Advertisement

ಫ‌ುಟ್ಪಾತ್‌ ತರ; ಆದ್ರೆ ಫ‌ುಟ್ಪಾತಲ್ಲ

07:59 AM Jul 19, 2019 | Team Udayavani |

ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳಿಗೂ ಜಾಗವಿಲ್ಲ ಎಂಬ ಕೊರಗು ಆಗಾಗ್ಗೆ ಕೇಳಿಬರುತ್ತದೆ. ಆದರೆ, ಇಲ್ಲೊಂದು ಪಾದಚಾರಿ ಮಾರ್ಗ ಇದೆ. ನೀವು ಅಲ್ಲಿ ಕುಳಿತು ಊಟ ಮಾಡಲು ಡೈನಿಂಗ್‌ ಟೇಬಲ್ಗಳು, ಮಲಗಲು ಮೆತ್ತನೆಯ ಹಾಸಿಗೆ-ದಿಂಬು, ಆರಾಮದಾಯಕ ಸೋಫಾ ಸೆಟ್‌ಗಳು ಕೂಡ ಇವೆ. ಆದರೆ, ಫ‌ುಟ್ಪಾತ್‌ ಇಲ್ಲ!

Advertisement

ಶಿವಾಜಿನಗರದ ಸೆಂಟ್ರಲ್ ಸ್ಟ್ರೀಟ್ ಪಾದಚಾರಿ ಮಾರ್ಗದುದ್ದಕ್ಕೂ ದೊಡ್ಡ ದೊಡ್ಡ ಮಂಚ, ಹಾಸಿಗೆ, ತಲೆದಿಂಬು, ಸೋಫಾ, ಕುರ್ಚಿ, ಡೈನಿಂಗ್‌ ಟೇಬಲ್ಗಳೆಲ್ಲಾ ಇವೆ. ಹಾಗಂತ ಅವುಗಳಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು ಎಂದುಕೊಂಡರೆ ನಿಮ್ಮ ಆಲೋಚನೆ ತಪ್ಪು. ಅವುಗಳೆಲ್ಲ ಪಾದಚಾರಿ ಮಾರ್ಗವನ್ನು ಸಂಪೂರ್ಣ ಅತಿಕ್ರಮಿಸಿ ಮಾರಾಟಕ್ಕಿಟಿರುವ ಉಪಕರಣಗಳು.

ಎಂ.ಜಿ. ರಸ್ತೆ ಹಾಗೂ ಕಬ್ಬನ್‌ ರಸ್ತೆ ಕಡೆಯಿಂದ ಶಿವಾಜಿನಗರಕ್ಕೆ ತೆರಳುವ ಸೆಂಟ್ರಲ್ ಸ್ಟ್ರೀಟ್ ರಸ್ತೆ ಪ್ರಮುಖ ಮಾರ್ಗವಾಗಿದ್ದು, 60 ಅಡಿ ಅಗಲದ ಸುಮಾರು 500 ಮೀಟರ್‌ ಉದ್ದದ ಈ ರಸ್ತೆಯ ಎರಡೂ ಬದಿ ಐದು ಅಡಿ ಅಗಲದ ಪಾದಚಾರಿ ಮಾರ್ಗವಿದೆ. ಆದರೆ, ಇಲ್ಲಿರುವ 50ಕ್ಕೂ ಹೆಚ್ಚು ಪೀಠೊಪಕರಣ ಮಳಿಗೆಗಳು ರಸ್ತೆ ಬದಿಯ ಪಾದಚಾರಿ ಮಾರ್ಗವನ್ನು ಸಂಪೂರ್ಣ ಅತಿಕ್ರಮಿಸಿ ರಸ್ತೆಯಲ್ಲಿಯೇ ಪೀಠೊಪಕರಣಗಳನ್ನಿಟ್ಟು ಮಾರಾಟ ಮಾಡುತ್ತಿವೆ.

