Advertisement

ಆನಂದ ಮಹಲ್‌ಗೆ ಬೆಳಕಿನ ಸಿಂಗಾರ

03:07 PM Oct 15, 2019 | Suhan S |

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಾಯಕಲ್ಪ ದೊರೆಯುತ್ತಿದ್ದು, ಐತಿಹಾಸಿಕ ಆನಂದ ಮಹಲ್‌ ಸ್ಮಾರಕಕ್ಕೆ ರಾತ್ರಿ ವೇಳೆ ವರ್ಣರಂಜಿತ ಬೆಳಕಿನ ವ್ಯವಸ್ಥೆ ಮಾಡಲು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಹೀಗಾಗಿ ಭವಿಷ್ಯದಲ್ಲಿ ಈ ಸ್ಮಾರಕಕ್ಕೆ ನಿತ್ಯವೂ ವರ್ಣಮಯ ಬೆಳಕಿನ ವ್ಯವಸ್ಥೆ ಮಾಡಲು ಯೋಜಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆಯ ದುರವಸ್ಥೆ ಕುರಿತು ಸಾರ್ವಜನಿಕವಾಗಿ ಬೆಳಕು ಚಲ್ಲಿ, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನ ಸೆಳೆಯುವುದಕ್ಕಾಗಿ ಉದಯವಾಣಿ ಪತ್ರಿಕೆ “ಪ್ರವಾಸೋದ್ಯಮ ಕಥೆ-ವ್ಯಥೆ’ ಹೆಸರಿನಲ್ಲಿ ಸರಣಿ ಲೇಖನ ಅಭಿಯಾನ ಆರಂಭಿಸಿದೆ.

ಇದರ ಭಾಗವಾಗಿ “ಐತಿಹಾಸಿಕ ಸ್ಮಾರಕ ಅತಿಕ್ರಮಿಸಿದ ಸರ್ಕಾರಿ ಕಚೇರಿಗಳು’ ಶೀರ್ಷಿಕೆಯಲ್ಲಿ ಉದಯವಾಣಿ ಪತ್ರಿಕೆ ಆಗಸ್ಟ್‌ 6ರಂದು ವಿಶೇಷ ವರದಿ ಪ್ರಕಟಿಸಿತ್ತು. ಸ್ಮಾರಕದ ದುಸ್ಥಿತಿ ಕುರಿತು ವರದಿ ಬಳಿಕ ಆನಂದ ಮಹಲ್‌ ತನ್ನ ಗತ ವೈಭವದ ಮೆರುಗು ಪಡೆಯಲು ಸಿದ್ಧವಾಗುತ್ತಿದೆ. ಸಾರ್ವಜನಿಕರಿಗೆ ಐತಿಹಾಸಿಕ ಆಸ್ತಿ ಹಾಗೂ ಸ್ಮಾರಕಗಳ ಸಂರಕ್ಷಣೆ ಕುರಿತು ಪಾಠ ಮಾಡಬೇಕಾದ ಸರ್ಕಾರ ತನ್ನ ಇಲಾಖೆಗಳಿಗೆ ಕಚೇರಿ ಕಟ್ಟಿಕೊಡುವ ಹಾಗೂ ಅಧಿಕಾರಿಗಳಿಗೆ ನಿವಾಸದ ವ್ಯವಸ್ಥೆ ಮಾಡಿಕೊಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ವಿಜಯಪುರ ನಗರದಲ್ಲಿರುವ ಹಲವು ಸ್ಮಾರಕಗಳು ಪ್ರವಾಸಿಗರ ವೀಕ್ಷಣಾ ತಾಣಗಳಾಗುವ ಬದಲು ಸರ್ಕಾರಿ ಅತಿಕ್ರಮಣ ತಾಣಗಳಾಗಿ ಹಾಳಾಗುತ್ತಿವೆ ಎಂದು ಪತ್ರಿಕೆ ಬೆಳಕು ಚಲ್ಲಿತ್ತು.

