Advertisement

ಪುಸ್ತಕ ಪ್ರಕಾಶನ ಸಾಹಿತ್ಯಕ ಸೇವೆ ಇದ್ದಂತೆ

12:54 AM Jun 03, 2019 | Lakshmi GovindaRaj |

ಬೆಂಗಳೂರು: ಪುಸ್ತಕ ಪ್ರಕಾಶನ ವ್ಯಾಪಾರದ ಸಾಧನವಷ್ಟೇ ಅಲ್ಲ. ಅದೊಂದು ಸಾಂಸ್ಕೃತಿಕ ಕಾರ್ಯ ಮತ್ತು ಸಾಹಿತ್ಯ ಸೇವೆ ಆಗಿದೆ ಎಂದು ಸಾಹಿತಿ ಪ್ರೊ.ಸಿ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಹೊರತಂದಿರುವ ಪ್ರೊ.ಕೆ.ಎಂ.ಸೀತಾರಾಮಯ್ಯ ಅನುವಾದಿಸಿರುವ ಬ್ರಿಟಿಷ್‌ ಮಹಾಕವಿ ಜಾನ್‌ ಮಿಲ್ಟನ್‌ನ “ಪ್ಯಾರಾಡೈಸ್‌ ಲಾಸ್ಟ್‌ ಮತ್ತು ಪ್ಯಾರಾಡೈಸ್‌ ರಿಗೇಯ್ನಡ್‌’, ಡಿ.ಎಸ್‌.ಶ್ರೀನಿಧಿಯವರ ಲಲಿತ ಪ್ರಬಂಧಗಳ “ತೂಗುಮಂಚದಲ್ಲಿ ಕೂತು’ ಹಾಗೂ ವೈ.ಎನ್‌. ಗುಂಡೂರಾವ್‌ ಸಂಪಾದಿಸಿರುವ ಮಕ್ಕಳಿಗಾಗಿ ಮೊತ್ತಮ್ಮೆ ಹೇಳಿದ “ಕಥಾಸರಿತ್ಸಾಗರದ ಕಥೆಗಳು’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಾನ್‌ ಮಿಲ್ಟನ್‌ ಕುರಿತು ಮಾತನಾಡಿದ ಪ್ರೊ.ರಾಮಚಂದ್ರನ್‌, ಜಾನ್‌ ಮಿಲ್ಟನ್‌ 15ನೇ ಶತಮಾನದ ಬ್ರಿಟಿಷ್‌ ಕವಿ. ಆಗಿನ ಕಾಲದಲ್ಲಿ ರಾಜಮನೆತನದ ವಿರುದ್ಧ ಬಂಡೆದ್ದವರ ಜತೆ ಇದ್ದವನು. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡರೂ ಧೃತಿಗೆಡದೆ 2 ಮಹಾಕಾವ್ಯ ಹಾಗೂ ಎರಡು ನಾಟಕಗಳನ್ನು ರಚಿಸಿ ಶತಮಾನಗಳುದ್ದಕ್ಕೂ ಅನೇಕ ಚರ್ಚೆಗಳಿಗೆ ಆಹ್ವಾನ ಮಾಡಿಕೊಟ್ಟವನು ಎಂದರು.

ಅತ್ಯಂತ ಚರ್ಚೆ, ತಿರಸ್ಕಾರ ಮತ್ತು ಪ್ರಶಂಸೆಗಳಿಗೆ ಒಳಗಾದ ಮಿಲ್ಟನ್‌ನನ್ನು 21ನೇ ಶತಮಾನದಲ್ಲಿ ಹೇಗೆ ಸ್ವೀಕರಿಸಬೇಕು ಅಥವಾ ಹೇಗೆ ಅರ್ಥ ಮಾಡಿಕೊಳ್ಳಬೇಕು ಅನ್ನುವುದೇ ಪ್ರಶ್ನೆ. ಎಲಿಯಟ್‌ ಮತ್ತು ಲಿವೀಸ್‌ ಮುಖಾಂತರ ಮಿಲ್ಟನ್‌ ಕನ್ನಡಕ್ಕೆ ಪರಿಚಯವಾಗಿದ್ದು, ಸಿ.ಡಿ. ನರಸಿಂಹಯ್ಯ ಮತ್ತು ಕುವೆಂಪು ಮೂಲಕ.

ಲ್ಯಾಟಿನ್‌ ಭಾಷೆಯ ಪದ ಜೋಡಣೆಯೊಂದಿಗೆ ಇಂಗ್ಲಿಷ್‌ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದರಿಂದ ಮಿಲ್ಟನ್‌ನ ಮಹಾಕಾವ್ಯ ಅನುವಾದ ಮಾಡುವುದು ಕಷ್ಟ. ಈತನ ಮಹಾಕಾವ್ಯ ಅರ್ಥ ಮಾಡಿಕೊಳ್ಳಬೇಕಾದರೆ ಧರ್ಮ ಮತ್ತು ಸಾಹಿತ್ಯದ ನಡುವಿನ ತಿಕ್ಕಾಟದ ಪಾಶ್ಚಾತ್ಯ ಮಹಾಕಾವ್ಯ ಪರಂಪರೆಯನ್ನು ತಿಳಿದುಕೊಳ್ಳಬೇಕು ಎಂದರು.

Advertisement

ವಿದ್ವಾಂಸ ಡಾ. ಶತಾವಧಾನಿ ಆರ್‌. ಗಣೇಶ್‌ ಮಾತನಾಡಿ, ಸಹೋದರ ಭಾಷೆಗಳಾದ ತೆಲುಗು, ತಮಿಳು ಪ್ರಕಾಶನ ತುಂಬಾ ದುಖ:ಕರವಾಗಿದೆ. ಈ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದ ಪ್ರಕಾಶನ ಉತ್ತಮ ಸ್ಥಿತಿಯಲ್ಲಿದೆ. ಅಂತರ್ಜಾಲ, ಟಿವಿ. ವಾಟ್ಸಪ್‌ ಮತ್ತು ಫೇಸ್‌ಬುಕ್‌ ಬಂದ ಮೇಲೆ ಭಯಾನಕ ಪುಸ್ತಕ ವೈರ ಮತ್ತು ಸಾಹಿತ್ಯ ವೈಮುಖ್ಯ ಬೆಳೆದಿದೆ ಎಂದರು. ಪತ್ರಕರ್ತ ಜೋಗಿ ಮಾತನಾಡಿ, ಪ್ರಬಂಧ ಅತ್ಯಂತ ಸುಖಕರ ಬರವಣಿಗೆ. ಪ್ರಬಂಧ ಸಾಹಿತ್ಯ ಪ್ರಕಾರ ಅಲ್ಲ. ಅದೊಂದು ಜೀವನ ಶೈಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಂ.ಸೀತಾರಾಮಯ್ಯ, ವೈ.ಎನ್‌. ಗುಂಡೂರಾವ್‌, ಡಿ.ಎಸ್‌. ಶ್ರೀನಿಧಿ, ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next