ಲಾಕ್‌ಡೌನ್ ಮೌನದೊಳಗೆ ಹತ್ತು ಹಲವು ಚಾಲೆಂಜುಗಳು ಬಂದು ಹೋದವು. ನಾರಿಮಣಿಯರದ್ದೇ ಮೇಲುಗೈ ಎಂಬಂತೆ, ಅವರಿಗೆ ಸಂಬಂಧಿಸಿದ್ದೇ ಹೆಚ್ಚು. ಅವೆಲ್ಲದರ ನಡುವೆ, ಒಂದು ದಿನ ನೂರಾರು ಸ್ನೇಹಿತರು, ಸದಾ ಕುಟ್ಟುವ ಕಂಪ್ಯೂಟರ್ ಕೀಲಿಮಣೆಯಿಂದಲೋ, ಮೊಬೈಲಿನಿಂದಲೋ ಕೈಕಿತ್ತು, ಬಿಳಿಯ ಹಾಳೆಯ ಮೇಲೆ ತಮಗಿಷ್ಟವಾದ ಸಾಲುಗಳನ್ನು ಗೀಚಿ ಹಾಕುತ್ತಿದ್ದುದು ಮೋಜೆನಿಸಿತು. ಬರೆಯಲು ಮರೆತ, ಕೈ ತಡವರಿಸಿದ ಅಕ್ಷರಗಳು ಸೊಟ್ಟಗಿದ್ದರೂ, ಒಂದಕ್ಕಿಂತ ಒಂದು ಒಳ್ಳೆಯ ಸಾಲುಗಳು ಫೇಸ್ ಬುಕ್ಕಿನ ತುಂಬಾ ಹರಿದಾಡಿದವು. “ಹಾಗೇ ಟೈಪ್ ಮಾಡಿ ಹಾಕಿದ್ರೂ ಆಗಿತ್ತಪ್ಪ.
ಈ ಕಾಗೆಕಾಲಿನ ಅಕ್ಷರ ನೋಡುವುದೇ ಹಿಂಸೆ’ ಎಂದು ಸಂಗಾತಿ ಹೇಳಿದಾಗ, ನನಗೆ ರಾಮಣ್ಣ ಮಾಸ್ತರರು ನೆನಪಾದರು, ಜೊತೆಗೆ, ಹೇಗೆ ಬರೆದರೂ ಪಕ್ಷಿಪಾದವನ್ನೇ ನೆನಪಿಸುವ ಅಕ್ಷರವನ್ನು, ಮುತ್ತಿನಂತಾಗಿಸಬೇಕೆಂಬ ಸುತ್ತಲಿನ ಒತ್ತಡವೂ! ಅಂದು ಮಾಸ್ತರರಿಗೆ ನನ್ನ ಮೇಲೆ ಭಯಂಕರ ಕೋಪ ಬಂದಿತ್ತು. ಎಲ್ಲ ಉತ್ತರಗಳು ಸರಿ ಇದ್ದರೂ ಒಂದು ಅಂಕ ಕಳೆದು- “ಇದು ನಿನ್ನ ಕೆಟ್ಟ ಅಕ್ಷರದಿಂದ’ ಅಂದಿದ್ದರು. “ನಿನ್ನ ಚಿಕ್ಕಪ್ಪನೂ ನನ್ನ ವಿದ್ಯಾರ್ಥಿ ಆಗಿದ್ದರು. ಎಷ್ಟು ಚಂದವಿತ್ತು ಅವರ ಅಕ್ಷರ… ನಿನ್ನ ಅಕ್ಕಂದಿರು, ಎಷ್ಟು ಚಂದ ಮಾಡಿ ಬರೀತಾರೆ.. ನೀನು ಮಾತ್ರ ಕಾಗೆಕಾಲು ಮಾಡಿ ಬರೆಯವುದು ಯಾಕೆ?’
ಎಂದು ಎಲ್ಲರ ಮುಂದೆ ಬೈದಿದ್ದರು. ಅಕ್ಷರ ಚಂದ ಮಾಡಿ ಬರೆಯುತ್ತಿದ್ದ ಚಿಕ್ಕಪ್ಪಂದಿರ, ಅಕ್ಕಂದಿರ ಮೇಲೆ ನನಗೆ ಸಿಟ್ಟು ಬಂದಿತ್ತು ವಿನಾ, ಅವರಂತೆ ನಾನೂ ಚಂದ ಮಾಡಿ ಬರೆಯಬೇಕೆಂದು ಳೆದಿರಲೇ ಇಲ್ಲ! ಪ್ರಾಥಮಿಕ ಶಾಲೆಯಲ್ಲಿದ್ದಾಗ ಏಪ್ರಿಲ- ಮೇ ತಿಂಗಳ ದೊಡ್ಡರಜೆಯಲ್ಲಿ, ದಿನಕ್ಕೊಂದು ಪುಟ ಕಾಪಿ ಬರೆಯಬೇಕೆಂಬುದು ದೊಡ್ಡ ಹೊರೆ ಕೆಲಸ. ಐದನೇ ತರಗತಿಯ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಕಾರಣ, ಆಗ ಕನ್ನಡ, ಇಂಗ್ಲಿಷು, ಹಿಂದಿ ಮೂರರ ಕಾಪಿ ಬರೆಯಬೇಕಿತ್ತು. ದಿನಕ್ಕೊಂದು ಪುಟ ಅಂದರೆ, ಬರೆಯುವುದಕ್ಕೆಷ್ಟಾಯಿತು!? ನಾನೋ, ಮಹಾ ಸೋಮಾರಿ.
