Advertisement

ಥೇಟ್‌ ಪಾಲಿಕೆ ಸಾಮಾನ್ಯ ಸಭೆಯಂತೆ!

11:42 AM Oct 08, 2017 | |

ಹುಬ್ಬಳ್ಳಿ: ಅವಳಿನಗರ ವಿವಿಧ ಸಮಸ್ಯೆ ಕುರಿತು ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆ ಗೊಂದಲ, ವಾಗ್ವಾದ, ರಾಜಕೀಯ ಆರೋಪ- ಪ್ರತ್ಯಾರೋಪಗಳಿಂದ ಥೇಟ್‌ ಪಾಲಿಕೆ ಸಾಮಾನ್ಯ ಸಭೆಯಂತೆ ಗೋಚರವಾಯಿತು. ಪ್ರಮುಖವಾಗಿ ಅವಳಿನಗರದ ರಸ್ತೆ, ಸ್ವತ್ಛತೆ, ಕುಡಿಯುವ ನೀರು, ಬಿಆರ್‌ಟಿಎಸ್‌ ಇನ್ನಿತರ ವಿಷಯಗಳ  ಕುರಿತಾಗಿ ಕರೆಯಲಾಗಿದ್ದ ಸಭೆ ಅನೇಕ ಬಾರಿ ಗೊಂದಲದ ಗೂಡಾಯಿತು. ಸಾರ್ವಜನಿಕರನ್ನೂ ಆಹ್ವಾನಿಸಿದ್ದರಿಂದ ಸಭೆಯೇ ಅರ್ಥ ಕಳೆದುಕೊಂಡಂತೆ ಭಾಸವಾಯಿತು.  

Advertisement

ಮೇಯರ್‌-ಆಯುಕ್ತರ ಜಟಾಪಟಿ: ಮಹಾನಗರ ಅಭಿವೃದ್ಧಿ ಕುರಿತು ವಿವರಿಸಬೇಕಾದ ಹಾಗೂ ಬೇಡಿಕೆ ಮಂಡಿಸಬೇಕಾದ ಮಹಾಪೌರ ಹಾಗೂ ಆಯುಕ್ತರೇ ಆಡಳಿತ- ವಿಪಕ್ಷದವರಂತೆ ಜಟಾಪಟಿಗೆ ಮುಂದಾದರು. ಮಹಾಪೌರ ಡಿ.ಕೆ. ಚವ್ಹಾಣ ಮಾತನಾಡಿ, ಪಾಲಿಕೆಯಲ್ಲಿ ಯಾವುದೇ ಕಡತಗಳು ವಿಲೇವಾರಿ ಆಗುತ್ತಿಲ್ಲ. ಆಯುಕ್ತರು ಎಲ್ಲವನ್ನು ತಡೆ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ಇದರಿಂದ ಕೆರಳಿದ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಅವಳಿನಗರದಲ್ಲಿ ಅಂದಾಜು 300 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಕಾನೂನುಬದ್ಧ ಕಡತಗಳನ್ನು ವಿಲೇವಾರಿ ಮಾಡಿದ್ದೇನೆ. ಮಹಾಪೌರರು 10ಲಕ್ಷ ವೆಚ್ಚದ ಕಾಮಗಾರಿಯನ್ನು ಅಂದಾಜು ವೆಚ್ಚ ತಯಾರಿಲ್ಲದೆ ಟೆಂಡರ್‌ ಕರೆಯಿರಿ ಎಂದಿದ್ದರು. 

ಅದು ಕಾನೂನುಬಾಹಿರವಾಗಿದ್ದರಿಂದ ಅವಕಾಶ ನೀಡಿಲ್ಲ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇಬ್ಬರ ನಡುವೆ ವಾಗ್ವಾದ ಹೆಚ್ಚಿದ್ದರಿಂದ ಸಚಿವರು, ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಇಬ್ಬರನ್ನು ಸುಮ್ಮನಾಗಿಸಿದರು. ಅವಳಿನಗರದಲ್ಲಿ ಸ್ವತ್ಛತೆ, ವಿದ್ಯುತ್‌ ನಿರ್ವಹಣೆ ಇನ್ನಿತರ ಕಾಮಗಾರಿಗಳನ್ನು ಕೆಲವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ.

ಕೆಲ ಪಾಲಿಕೆ ಸದಸ್ಯರ ಸಂಬಂಧಿಕರು, ಪಾಲಿಕೆ ಸಿಬ್ಬಂದಿ ಸಂಬಂಧಿಕರು ಗುತ್ತಿಗೆದಾರರಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಪಾಲಿಕೆ ಸದಸ್ಯರ ಜವಾಬ್ದಾರಿಯೂ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆಗೆ ಪಾಲಿಕೆ ಬಿಜೆಪಿ ಸದಸ್ಯರಾದ ವೀರಣ್ಣ ಸವಡಿ, ಶಿವು ಹಿರೇಮಠ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ವಾಗ್ವಾದ ನಡೆದಾಗ ಮಧ್ಯ ಪ್ರವೇಶಿಸಿದ ಸಚಿವರು, ಹೊರಟ್ಟಿಯವರು ಹೇಳಿದ್ದರಲ್ಲಿ ತಪ್ಪೇನಿದೆ. ಕೆಲ ಸಿಬ್ಬಂದಿ ಪತ್ನಿ ಹೆಸರಲ್ಲಿ ಗುತ್ತಿಗೆ ಇದೆ. ಹೊರಗಿನವರು ಗುತ್ತಿಗೆ ಪಡೆಯಲು ಬಂದರೆ ಸ್ಥಳೀಯರು ಕೆಲಸ ಮಾಡಲು ಬಿಡದ ಸ್ಥಿತಿ ಇದೆ. ಅವರು ಯಾವುದೇ ಪಕ್ಷದ ಪಾಲಿಕೆ ಸದಸ್ಯರು ಎಂದು ಹೇಳಿಲ್ಲ. ಎಲ್ಲ ಸದಸ್ಯರ ಜವಾಬ್ದಾರಿ ಇದೆ ಎಂದಿದ್ದಾರೆ ಎಂದರು. 

ಸಿಆರ್‌ಎಫ್ ನಿಧಿ ವಿಚಾರ ಪ್ರಸ್ತಾಪವಾದಾಗ ಇದು ಕೇಂದ್ರದಿಂದ ಬಂದ ಹಣ ಎಂಬ ಶಾಸಕ ಅರವಿಂದ ಬೆಲ್ಲದ ಹೇಳಿಕೆಗೆ ಸಚಿವ ವಿನಯ ಕುಲಕರ್ಣಿ ಆಕ್ಷೇಪ ವ್ಯಕ್ತಪಡಿಸಿದರು. ಕೇವಲ ಕೇಂದ್ರದ ಅನುದಾನ ಎಂದು ದಾರಿ ತಪ್ಪಿಸುವ ಕೆಲಸ ಬೇಡ. ತೈಲ ಬಳಕೆ ಸೆಸ್‌ ರೂಪದಲ್ಲಿ ರಾಜ್ಯದ ಜನರ ಹಣ ಅದಾಗಿದ್ದು, ಅದರಲ್ಲಿ ರಾಜ್ಯದ ಜನತೆ ಪಾಲು ಇದೆ ಎಂದಾಗ ವಾಗ್ವಾದ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next