ಉನ್ನತ ಶಿಕ್ಷಣ ಪಡೆಯುವ ಹಂಬಲ ಹೆಚ್ಚಾಗಿತ್ತು. ಮನೆಯಲ್ಲಿ ದೂರದೂರಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲು ಇಷ್ಟ ಪಡಲಿಲ್ಲ. ಹೀಗಾಗಿ, ನನ್ನ ಆಸೆ ಈಡೇರಿಸಿಕೊಳ್ಳಲು ತಂದೆ-ತಾಯಿ ಜೊತೆ ಜಗಳವಾಡಿದೆ. ಕೊನೆಗೆ ಮನೆ, ಊರು ಎಲ್ಲಾ ಬಿಟ್ಟು ಊರಿಗೆ ಬಂದು ಬಿಟ್ಟೆ. ಗುರಿ ಒಂದೇ, ಏನಾದರೂ ಮಾಡಿ ಸ್ನಾತಕೋತ್ತರ ಪದವಿ ಪಡೆಯಲೇ ಬೇಕು ಅನ್ನೋದು. ಎಲ್ಲ ಕನಸು ಇಟ್ಟುಕೊಂಡು, ಕಾಲೇಜಿಗೆ ಸೇರಿದ್ದು ಆಯಿತು. ಪರೀಕ್ಷೆ ಕೂಡ ಎದುರಾಯಿತು. ಆಗ ಒಂದು ಕ್ಷಣ ನನ್ನ ಕನಸಿಗೆ ತಣ್ಣೀರು ಎರಚಿದಂತಾಯಿತು.
ಅದು ಹೀಗೆ; ಸೆಮಿಸ್ಟರ್ ಪರೀಕ್ಷೆ ಶುರುವಾಗಿತ್ತು. ಕಾಲೇಜು ಬಿಟ್ಟರೆ ಏನೂ ಗೊತ್ತಿರದ ಊರು. ಆವತ್ತು ಪರೀಕ್ಷೆಗೆ ಹಾಜರಾಗಲು ತಡವಾಗಿದೆ ಬೇರೆ. ಹೀಗಾಗಿ, ಆಟೋರಿûಾದಲ್ಲಿ ಬರುತ್ತಿದ್ದೆ. ಆಟೋದಲ್ಲಿ ಕುಳಿತಾಗ ಬ್ಯಾಗಿನಿಂದ ಹಾಲ್ ಟಿಕೆಟ್ ತೆಗೆದು ವಿವರಗಳನ್ನು ಓದುತ್ತಿದ್ದೆ. ಕಾಲೇಜು ಸಮೀಪಿಸಿತು. ಇಳಿದೆ. ಆ ಆಟೋ ಹೋಯಿತು. ಕಾಲೇಜಿಗೆ ಹೋಗಿ ಬ್ಯಾಗು ತೆರೆಯುತ್ತೀನಿ ಎಲ್ಲಿದೆ ಆಲ್ ಟಿಕೇಟ್? ಎಲ್ಲಿ ಕಳೆದು ಕೊಂಡೆ ಎಂಬ ನೆನಪು ಬರುತ್ತಿಲ್ಲ. ಪರೀಕ್ಷೆ ಬರೆಯುವ ಒತ್ತಡ ಇನ್ನೊಂದು ಕಡೆ. ಆಗಿದ್ದೇನು ಅಂದರೆ, ವಿವರ ಓದಲು ಹಾಲ್‌ಟಿಕೆಟ್ ತೆಗೆದವಳು
ಅದನ್ನು ಆಟೋದಲ್ಲೇ ಬಿಟ್ಟು ಬಿಟ್ಟಿದ್ದೇನೆ ಅನಿಸಿತು. ಆದರೆ, ಈಗ ಆಟೋವನ್ನು ಹುಡುಕುವುದಾದರೂ ಹೇಗೆ? ಅಲ್ಲಿ ಹುಡುಕಲು ಹೋದರೆ, ಇಲ್ಲಿ ಪರೀಕ್ಷೆ ಬರೆಯುವುದು ಹೇಗೆ? ಎಲ್ಲ ಯೋಚಿಸುತ್ತಾ, ದಾರಿ ಕಾಣದೆ ಕಾಲೇಜಿನ ಮೂಲೆಯಲ್ಲಿ ಅಳುತ್ತಾ ಕುಳಿತಿದ್ದೆ. ಗೇಟಿನ ಮುಂದೆ ಯಾವುದೋ ವಾಹನ ನಿಂತಂತಾಯಿತು. ಎರಡು ಪಾದ ನನ್ನ ಹತ್ತಿರಕ್ಕೆ ಬಂತು. ನೋಡಿದರೆ, ಅದೇ ಆಟೋ ವ್ಯಕ್ತಿ. ದೇವರಂತೆ ಬಂದು ನನ್ನ ಹುಡುಕಿ ಹಾಲ್‌ಟಿಕೆಟ್ ಕೊಟ್ಟ. ಓಡಿ ಹೋಗಿ ಪರೀಕ್ಷೆ ಬರೆಯಲು ಮುಂದಾದೆ. ಆ ಕ್ಷಣ, ನನ್ನ ಜೀವನ ನನಗೆ ಮರಳಿ ಸಿಕ್ಕಂತಾಯಿತು.
ನನ್ನ ಆಲ್‌ಟಿಕೆಟ್ ತಂದು ಕೊಟ್ಟ ಆ ಆಟೋಡ್ರೈವರ್, ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ.
ಸುನಿತಾ ಫ. ಚಿಕ್ಕಮಠ