ಫ‌ುಟ್ಪಾತ್‌ ಬರೀ ನಾಮಕೆವಾಸ್ತೆ ಆಗಿದೆ. ಈ ಮಾರ್ಗದಲ್ಲಿ ದಶಕಗಳಿಂದ ಬೀಡುಬಿಟ್ಟಿರುವ ವ್ಯಾಪಾರಿಗಳು, ಸಂಪೂರ್ಣ ಪಾದಚಾರಿ ಮಾರ್ಗವನ್ನು ತಮ್ಮ ಮಳಿಗೆಯಾಗಿ ಮಾಡಿಕೊಂಡಿದ್ದಾರೆ. ಕೆಲ ವ್ಯಾಪಾರಿಗಳು ಜನಗಳನ್ನು ಆರ್ಕರ್ಷಿಸಲೆಂದು, ಕೆಲವರು ಮಳಿಗೆಯಲ್ಲಿ ಜಾಗದ ಕೊರತೆಯಿಂದ ಮಳಿಗೆ ಮುಂದಿರುವ ಪಾದಚಾರಿ ಮಾರ್ಗದಲ್ಲಿ ತಮ್ಮ ಉತ್ಪನ್ನಗಳಾದ ಮಂಚ, ಹಾಸಿಗೆ, ತೆಲೆದಿಂಬು, ಕುರ್ಚಿ, ಸೋಪಾ, ಡೈನಿಂಗ್‌ ಟೇಬಲ್, ಕಾಫಿ ಟೇಬಲ್, ಕಂಪ್ಯೂಟರ್‌ ಟೇಬಲ್ ಸೇರಿದಂತೆ ಇತ್ಯಾದಿಗಳನ್ನು ಇಟ್ಟು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಜೀವ ಭಯದಲ್ಲಿ ರಸ್ತೆ ಮೇಲೆ ಓಡಾಟ: ಬೆಂಗಳೂರಿನ ವಿವಿಧ ಭಾಗಗಳಿಂದ ಶಿವಾಜಿನಗರಕ್ಕೆ ತೆರಳುವ ಬಹುತೇಕ ಬಿಎಂಟಿಸಿ ಬಸ್‌ಗಳು ಹಾಗೂ ಇತರೆ ವಾಹನಗಳು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಮೂಲಕವೇ ಹಾದುಹೋಗುತ್ತವೆ. ಈ ರಸ್ತೆಯಲ್ಲಿಯೇ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಬಸ್‌ಗಳು ಓಡಾಟ ನಡೆಸುತ್ತವೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ. ಇನ್ನು ರಸ್ತೆಯು ಇಳಿ ಮುಖವಾಗಿದ್ದು, ವಾಹನಗಳ ವೇಗವು ಹೆಚ್ಚಿರುತ್ತದೆ. ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಅತಿಕ್ರಮಿಸಿರುವುದರಿಂದ ಶಿವಾಜಿನಗರ ಕಡೆಹೋಗುವ ಎಲ್ಲಾ ಪಾದಚಾರಿಗಳು ರಸ್ತೆಯನ್ನೇ ಅವಲಂಬಿಸಿದ್ದು, ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಈ ರಸ್ತೆಯ ಪ್ರೇಸ್ಟಿಜ್‌ ಕಟ್ಟಡದ ಬಳಿ ಸಿಗ್ನಲ್ ಇದ್ದು, ಅದರನ್ನು ದಾಟಲು ಬಹುತೇಕ ವಾಹನಗಳು ವೇಗವಾಗಿ ಚಲಿಸುತ್ತವೆ. ಈ ವೇಳೆ ಅಪಘಾತ ಸಾಧ್ಯತೆ ಹೆಚ್ಚಿರುತ್ತದೆ. ರಸ್ತೆ ಮೇಲೆ ಚಲಿಸುವಾಗ ವಾಹನಗಳಿಗೆ ಅಡ್ಡಬಂದರೆ ವಾಹನ ಸವಾರರು ಪುಟ್ಪಾತ್‌ ಮೇಲೆ ಹೋಗುವಂತೆ ರೇಗುತ್ತಾರೆ. ಇಲ್ಲಿನ ಪುಟ್ಬಾತ್‌ ನೋಡಿದರೆ ಪೀಠೊಪಕರಣಗಳೇ ಇವೆ’ ಎಂದು ಪಾದಚಾರಿ ರಮೇಶ್‌ ಅಲವತ್ತುಕೊಂಡರು.

