Advertisement
ಇದು ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಆಗ ನನಗೆ ಹಾಡುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಹಾಡು ಕೇಳುವ ಹವ್ಯಾಸ ಸ್ವಲ್ಪ ಮಟ್ಟಿಗೆ ಹೊಂದಿದ್ದೆ, ಅಷ್ಟೆ. ಆ ಸಮಯದಲ್ಲಿ ಮುಂಗಾರು ಮಳೆ 2 ಚಿತ್ರದ ಹಾಡುಗಳು ಬಿಡುಗಡೆಯಾಗಿ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಲು ಆರಂಭಿಸಿದ್ದುವು. ಜಯಂತ್ ಕಾಯ್ಕಿಣಿಯವರ ಸಾಹಿತ್ಯವು ದೊಡ್ಡಮಟ್ಟಿನ ಮಾಯಾಜಾಲವನ್ನೇ ಸೃಷ್ಟಿಸಿತ್ತು. ಅರ್ಜುನ್ ಜನ್ಯ ನೀಡಿದ್ದ ಸಂಗೀತವು ಕಿವಿಗೆ ಹಿತವನ್ನುಂಟುಮಾಡಿತ್ತು. ಮೆಲೋಡಿ ಹಾಡುಗಳೆಂದರೆ ನನ್ನ ನೆಚ್ಚಿನ ಸೋನುನಿಗಮ್ ಹಾಡಿದರಷ್ಟೇ ಸೂಕ್ತ ಎಂದುಕೊಂಡಿದ್ದ ನನಗೆ ಅರ್ಮಾನ್ ಮಲ್ಲಿಕ್‌ರವರ ಧ್ವನಿಯು ಕಿವಿಗೆ ಇಂಪಾಗಿ ಕೇಳಿಸಿತ್ತು. ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಮಟ್ಟಿನ ಒಲವು ಹೊಂದಿದ್ದ ನನಗೆ ಈ ಹಾಡಿನಿಂದ ಅದು ಇನ್ನಷ್ಟು ಹೆಚ್ಚಾಯಿತು. ಆ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗಿದ್ದವಾದರೂ “ಸರಿಯಾಗಿ’ ಹಾಡು ಮಾತ್ರ ನನ್ನಲ್ಲಿ ಗುಂಗು ಹಿಡಿಸಿತ್ತು. ಆ ಹಾಡಿನ ಕೆಲವು ಸಾಲುಗಳು ಹಾಡಿನ ಕುರಿತಂತೆ ಆಸಕ್ತಿ ಹೆಚ್ಚಲು ಕಾರಣವಾಯಿತು. ಆ ಹಾಡು ನನ್ನಲ್ಲಿ ಚಿತ್ರಗೀತೆಗಳ ಬಗ್ಗೆ ಆಸಕ್ತಿಯನ್ನು ಕೆರಳಿಸಿತ್ತು ಎಂದೇ ಹೇಳಬಹುದು. ನಂತರ ಹಲವು ಹಾಡುಗಳು ಇಷ್ಟವಾಗಿದ್ದವಾದರೂ “ಸರಿಯಾಗಿ’ ಯಷ್ಟು ರುಚಿಸಲಿಲ್ಲ. ಕನ್ನಡ ಚಿತ್ರರಂಗ ದಲ್ಲಿ ಇನ್ನಷ್ಟು ಅಂತಹ ಹಾಡುಗಳು ಬಂದರೆ ಉತ್ತಮ.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಂಗಳಗಂಗೋತ್ರಿ