಡಿ.ಸೆ.ಗೆ ಏರಿಕೆಯಾಗಿದೆ. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಮುಂದಿನ ಒಂದು ವಾರಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ದ.ಕ.ದಲ್ಲಿ ಶೇ.31 ಮಳೆ ಕೊರತೆ
ಅ.1 ರಿಂದ ಅ.10ರವರೆಗೆ ದ.ಕ. ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ಕೊರತೆ ಇದೆ. ಬಂಟ್ವಾಳದಲ್ಲಿ ಶೇ.78, ಮಂಗಳೂರಿನಲ್ಲಿ ಶೇ.75, ಪುತ್ತೂರಿನಲ್ಲಿ ಶೇ.22, ಸುಳ್ಯದಲ್ಲಿ ಶೇ.21ಮಳೆ ಕೊರತೆ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ ಶೇ.1ರಷ್ಟು ಮಳೆ ಹೆಚ್ಚಾಗಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.14ರಷ್ಟು ಮಳೆ ಕೊರತೆ ಇದೆ.

Advertisement

ಹಿಂಗಾರಿಗೆ ಇನ್ನೂ ಎರಡು ವಾರ
ಕರಾವಳಿ ಭಾಗಗಳಲ್ಲಿ ಕಳೆ ಕೆಲ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ ಹೆಚ್ಚಾಗುತ್ತಿದೆ. ಮುಂದಿನ ಒಂದು ವಾರಗಳು ಇದೇ ರೀತಿ ಮುಂದುವರೆಯಬಹುದು. ಮುಂದಿನ ದಿನಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಬಹುದು. ಮುಂಗಾರು ಮಾರುತ ಸದ್ಯ ನಿರ್ಗಮಿಸದ ಕಾರಣ, ಹಿಂಗಾರು ಪ್ರವೇಶಕ್ಕೆ ಇನ್ನೂ, ಎರಡು ವಾರಗಳು ತಗುಲಬಹುದು.
– ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next