ನಾಳೆ ನಾಳೆ ಅಂದುಕೊಂಡು ದಿನದೂಡಿ ಮೇ ಇಪ್ಪತ್ತೈದು ದಾಟುವಾಗ, ನನಗೆ ನಾಭಿಯಿಂದ ನಡುಕ ಹುಟ್ಟುತ್ತಿತ್ತು. ಬಾಕಿ ಉಳಿದಿರುವ ಆರೇ ದಿನಗಳಲ್ಲಿ ಎಲ್ಲವನ್ನೂ ಬರೆದು ಮುಗಿಸುವುದು ಹೇಗೆ? ಮುಂದಿನ ದಾರಿ, ಅಜ್ಜನಿಗೆ ಕೇಳಿಸುವಂತೆ ಅಳುವುದು. ಅದೂ, ಅಪ್ಪ ಮನೆಯಲ್ಲಿಲ್ಲದ ಹೊತ್ತು. ನನ್ನ ಅಳುವಿನ ಕಾರಣ ಗೊತ್ತಿದ್ದ ಅಮ್ಮ, ನಿರ್ಲಕ್ಷ್ಯ ಮಾಡುತ್ತಿದ್ದರು. ಅಕ್ಕಂದಿರು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಅಜ್ಜನಿಗೆ ನನ್ನಲ್ಲಿ ಪ್ರೀತಿ ಹೆಚ್ಚು. ಕಾರಣ ತಿಳಿದುಕೊಂಡು ಅಕ್ಕಂದಿರನ್ನು ಕರೆಸಿ, ಹಿಂದಿಕಾಪಿಯನ್ನು ದೊಡ್ಡಕ್ಕನೂ, ಇಂಗ್ಲಿಷ್ ಕಾಪಿಯನ್ನು ಚಿಕ್ಕಕ್ಕನೂ ಬರೆಯುವಂತೆ ಆದೇಶಿಸುತ್ತಿದ್ದರು.
ಕನ್ನಡದ ಕಾಪಿ ಬರೆವ ಕೆಲಸ ನನಗೆ! ಅಂತೂ, ನೂರಿಪ್ಪತ್ತು ಪುಟದಿಂದ ವಿನಾಯಿತಿ ಪಡೆದು ಅರುವತ್ತು ಪುಟ ಬರೆದರಾಯಿತಲ್ಲ! ಅಜ್ಜನ ಮಾತಿಗೆ ಎದುರಾಡದ ಅಕ್ಕಂದಿರು ನನ್ನನ್ನು ಸುಡುವಂತೆ ನೋಡಿ, ಬರೆಯುವ ಯಜ್ಞಕ್ಕೆ ಮೊದಲುಗೊಳ್ಳುತ್ತಿದ್ದರು. ಶಾಲೆ ಪ್ರಾರಂಭವಾಗುವ ದಿನ “ಶಹಭಾಶು ನನಗೇ. ಸ್ವಲ್ಪ ಸುಧಾರಿಸಿದೆ ನಿನ್ನ ಅಕ್ಷರ’ ಎಂದು ಮಾಸ್ತರರೆಂದರೆ, ನನಗೆ ಛಳಿ ಹಿಡಿದಂತಾಗುತ್ತಿತ್ತು. ಅವರೆದುರೇ “ಒಮ್ಮೆ ಬರೆದು ತೋರಿಸು’ ಅಂದರೇನು ಗತಿ! ಇಂತಿದ್ದ ನನಗೆ ನನ್ನ ಅಕ್ಷರ ಕೆಟ್ಟದ್ದು ಅನ್ನಿಸಿದ್ದು ಹೈಸ್ಕೂಲಿನಲ್ಲಿ. ವೆಂಕಟೇಶ ತುಳುಪುಳೆ ಎಂಬ ಮಾಸ್ತರು, ಅದೇ ವರ್ಷ ವರ್ಗಾವಣೆಯಾಗಿ ನಮ್ಮ ಶಾಲೆಗೆ ಬಂದರು.