Advertisement

ಸಾರ್ವಜನಿಕರು ಪ್ರಶ್ನೆ ಮಾಡುವಂತಿಲ್ಲ: ಹೀಗೆ ಫ‌ುಟ್ಪಾತ್‌ ಅತಿಕ್ರಮಣವಾಗಿದ್ದರೂ ಸಾರ್ವಜನಿಕರು ಮಳಿಗೆಗಳ ಸಿಬ್ಬಂದಿಗೆ ಅಥವಾ ಮಾಲೀಕರಿಗೆ ಪ್ರಶ್ನಿಸುವಂತಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ, ಮಳಿಗೆ ಸಿಬ್ಬಂದಿ ‘ಚಲೋ ಚಲೋ, ತುಮಾರಾ ಕಾಮ್‌ ಕರೋ’ ಎಂದು ಜೋರುಮಾಡುತ್ತಾರೆ ಎಂದು ಪಾದಚಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಲೆಕ್ಕಕ್ಕುಂಟು ಬಳಕೆಗಿಲ್ಲ:

ಸೆಂಟ್ರಲ್ ಸ್ಟ್ರೀಟ್ ಮಾತ್ರವಲ್ಲ; ಶಿವಾಜಿನಗರದ ಕಮರ್ಶಿಯಲ್ ಸ್ಟ್ರೀಟ್ ರಸ್ತೆ, ಬೌರಿಂಗ್‌ ಆಸ್ಪತ್ರೆ ರಸ್ತೆ, ಮಿನಾಕ್ಷಿ ಕೋವಿಲ್ ಸ್ಟ್ರೀಟ್ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ಬಿಬಿಎಂಪಿಯಿಂದ ಪಾದಾಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ, ಎಲ್ಲಾವೂ ವ್ಯಾಪಾರ ವಹಿವಾಟಿಗೆ ಸೀಮಿತವಾಗಿ ಮಾರಾಟಗಾರು, ಬೀದಿ ವ್ಯಾಪಾರಿಗಳಿಂದ ತುಂಬಿದ್ದು, ಇದ್ದೂ ಇಲ್ಲದಂತಾಗಿವೆ. ಹೀಗಾಗಿ, ರಸ್ತೆಗಳ ಮೇಲೆಯೇ ಸಾರ್ವಜನಿಕರು ಓಡಾಡಬೇಕಿದೆ. ಮೊದಲೇ ರಸ್ತೆಗಳು ಕಿರಿದಾಗಿವೆ. ಈ ಮಧ್ಯೆ ವಾಹನದಟ್ಟಣೆ ಹೆಚ್ಚಿದ್ದು, ಪಾದಾಚಾರಿಗಳೂ ರಸ್ತೆ ಮೇಲೆ ಓಡಾಡುವುದರಿಂದ ಟ್ರಾಫಿಕ್‌ ಸಮಸ್ಯೆಗೆ ಕಾರಣವಾಗುತ್ತಿದೆ. ಆಟೋ, ಗೂಡ್ಸ್‌ ವಾಹನಗಳು, ಕಾರುಗಳು ತೆವಳುತ್ತಾ ಸಂಚರಿಸುತ್ತವೆ. ಆಗಾಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೋಲಿಸರು ಬೀದಿವ್ಯಾಪಾರಿಗಳನ್ನು ತೆರವು ಮಾಡಿದರೂ ಎರಡು-ಮೂರು ದಿನಗಳಲ್ಲಿ ಮತ್ತೆ ಆ ಜಾಗದಲ್ಲಿ ವ್ಯಾಪಾರ ಶುರುವಾಗಿರುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
.ಜಯಪ್ರಕಾಶ್‌ ಬಿರಾದಾರ್‌
Advertisement

Udayavani is now on Telegram. Click here to join our channel and stay updated with the latest news.

Next