Advertisement

ಹೊಸ ಅನುಭವ ನೀಡಿದ ದೊಂದಿ ಬೆಳಕಿನ ಯಕ್ಷಗಾನ

07:15 PM Jul 11, 2019 | mahesh |

ಪಣಂಬೂರು ವೆಂಕಟ್ರಮಣ ಐತಾಳ ಪ್ರತಿಷ್ಠಾನದಿಂದ ನಡೆಯುತ್ತಿರುವ ಯಕ್ಷಾಂಬುಧಿಯ ಎರಡನೇ ವಾರ್ಷಿಕೋತ್ಸವವನ್ನು ರಾಕೇಶ್‌ ರೈ ಅಡ್ಕ ಅವರ ನಿರ್ದೇಶನದಲ್ಲಿ ಉಡುಪಿಯ ರಾಜಾಂಗಣದಲ್ಲಿ ಜೂ. 30ರಂದು ದೊಂದಿಬೆಳಕಿನಲ್ಲಿ ಎರಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಗಿದ್ದು, ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಎರಡೂ ಪ್ರಸಂಗಗಳು ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಗಿ ತಂಡದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸುವಂತಾಯಿತು.

Advertisement

ಖ್ಯಾತ ಭಾಗವತರಾದ ಪುಂಡಿಕಾ ಗೋಪಾಲಕೃಷ್ಣ ಭಟ್‌ ಮತ್ತು ಧರ್ಮಸ್ಥಳ ಮೇಳದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಲ್ಲಿ ಹಿರಣ್ಯಾಕ್ಷ ವಧೆ ಮತ್ತು ಗಜೇಂದ್ರ ಮೋಕ್ಷ ಎಂಬ ಪ್ರಸಂಗಗಳು ರಾತ್ರಿ 7 ಗಂಟೆಯಿಂದ 12.30ರವರೆಗೆ ಪ್ರದರ್ಶನಗೊಂಡಿತು. ಮಧ್ಯದಲ್ಲಿ ಸಣ್ಣದೊಂದು ಸಭಾ ಕಾರ್ಯಕ್ರಮವಿತ್ತು. ಮದ್ದಳೆಯಲ್ಲಿ ನೆಕ್ರಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಹಾಗೂ ಚಕ್ರತಾಳದಲ್ಲಿ ರಾಜೇಂದ್ರಕೃಷ್ಣ ಅವರು ಸಹಕರಿಸಿದರು.

ಆರಂಭದಲ್ಲಿ ಪ್ರದರ್ಶನಗೊಂಡ ಹಿರಣ್ಯಾಕ್ಷ ವಧೆಯಲ್ಲಿ ಹಿರಣ್ಯಾಕ್ಷ ಪಾತ್ರ ಮಾಡಿದ್ದ ನಾಗರಾಜ ಭಟ್‌ ಮತ್ತು ಅಶ್ವಿ‌ತ್‌ ಸರಳಾಯ, ವರಾಹನಾಗಿದ್ದ ಧನರಾಜ್‌, ಭೂದೇವಿಯಾಗಿ ರವಿನಂದನ್‌ ಭಟ್‌ ಅವರು ಅದ್ಭುತ ಪ್ರದರ್ಶನ ನೀಡಿದರು. ವೃತ್ತಿಪರರಿಗೆ ಸಮದಂಡಿಯಾಗುವ ಪ್ರಯತ್ನ ಇವರ ಅಭಿನಯದಲ್ಲಿ ಎದ್ದು ಕಾಣುತ್ತಿತ್ತು. ಉಳಿದಂತೆ ದಿತಿಯಾಗಿ ಸರಸ್ವತಿ, ಬ್ರಹ್ಮನಾಗಿ ಸೌಮ್ಯಾ, ಅದಿಶೇಷನಾಗಿ ವಾದಿರಾಜ, ದೇವೇಂದ್ರನಾಗಿ ವಿಷ್ಣುಪಾದ, ನಾರದನಾಗಿ ರಘುವೀರ್‌, ವಿವಿಧ ಪಾತ್ರಗಳ ಬಲಗಳಾಗಿ ಮೋಹನ್‌, ಪ್ರಸನ್ನ, ಸತೀಶ್ಚಂದ್ರ, ಶ್ರಾವ್ಯಾ, ಮಂಜುಳಾ, ಲತಾ ಶೆಟ್ಟಿ, ವರುಣ್‌, ಆಶ್ಲೇಷ್‌, ಸುಶಾಂತ್‌, ದೇಶಾಧಿಪಾಲಕರಾಗಿ ಧೀರಜ್‌, ಅವನೀಶ್‌, ಸನ್ವಿತ್‌ ಮೊದಲಾದವರು ಕೂಡ ಸಮರ್ಥವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಲ್ಲಿ ಮೂಡಿಬಂದ ಗಜೇಂದ್ರ ಮೋಕ್ಷದಲ್ಲಿ ಇಂದ್ರದ್ಯುಮ್ನವಾಗಿ ಶರತ್‌, ಗಜೇಂದ್ರನಾಗಿ ಡಾ| ಸುನಿಲ್‌ ಮುಂಡ್ಕೂರು, ಮಕರನಾಗಿ ಸಂದೀಪ್‌, ಯಮನಾಶ್ವನಾಗಿ ಪ್ರಮೋದ್‌ ತಂತ್ರಿ, ವಿಷ್ಣುವಾಗಿ ಶ್ರೀಶ ಅವರ ಪಾತ್ರ ಹೆಚ್ಚು ಗಮನ ಸೆಳೆಯಿತು. ಗಜೇಂದ್ರ ಮತ್ತು ಮಕರ ಪಾತ್ರಗಳು ಸಭಾಂಗಣದ ಮೂಲೆಯಿಂದ ಅಬ್ಬರದ ಪ್ರವೇಶ ಮಾಡಿದ್ದು ವೃತ್ತಿಪರರಿಗೆ ಸಮಾನವಾಗಿತ್ತು. ಅವರ ಕಾಳಗ ಭೇಷ್‌ ಎನಿಸುವಂತಿತ್ತು. ಜತೆಗೆ ಮಕರ ಮತ್ತು ವಿಷ್ಣು ನಡುವಿನ ಹೋರಾಟವೂ ಅದ್ಭುತವಾಗಿತ್ತು. ಮಕರ ಪಾತ್ರಧಾರಿ ಸಂದೀಪ್‌ ರಂಗನಡೆ ಮತ್ತು ಡಾ| ಸುನಿಲ್‌ ಅವರ ಅಬ್ಬರ ಭೇಷ್‌ ಎನಿಸಿತು. ಇದೇ ಪ್ರಸಂಗದಲ್ಲಿ ಹೂಹೂ ಗಂಧರ್ವ ಮತ್ತು ಆತನ ಪತ್ನಿಯರ ನೀರಾಟ, ಸರಸದ ನೃತ್ಯಗಳು ಮೋಹಕವಾಗಿತ್ತು ಮತ್ತು ಚುರುಕುತನದಿಂದ ಕೂಡಿತ್ತು. ಉಳಿದಂತೆ ಅಗಸ್ತ್ಯ ಮುನಿಯಾಗಿ ನಿರುಪಮಾ, ದೇವಳ ಮುನಿಯಾಗಿ ರಘುವೀರ್‌, ಇಂದ್ರದ್ಯುಮ್ನನ ಹೆಂಡತಿಯಾಗಿ ಅರ್ಪಿತಾ, ಬಲಗಳಾಗಿ ಸುಧನ್ವ, ವಿಶ್ವಮೇಧ, ಅಚ್ಯುತ, ಸುಮನ್ಯು, ಶ್ರೇಯಸ್‌, ಪ್ರಣಮ್ಯ ರಾವ್‌ ಮುಂತಾದವರು ಕೂಡ ಮೆಚ್ಚುವಂಥ ಪ್ರಬುದ್ಧತೆ ಪ್ರದರ್ಶಿಸಿದರು. ಗಂಧರ್ವನಾಗಿ ವಿಂಧ್ಯಾ, ಆತನ ಪತ್ನಿಯರಾಗಿ ಪ್ರಣಮ್ಯ ತಂತ್ರಿ, ವನ್ಯಶ್ರೀ, ಅನ್ವಿತಾ ಅಭಿನಯಿಸಿದ್ದರು.

