ಉಚ್ಚಿಲ : ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ. 26 ರಿಂದ ಅ.5 ರವರೆಗೆ ಜರಗಲಿರುವ ದಸರಾ ಮಹೋತ್ಸವ ಸಂಭ್ರಮದ ವಿಶೇಷ ವಿದ್ಯುದ್ದೀಪಾಲಂಕಾರಗಳಿಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಶನಿವಾರ ರಾತ್ರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಉಚ್ಚಿಲ ದಸರಾ ಮಹೋತ್ಸವವನ್ನು ನಾಡಹಬ್ಬವಾಗಿ ರಾಜ್ಯದ ಇತೆರೆಡೆಗಳಂತೆಯೇ ಆಚರಿಸಲಾಗುವುದು. ಇದಕ್ಕಾಗಿಯೇ ಶ್ರೀ ದೇವಸ್ಥಾನದ ಒಳಾಂಗಣ ಸಹಿತ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪುವರೆಗಿನ ಸುಮಾರು 17 ಕಿ. ಮೀ ವರೆಗೆ ವಿಶೇಷ ದಸರಾ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ ಎಂದರು.
ಸೆ. 26 ರಿಂದ ಆರಂಭಗೊಳ್ಳುವ ನವರಾತ್ರಿ ಮತ್ತು ದಸರಾ ಮಹೋತ್ಸವವು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳ ಸಹಿತ ದಿನಂಪ್ರತಿ ಚಂಡಿಕಾ ಹವನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. ಅ. 5ರಂದು ಭವ್ಯವಾದ ವಿಸರ್ಜನಾ ಮೆರವಣಿಗೆ, ಶೋಭಾಯಾತ್ರೆಯೊಂದಿಗೆ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಕಾಪು ಬೀಚ್ ಬಳಿ ಅರಬೀ ಸಮುದ್ರದಲ್ಲಿ ವಿಸರ್ಜಿಸಲಾಗುವುದು. ಭಕ್ತಾದಿಗಳು ಶ್ರೀ ಕ್ಷೇತ್ರ ಉಚ್ಚಿಲವನ್ನು ಸಂದರ್ಶಿಸಿ ಪುನೀತರಾಗುವಂತೆ ಡಾ| ಜಿ. ಶಂಕರ್ ಹೇಳಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕ ಶ್ರೀ ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಕ್ಷೇತ್ರಾಧ್ಯಕ್ಷ ವಾಸುದೇವ ಸಾಲ್ಯಾನ್, ಉಚ್ಚಿಲ ಮಹಾಲಕ್ಷ್ಮೀ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ವೈ. ಗಂಗಾಧರ ಸುವರ್ಣ, ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಆರ್ ಎಸ್ಎಸ್ ಕಾರ್ಯಕರ್ತನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಸಿಸಿಟಿವಿ ದೃಶ್ಯ ನೋಡಿ