ಎರಡೇ ಎರಡು ಡಾಟ್ಸ್ ನಿಂದ ಆರಂಭಗೊಳ್ಳುವ ಇಬ್ಬರ ಚಾಟಿಂಗ್, ಪೂರ್ಣ ವಿರಾಮ ಕಾಣದೆ ನಸುಕಿನ ಜಾವದವರೆಗೂ ಜಾಗರಣೆಯಿಂದಿರಿಸಿದ್ದ ರಾತ್ರಿಗಳೂ ಬಹಳಷ್ಟಿವೆ. ವ್ಯಾಟ್ಸಪ್ ಆಗಲಿ, ಮಾಮೂಲಿ ಟೆಕ್ಸ್ಟ್ ಆಗಲಿ ಎರಡೇ ಎರಡು ಡಾಟ್ಸ್
ಕಂಡರೆ ಸಾಕು, ಅದು ನೀನಲ್ಲದೇ ಬೇರ್ಯಾರೂ ಆಗಿರುತ್ತಿರಲಿಲ್ಲ. ನಿನ್ನೊಂದಿಗೆ ಮಾತಿಗಿಳಿದರೆ ಭೂಮಂಡಲವೇ ಅಲುಗಿದರೂ ಮೊಬೈಲ್ ಕೈ ಬಿಟ್ಟು ಕದಲುತ್ತಲಿರಲಿಲ್ಲ. ಮೆಸೇಜ್ ಮಾಡುತ್ತಾ ಕುಳಿತರೆ, ಪಕ್ಕದಲ್ಲಿ ಆನೆಯೇ ನಡೆದು ಹೋದರೂ ಗಮನ ಹರಿಸದೆ ನಿನ್ನೊಂದಿನ ಸಂಭಾಷಣೆಯೊಳಗಿನ ತಲ್ಲೀನನಾಗುತ್ತಿದ್ದೆ.
ಆ ಸಮಯದಲ್ಲಿ ಜೊತೆಗಿರುವವರು ಮಾತನಾಡಿಸಿದರೂ ಮುಖ ಕೊಟ್ಟು ಮಾತನಾಡದೆ, ಆಗೊಂದು ಹೀಗೊಂದು ಮಾತುಗಳನ್ನಾಡುತ್ತಾ, ಅವರಿಗೆ ನನ್ನನ್ನು ಮಾತನಾಡಿದ್ದೇ ತಪ್ಪಾಯ್ತಲ್ಲಾ ಎಂದು ಬೇಸರ ಪಟ್ಟುಕೊಳ್ಳುವಂತೆ ಮಾಡುತ್ತಿದ್ದೆ. ನಿನ್ನ ಜೊತೆಗಿನ ಚಾಟಿಂಗ್, ಸರಿಯಾದ ಸಮಯಕ್ಕೆ ಊಟವನ್ನು ಮಾಡಲು ಬಿಡುತ್ತಿರಲಿಲ್ಲ. ಹೈಸ್ಪೀಡ್‌ನಲ್ಲಿ ಟೈಪ್ ಮಾಡುತ್ತಾ ಒಬ್ಬನೇ ಏಕಾಂತಕ್ಕೆ ಜಾರಿ ಒಂದು ಮೂಲೆಯಿಡಿದು ನಗುತ್ತಾ, ಒಬ್ಬನೇ ಗುನುಗುತ್ತಾ ಮಾತನಾಡಿಕೊಳ್ಳುವುದನ್ನು ಕಂಡು ನನ್ನವರು ಗಮನಕ್ಕೆ ತಂದಾಗ, ನಕ್ಕು ಏನೂ ಗೊತ್ತಿಲ್ಲದವನಂತೆ ತಲೆ ಕೆರೆದುಕೊಂಡ ಸಂದರ್ಭವೂ ಉಂಟು. ಹೀಗೆ ನಿನ್ನೊಂದಿಗೆ ಚಾಟಿಂಗ್ ಮಾಡುವಾಗ ಒಂದು ರೀತಿಯ ಹುಚ್ಚನಂತೆ ಆಡುತ್ತಿದ್ದೆ. ಪ್ರತಿ ಸಂಭಾಷಣೆಯಲ್ಲೂ ಅವತರಿಸುವ ನಗು, ಅಳು, ಹರಟೆ, ಆಹ್ಲಾದ ಎಲ್ಲವೂ ಭಿನ್ನ ವಿಭಿನ್ನವಾಗಿರುತ್ತಿದ್ದವು.
ನನಗನ್ನಿಸುತ್ತೇ!! ನಿನಗೂ ಹೀಗೆ ಆಗುತ್ತಿರಬೇಕಲ್ಲಾ!? ಎಂದು. ಪ್ರೀತಿಯ ಜೇನ್ಹನಿಯನ್ನು ಸವಿದ ಪ್ರತಿಯೊಬ್ಬ ಪ್ರೇಮಿಗೂ ತನ್ನವಳೊಳಗೆ ಲೀನನಾದಾಗ ಹೀಗೆ ಆಗಿರಬೇಕಲ್ಲಾ!!? ನೋಡುಗರಿಗೆ ಇದೊಂದು ಹುಚ್ಚುತನವೆನಿಸಿದ್ದರೂ ಪ್ರೇಮದಲ್ಲಿ ಇದೊಂದು ಚೆಂದದ ಭಾವವೇ ಸರಿ!..
-ಯೋಗೇಶ್ ಮಲ್ಲೂರು