ಯಕ್ಷ ಗುರು ರಾಕೇಶ್‌ ರೈ ಅಡ್ಕ ಅವರಿಂದ ತರಬೇತಿ ಪಡೆಯುತ್ತಿರುವ ಈ ತಂಡವು ದೊಂದಿಬೆಳಕಿನಲ್ಲಿ ನೀಡಿದ್ದ ಪ್ರದರ್ಶನಕ್ಕೆ ಒಂದು ಹೊಸ ವರ್ಗದ ಪ್ರೇಕ್ಷಕರನ್ನು ಸೆಳೆದಿದೆ ಎಂಬುದು ಖಚಿತವಾಗಿದೆ. ಕೆಎಂಸಿಯಲ್ಲಿ ಖ್ಯಾತ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸುನಿಲ್‌ ಅವರ ಯಕ್ಷಗಾನ ಪ್ರೀತಿಗೆ ತನ್ನೊಂದಿಗೆ ಪುತ್ರರಾದ ಸುಮನ್ಯು ಮತ್ತು ಸುಧನ್ವರಿಗೂ ವೇಷ ತೊಡಿಸಿ ರಂಗಸ್ಥಳ ಪ್ರವೇಶಿಸುವಂತೆ ಮಾಡಿರುವುದು ಸಾಕ್ಷಿ. ಇವರು ಈ ಹಿಂದೆಯೂ ಜತೆಯಾಗಿ ಕೆಲವು ಪ್ರದರ್ಶನ ನೀಡಿದ್ದಾರೆ.ಪಣಂಬೂರು ವೆಂಕಟ್ರಮಣ ಐತಾಳ ಪ್ರತಿಷ್ಠಾನದ ಈ ತಂಡವು ಭವಿಷ್ಯದಲ್ಲಿ ಯಕ್ಷಗಾನ ರಂಗಕ್ಕೆ ಹೊಸ ಕೊಡುಗೆ ನೀಡಲಿದೆ ಎಂಬುದನ್ನು ಈ ಕಾರ್ಯಕ್ರಮ ಖಚಿತಪಡಿಸಿದೆ. ಸಂಸ್ಥೆಯ ವತಿಯಿಂದ ಪ್ರತಿ ಬುಧವಾರ ಸಂಜೆ 5.30ರಿಂದ 7ರ ತನಕ ಉಚಿತ ತರಗತಿಯು ಸೋದೆ ಮಠದಲ್ಲಿ ನಡೆಯುತ್ತಿದ್ದು, ಪ್ರಸ್ತುತ ಸುಮಾರು 60ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿದ್ದಾರೆ.

Advertisement

– ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next