ಅವರು ಬೋರ್ಡಿನ ಮೇಲೆ ಬರೆಯುವ ಅಕ್ಷರ ಬಹಳ ಮುದ್ದಾಗಿರುತ್ತಿತ್ತು. ಅವರ ಅಕ್ಷರವನ್ನು ಮಾದರಿಯಾಗಿಟ್ಟುಕೊಂಡು, ಕಾಪಿ ಬರೆಯಲಾರಂಭಿಸಿದೆ. ತಂದೆಯವರ ಅಕ್ಷರವನ್ನೂ ಅನುಕರಣೆ ಮಾಡಿದೆ. ಅಂತೂ, ನನ್ನ ಅಕ್ಷರಕ್ಕೆ ಒಂದು ರೂಪ ಬಂತು. ಇಂಗ್ಲಿಷು ಬೋಧಿಸುತ್ತಿದ್ದ ಸದಾಶಿವ ಬೈಪಡಿತ್ತಾಯ ಮಾಸ್ತರರು, ಆಗ ಹೊಸದಾಗಿ ಇಟಾಲಿಕ್ಸ್‌ನಲ್ಲಿ ಬರೆಯಬೇಕೆಂದು ಸೂಚಿಸಿದ್ದರು. ಇಂಡಿಯನ್ ಅಕ್ಷರವನ್ನೇ ಒಲಿಸಿಕೊಳ್ಳಲಾಗದ ನನಗೆ, ಇಟಾಲಿಕ್ಸ್ ಒಲಿದೀತೇ? ಅಪ್ಪ ಅದಕ್ಕಾಗಿ, ಪ್ರಿಂಟೆಡ್ ಚುಕ್ಕೆಗಳಿರುವ ಪುಸ್ತಕವನ್ನೂ ನನಗಾಗಿ ತರಿಸಿದ್ದರು. ನನ್ನ ಅಕ್ಷರ ಮಾತ್ರ, ನಾನು ಇರೋದೇ ಹೀಗೆ ಎಂದು ಸ್ಥಾಣುವಾಯಿತು!
ಚಂದ ಬರಿ ಅನ್ನುತ್ತಿದ್ದ ಹೆತ್ತವರು, ಗುರುಗಳು, ಸಂಗಾತಿ ಎಲ್ಲರ ಸರದಿ ಮುಗಿದು, ಈಗ ಮಕ್ಕಳದೂ ಶುರುವಾಗಿದೆ! “ನೀನು ಬರೆದದ್ದು ಎಂತಂತಲೇ ಗೊತ್ತಾಗುದಿಲ್ಲಮ್ಮ. ಅಪ್ಪ ಎಷ್ಟು ಚಂದ ಬರೀತಾರೆ’- ಎಂದರು ಮಕ್ಕಳು. ಅವರಿಂದ ಪಾರಾಗಲು- ಹಣೆಬರಹವೇ ಒಂದೇ ಥರ ಇಲ್ಲದ ಮೇಲೆ, ಮನುಷ್ಯರ ಕೈಬರಹ ಒಂದೇ ಥರ ಚಂದವಿರಲು ಸಾಧ್ಯವೇ!’ ಅಂದೆ. ನಾನು ಹೇಳಿದ್ದು ಅರ್ಥವಾಗದೇ ಮಿಕಮಿಕ ನೋಡುವ ಸರದಿ ಅವರದ್ದು.
***
ಫೇಸ್‌ಬುಕ್‌ನಲ್ಲಿ ಕಾಣಿಸಿದ ಹ್ಯಾಂಡ್ ರೈಟಿಂಗ್ ಚಾಲೆಂಜ್ ಟ್ರೆಂಡ್ ನಿಂದಾಗಿ, ಅಕ್ಷರಲೋಕದ ಅಂಗಳದಲ್ಲಿ ಸುತ್ತಾಡುತ್ತಲೇ, ನನ್ನ ಬಾಲ್ಯ, ನನ್ನ ಶಾಲೆ, ಮಾಸ್ತರು, ನಮ್ಮ ಅಕ್ಷರವನ್ನು ದುಂಡಾಗಿಸಲು ಅವರು ಪಟ್ಟ ಪ್ರಯತ್ನ, ಸೊಟ್ಟ ಅಕ್ಷರಗಳಿಂದ ಆಗುತ್ತಿದ್ದ ಫಜೀತಿ… ಉಫ್, ಎಷ್ಟೆಲ್ಲಾ ನೆನಪಾಯಿ ತಲ್ಲ? ಅಂದಹಾಗೆ, ನಿಮ್ಮದು ದುಂಡಗಿನ ಅಕ್ಷರವೋ, ಅಥವಾ ಕೋಳಿ ಕಾಳಿನ…
* ಆರತಿ ಪಟ್ರಮೆ, ತುಮಕೂರು