Advertisement

ಸಂವಿಧಾನ ಭಗವದ್ಗೀತೆ ಇದ್ದಂತೆ: ಕಾಗೇರಿ

11:03 PM Jul 31, 2019 | Team Udayavani |

ವಿಧಾನಸಭೆ: “ನಾನು ಎಬಿವಿಪಿ, ಆರ್‌ಎಸ್‌ಎಸ್‌, ಬಿಜೆಪಿಯಿಂದ ಬಂದವನು. ಅದಕ್ಕೆ ಹೆಮ್ಮೆಯಿದೆ. ಆದರೆ, ಸಂವಿಧಾನವೇ ಭಗವದ್ಗೀತೆ ಇದ್ದಂತೆ. ಸಂವಿಧಾನದಡಿ ರಾಜ್ಯ ವಿಧಾನಮಂಡಲದ ನಿಯಮಾವಳಿ ಪ್ರಕಾರವೇ ನಾನು ಕೆಲಸ ಮಾಡಲಿದ್ದೇನೆ’ ಎಂದು ನೂತನ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ವಿಧಾನಸಭೆಯಲ್ಲಿ ಬುಧವಾರ ಸ್ಪೀಕರ್‌ ಆಗಿ ಆಯ್ಕೆಯಾದ ನಂತರ ಸದಸ್ಯರ ಶುಭ ಹಾರೈಕೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನವೇ ಶ್ರೇಷ್ಠ. ಅದುವೇ ಭಗವದ್ಗೀತೆ ಇದ್ದಂತೆ. ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಹೊಸ ಸದಸ್ಯರಿಗೆ ಹೆಚ್ಚು ಮಾತನಾಡಲು ಅವಕಾಶ ಕೊಡುತ್ತೇನೆ.

ಆದರೆ, ಸದಸ್ಯರು ಪೂರ್ಣ ಪ್ರಮಾಣದಲ್ಲಿ ಸದನದಲ್ಲಿ ಹಾಜರಿರಬೇಕು. ಚರ್ಚೆ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು. “ನಾನು 1994ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಬಂದಾಗ ರಮೇಶ್‌ಕುಮಾರ್‌ ಅವರು ಸ್ಪೀಕರ್‌ ಆಗಿದ್ದರು. ಹೊಸಬರಿಗೆ ಅವರು ಅವಕಾಶ ನೀಡುತ್ತಿದ್ದರು. ರಮೇಶ್‌ಕುಮಾರ್‌ ಅವರಿಂದ ರಮೇಶ್‌ಕುಮಾರ್‌ ಅವರವರೆಗೆ ಸ್ಪೀಕರ್‌ ಪೀಠ ಅಲಂಕರಿಸಿದ ನಂತರ ನಾನು ಇದೀಗ ಅಲಂಕರಿಸುತ್ತಿದ್ದೇನೆ’ ಎಂದು ಸ್ಮರಿಸಿದರು.

ಸಭಾಧ್ಯಕ್ಷ ಪೀಠದಲ್ಲಿ ಆಸೀನರಾದ ನಂತರ ಮಾತನಾಡಿದ ಅವರು, “ನನಗೆ ಈ ಸ್ಥಾನಕ್ಕೇರಲು ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ತಂದೆ-ತಾಯಿ, ಕ್ಷೇತ್ರದ ಜನತೆ, ರಾಜ್ಯದ ಜನತೆಯನ್ನೂ ಸ್ಮರಿಸಿಕೊಳ್ಳುತ್ತೇನೆ. ಇಂತಹ ಸ್ಥಾನದಲ್ಲಿ ಅಲಂಕರಿಸಿರುವುದು ನನ್ನ ಸುದೈವ’ ಎಂದು ಹೇಳಿದರು. ಈ ಹಂತಕ್ಕೆ ಬರಲು ಪಿ.ವಿ.ಕೃಷ್ಣಭಟ್‌, ದತ್ತಾತ್ರೇಯ ಹೊಸಬಾಳೆ, ಯಡಿಯೂರಪ್ಪ, ಅನಂತಕುಮಾರ್‌ ಅವರೂ ಕಾರಣ ಎಂದು ಹೇಳಿದರು.

ಕಣ್ತುಂಬಿಕೊಂಡ ಕುಟುಂಬ ವರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಾಯಿ, ಪತ್ನಿ, ಪುತ್ರಿಯರು ಸೇರಿ ಕುಟುಂಬ ವರ್ಗ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಸಭಾಧ್ಯಕ್ಷರಾಗಿ ಆಯ್ಕೆಯಾದ ಕ್ಷಣಗಳನ್ನು ಕಣ್ತುಂಬಿಕೊಂಡರು. ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಲು ಸ್ವ ಕ್ಷೇತ್ರದಿಂದ ಕಾರ್ಯಕರ್ತರು, ಗಣ್ಯರು ಆಗಮಿಸಿ ಸ್ಪೀಕರ್‌ ಕಚೇರಿಯಲ್ಲಿ ಶುಭ ಕೋರಿದರು.

Advertisement

ನಮ್ಮ ಮನೆತನದಲ್ಲಿ ಇವನು ದೊಡ್ಡವ. ಈಗ ಸಿಕ್ಕಿರುವ ಸ್ಥಾನವನ್ನು ನಡೆಸಿಕೊಂಡು ಹೋಗುತ್ತಾನೆ. ಜನರನ್ನು ನಿಭಾಯಿಸಿಕೊಂಡು ಹೋಗಿದ್ದಾನೆ. ಮುಂದೆಯೂ ಚೆನ್ನಾಗಿ ನಿಭಾಯಿಸುತ್ತಾನೆ. ದೇವರು ಒಳ್ಳೆಯದು ಮಾಡಲಿ.
-ಸರ್ವೇಶ್ವರಿ, ತಾಯಿ

ನನಗೆ ಹೆಚ್ಚು ಖುಷಿ ಆಗ್ತಿದೆ. ಇನ್ನೂ ಹೆಚ್ಚು ಹುದ್ದೆಗಳು ಸಿಗಲಿ, ಹೀಗೇ ಮುಂದುವರಿಯಲಿ. ದೇವರು ಒಳ್ಳೆಯದು ಮಾಡಲಿ.
-ಭಾರತಿ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next