ಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುತ್ತಿದ್ದು, ಸಿಡಿಲಬ್ಬರದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ರಾಜ್ಯದಲ್ಲಿಯೇ ಅಧಿಕ, 9 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಚವಾರ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ರಾಮಪ್ಪ ಹಣಮಂತ (50) ಎಂಬುವರು ಮೃತಪಟ್ಟಿ ದ್ದಾರೆ. ಬಾಗಲಕೋಟೆ ಜಿಲ್ಲೆ ತಪ್ಪಸಕಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಕನಕಗೌಡ ಸಿದ್ದಪ್ಪ ಮಾದಪ್ಪನವರ (20) ಎಂಬುವರು ಅಸುನೀಗಿದ್ದಾರೆ. ಈ ಮಧ್ಯೆ, ಶುಕ್ರವಾರ ಮುಂಜಾನೆ ವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ.ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವ ವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಾಲ್ವರ ರಕ್ಷಣೆ: ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದ್ದು, ಶಿರೂರ ಗ್ರಾಮದ ಬಳಿಯ ದೊಡ್ಡಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಮಳೆಯಿಂದಾಗಿ ಕಲ್ಲಾಳ ಮತ್ತು ತುಪ್ಪರಿ ಹಳ್ಳಗಳಲ್ಲಿ ನೆರೆ ಬಂದಿತ್ತು. ಇದನ್ನು ಗಮನಿಸದ ಇಬ್ಬರು ಆಟೋ ಚಾಲಕರು ಮಂಗಳವಾರ ಸಂಜೆ ತಮ್ಮ ಆಟೋಗಳನ್ನು ಹಳ್ಳ ದಾಟಿಸಲು ಮುಂದಾದರು. ಮೊದಲ ಆಟೋದಲ್ಲಿ ಮಕು¤ಂ ಎಂಬ ಚಾಲಕ ಇಬ್ಬರು ಪ್ರಯಾಣಿಕರೊಂದಿಗೆ ಹಳ್ಳದಲ್ಲಿ ಮುಂದೆ ಸಾಗುತ್ತಿದ್ದಂತೆ, ಹಿಂದಿದ್ದ ಇನ್ನೊಬ್ಬ ಚಾಲಕ ಹನುಮಂತ ಲಕ್ಕಣ್ಣನವರ ಮಕು¤ಂನನ್ನು ಹಿಂಬಾಲಿಸಿದ. ಮಧ್ಯಕ್ಕೆ ಬರುತ್ತಿದ್ದಂತೆ ನೀರಿನ ರಭಸಕ್ಕೆ ಎರಡೂ ಆಟೋಗಳು ನೀರಿನಲ್ಲಿ ಕೊಚ್ಚಿ ಹೋದವು. ಇವರ ಕೂಗಾಟ ಕೇಳಿದ ಸ್ಥಳೀಯರು ಧಾವಿಸಿ ಬಂದು ಇಬ್ಬರು ಚಾಲಕರಿಗೆ ಈಜಿ ದಡ ಸೇರಲು
ಸಹಾಯ ಮಾಡಿದರು.
ಆಟೋದಲ್ಲಿದ್ದ ಸಂತೋಷ ಚಡಿ ಹಾಗೂ ಆನಂದ ಎಂಬ ಯುವಕರು ಹಳ್ಳದ ಮಧ್ಯೆ ಇದ್ದ ಹೈಟೆನ್ಶನ್ ಕಂಬಗಳ ಮೇಲೆ ಹತ್ತಿ ಜೀವ ಉಳಿಸಿಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸವದತ್ತಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಯುವಕರನ್ನು ರಕ್ಷಿಸಿದರು. ಕೊಚ್ಚಿ ಹೋಗಿದ್ದ ಆಟೋ ಹಳ್ಳದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.