ಅತಿಕ್ರಮಗೊಂಡ ಸ್ಮಾರಕಗಳು: ವಿಭಿನ್ನ ವಾಸ್ತು ಶೈಲಿಯ ಅಪರೂಪದ ಸ್ಮಾರಕಗಳಿಂದಾಗಿ ವಿಶ್ವದಾದ್ಯಂತ ಗಮನ ಸೆಳೆದಿರುವ ವಿಜಯಪುರ ಜಿಲ್ಲೆಯ ಎಲ್ಲ ಸ್ಮಾರಕಗಳು ಪ್ರವಾಸಿ ಆಸಕ್ತ ಹಾಗೂ ಐತಿಹಾಸಿಕ ಅಧ್ಯಯನಕಾರರ ವೀಕ್ಷಣೆಗೆ ಇನ್ನು ಮುಕ್ತವಾಗಲಿವೆ. ಸುಮಾರು 5ರಿಂದ 7 ಶತಮಾನ ಕಂಡಿರುವ ಐತಿಹಾಸಿಕ ಸ್ಮಾರಕಗಳು ಜಿಲ್ಲಾ ಕೇಂದ್ರದಲ್ಲಿವೆ. ಈ ಸ್ಮಾರಕಗಳು ಆದಿಲ್‌ ಶಾಹಿ ಅರಸರು, ನವಾಬರ ಕಾಲದಲ್ಲಿ ನಿರ್ಮಾಣಗೊಂಡು, ದೇಶವನ್ನಾಳಿದ ಬ್ರಿಟಿಷ್‌ ಆಡಳಿತದಲ್ಲಿ ನವೀಕರಣಗೊಂಡು ಇದೀಗ ರಾಜ್ಯ

ಸರ್ಕಾರಿ ಅಧಿಕಾರಿಗಳ ಅತಿಕ್ರಮಣದಲ್ಲಿವೆ. ವಿಲ್ಕಿನ್ಸನ್‌ ವರದಿ: ಆದಿಲ್‌ ಶಾಹಿಗಳ ಬಳಿಕ ಆಡಳಿತ ನಡೆಸಿದ ಬ್ರಿಟಿಷ್‌ರು, ಕಲಾದಗಿ ಜಿಲ್ಲಾ ಕೇಂದ್ರವನ್ನು ಶಾಹಿ ಅರಸರ ರಾಜಧಾನಿ ವಿಜಯಪುರಕ್ಕೆ ಮಹಾನಗರಕ್ಕೆ ಸ್ಥಳಾಂತರಿಸಿದರು. ದಕ್ಷಿಣ ಭಾಗದ ಸುಪರಿಂಟೆಂಡೆಂಟ್‌ ಎಂಜಿನಿಯರ್‌ ಆಗಿದ್ದ ಕರ್ನಲ್‌ ಸೇಂಟ್‌ ಕ್ಲೇರ್‌ ವಿಲ್ಕಿನ್ಸನ್‌ ಎಂಬ ಅಧಿಕಾರಿ ಕಲಾದಗಿ ಪಟ್ಟಣದಿಂದ ಜಿಲ್ಲಾ ಕೇಂದ್ರವನ್ನು ವಿಜಯಪುರ ನಗರಕ್ಕೆ ಸ್ಥಳಾಂತರಿಸಲು 1873ರಲ್ಲಿ ಶಿಫಾರಸು ಮಾಡಿದ್ದ. ಇದನ್ನು ಒಪ್ಪಿದ ಬ್ರಿಟಿಷ್‌ ಸರ್ಕಾರ 1885ರಲ್ಲಿ ಇಲ್ಲಿನ ಬಹುತೇಕ ಐತಿಹಾಸಿಕ ಸ್ಮಾರಕಗಳನ್ನು ದುರಸ್ತಿ ಮಾಡಿಸಿ ತನ್ನ ಕಚೇರಿ, ಅಧಿಕಾರಿಗಳ ನಿವಾಸಗಳಾಗಿ ಮಾಡಿಕೊಂಡಿತ್ತು.

Advertisement

ವಿದೇಶಿ ರಾಯಭಾರಿ: ಇದರ ಭಾಗವಾಗಿ ವಿಜಯಪುರ ಶಾಹಿ ಆರಸರು ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಆನಂದ ಮಹಲ್‌ ಈ ಹಿಂದೆ ಜಿಪಂ ಕಚೇರಿ ಅಗಿತ್ತು. ನಂತರ ಸಂಸದರ ಕಚೇರಿ, ರೇಷ್ಮೆ ಇಲಾಖೆ, ಜಲಾನಯನ ಕಚೇರಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳಾಗಿದ್ದವು. ಇದೀಗ ಕೆಲವು ಕಚೇರಿಗಳಲ್ಲಿ ಕೆಲವು ತೆರುವು ಮಾಡಿವೆ. ಸರ್ಕಾರಿ ಕಚೇರಿಗಳ ಸ್ಥಾಪನೆಯಿಂದಾಗಿ ಐತಿಹಾಸಿಕ ಸ್ಮಾರಕಗಳಂತೆ ಆನಂದ ಮಹಲ್‌ ಐತಿಹಾಸಿಕ ಸ್ಮಾರಕ ಕೂಡ ಸೂಕ್ತ ಬಳಕೆ-ನಿರ್ವಹಣೆ ಇಲ್ಲದೇ ವಿರೂಪಗೊಂಡಿತ್ತು.

ಸ್ವಚ್ಛಗೊಂಡ ಆನಂದ ಮಹಲ್‌: ವರದಿ ಬಳಿಕ ಎಚ್ಚೆತ್ತಿರುವ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಇತ್ತ ಚಿತ್ತ ನೆಟ್ಟಿದ್ದು ಅನಂದ ಮಹಲ್‌ ಸಂಪೂರ್ಣ ಸ್ವತ್ಛಗೊಳಿಸಿದ್ದಾರೆ. ಮೂಲೆಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಕಸ ತೆರುವುಗೊಂಡಿದೆ. ಎಲ್ಲೆಂದರಲ್ಲಿ ಗುಟ್ಕಾ ಉಗಿದ ಕಲೆಯಿಂದ ವಿರೂಪಗೊಂಡಿದ್ದ ಸ್ಮಾರಕದ ಗೋಡೆಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ಮಾರಕರದ ಸುತ್ತಲೂ ಇದ್ದ ಮುಳ್ಳು ಕಂಟಿಗಳನ್ನು ಕಡಿಯಲಾಗಿದೆ. ಸ್ಮಾರಕದ ಆವರಣದಲ್ಲಿನ ಹುಲ್ಲಿನ ಕಸವನ್ನು ಕತ್ತರಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿ ಇಲ್ಲದ ಈ ಸ್ಮಾರಕವನ್ನು ಸುಂದರವಾಗಿ ರೂಪಿಸಿ, ತನ್ನ ಐತಿಹಾಸಿಕ ವೈಭವ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ.

ಆನಂದ ಮಹಲ್‌ ಸ್ಮಾರಕವನ್ನು  ಸ್ವತ್ಛಗೊಳಿಸಿ ಇರಿಸುವ ಜೊತೆಗೆ, ನಿತ್ಯವೂ ಒಂದು ಗಂಟೆ ವಿವಿಧ ಬಣ್ಣಗಳ ವಿದ್ಯುತ್‌ ದೀಪಗಳನ್ನು ಅಳವಡಿಸಿ ರಾತ್ರಿ ವೇಳೆ ಆನಂದ ಮಹಲ್‌ ಅಂದವಾಗಿ ಕಾಣುವಂತೆ ಮಾಡಲು ಯೋಜಿಸಲಾಗಿದೆ. ರಾತ್ರಿಯೂ ಬೆಳಕು: ಯಾವುದೇ ಇಲಾಖೆ ವ್ಯಾಪ್ತಿಗೆ ಇಲ್ಲದೇ ಅನಾಥ ಪ್ರಜ್ಞೆಯಿಂದ ಬಳಲುತ್ತಿರುವ ಆನಂದ ಮಹಲ್‌ ಸ್ಮಾರಕವನ್ನು ವಿಜಯ ಪುರ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ವ್ಯಾಪ್ತಿಗೆ ಪಡೆಯಲು ಸಿದ್ಧತೆ ನಡೆಸಿದೆ. ಸದರಿ ಸಮಿತಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಈ ಸ್ಮಾರಕವನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು, ಐತಿಹಾಸಿಕ ಆನಂದ ಮಹಲ್‌ ಕೂಡ ಅಭಿವೃದ್ಧಿ ಹೊಂದಿ ಸಾರ್ವಜನಿಕರ ಮೆಚ್ಚಿನ ತಾಣವಾಗಿ ರೂಪುಗೊಳ್ಳುವತ್ತ ಹೆಜ್ಜೆ ಹಾಕಿದೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಾಯಕಲ್ಪ ಕಲ್ಪಿಸುವ ಭಾಗವಾಗಿ ಐತಿಹಾಸಿಕ ಆನಂದ ಮಹಲ್‌ ಸ್ಮಾರಕಕ್ಕೆ ರಾತ್ರಿ ವೇಳೆ ವರ್ಣ ರಂಜಿತ ಬೆಳಕಿನ ವ್ಯವಸ್ಥೆ ಮಾಡಲು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಕಳೆದ ಒಂದು ವಾರದ ಹಿಂದೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿವಿಧ ವರ್ಣಗಳ ವಿದ್ಯುತ್‌ ದೀಪಾಲಂಕಾರ ಮಾಡಿ ಅದರ ಆನಂದ ಮಹಲ್‌ನ ರಾತ್ರಿ ವೇಳೆಯ ಸೌಂದರ್ಯವನ್ನು ಪರೀಕ್ಷಿಸಿದ್ದಾರೆ. ಪ್ರತಿ ದಿನ ಆನಂದ ಮಹಲ್‌ ಸ್ಮಾರಕಕ್ಕೆ ವಿದ್ಯುತ್‌ ದೀಪ ಕಲ್ಪಿಸುವ ಕುರಿತು ಚಿಂತನೆ ನಡೆಸಿದೆ.

 

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next