Advertisement
ನಾವು ಈ ಬೆಳಕಿಗೆ ಎಷ್ಟೊಂದು ಹೊಂದಿಕೊಂಡುಬಿಟ್ಟಿದ್ದೇವೆ ಎಂದು ಯೋಚಿಸಿದರೇ ಅಚ್ಚರಿ ಎನಿಸುತ್ತದೆ. ಬೆಳಕಿಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ. ಬೆಳಕಿಗೂ ಆಧುನಿಕತೆಗೂ ನೇರಾನೇರ ಸಂಬಂಧ ಕಲ್ಪಿಸಿರುವ ಮನುಷ್ಯ ಕತ್ತಲನ್ನು ಒಂದು ಘೋರ ಅನುಭವ ಎಂದು ಭ್ರಮಿಸಿಬಿಟ್ಟಿದ್ದಾನೆ. ತನ್ನ ಅಕ್ಷಿಪಟಲ, ಮನಸ್ಸು ಎರಡರಲ್ಲೂ ಬೆಳಕಿನ ಚಿತ್ರಗಳನ್ನೇ ತುಂಬಿಕೊಂಡುಬಿಟ್ಟಿದ್ದಾನೆ. ಮನೆಯಲ್ಲಿನ ಪ್ರತಿ ವಸ್ತುವೂ ಜೀವಂತವಾಗಿರಲು, ಚಲನಶೀಲತೆ ಯಿಂದಿರಲು ವಿದ್ಯುತ್ ಬೇಕೇ ಬೇಕು. ಮನೆಯ ಟಿವಿ, ಟೇಪ್ ರೆಕಾರ್ಡರ್, ಡಿವಿಡಿ, ಮೊಬೈಲ್‌ಗಳು, ಎಲ್‌ಇಡಿ ಬಲ್ಬ್ಗಳು, ವೈಭವೋಪೇತ ಶಾಂಡಲಿಯರ್‌ಗಳು ಎಲ್ಲದಕ್ಕೂ ವಿದ್ಯುತ್ ಬೇಕು. ವಿದ್ಯುತ್‌ನಿಂದ ಇವೆಲ್ಲಾ ಝಗಮಗಿಸಬೇಕು. ಆ ಬೆಳಕಿನ ವೈಭೋಗವನ್ನು ಮನುಷ್ಯ ಕಣ್ತುಂಬಿಕೊಳ್ಳಬೇಕು. ಬೆಳಕು ಇಂದು ಕೇವಲ ಬಳಕೆಯ ಮೌಲ್ಯವಾಗಿಯಷ್ಟೇ ಉಳಿದಿಲ್ಲ. ಅದರ ಕೊಡು ಕೊಳ್ಳುವ ವಿನಿಮಯ ಮೌಲ್ಯವೂ ಭಾರೀ ದುಬಾರಿಯೇ! ಅದರ ಸಂಕೇತ ಮೌಲ್ಯವಂತೂ ಅದರಷ್ಟೇ ವೇಗ, ವ್ಯಾಪಕತೆಯಲ್ಲಿ ಬೆಳೆದಿದೆ. ಆಧುನಿಕ ಬೆಳಕು ಅಭಿವೃದ್ಧಿಯ, ವೈಭೋಗದ, ಸುಖದ ಸಂಕೇತ. ಯಾರ ಮನೆ ಮುಂದೆ ಎಷ್ಟು ಬೆಳಕಿದೆ, ಎಂತಹ ವೈವಿಧ್ಯದ ಲೇಸರ್ ಬಣ್ಣದ ಬೆಳಕಿನ ಬಿಂಬಗಳಿವೆ ಎಂಬ ಆಧಾರದ ಮೇಲೇ ಅಂತಸ್ತು, ಪ್ರತಿಷ್ಠೆ ನಿರ್ಧಾರವಾಗುತ್ತದೆ. ಕತ್ತಲೆ ವಿನಾಶದ, ಭೀತಿಯ, ಅರಾಜಕತೆಯ ಸಂಕೇತ ಎಂದು ನಿರೂಪಿಸಲ್ಪಟ್ಟಿದೆ.
Related Articles
Advertisement
ಬೆಳಕು ಅನಂತ, ವಿಸ್ತಾರ, ಎಂದೆಲ್ಲಾ ಬಣ್ಣಿಸುತ್ತಾರೆ..ಆದರೆ ಬೆಳಕನ್ನು ಅನುಭವಿಸಲು ನಮ್ಮ ದೃಷ್ಟಿಯ ಮಿತಿಯಿದೆ.. ಎಷ್ಟೇ ಪ್ರಖರ ದೀಪವಿದ್ದರೂ ಒಂದು ನಿರ್ದಿಷ್ಟ ದೂರದವರೆಗಷ್ಟೇ ನಾವು ಬೆಳಕನ್ನು ಆನಂದಿಸಲು, ಅನುಭವಿಸಲು ಸಾಧ್ಯ. ಅನಂತ ದೂರ, ಅನಂತ ಪ್ರಖರತೆ ಎರಡನ್ನೂ ಸಹಿಸುವ ಶಕ್ತಿ ನಮ್ಮ ದೃಷ್ಟಿಗಿಲ್ಲ. ಪ್ರಜ್ವಲಿಸುವ ದೀಪಗಳ ಮಧ್ಯೆ ಮನುಷ್ಯ ಕಣ್ಮುಚ್ಚಿ ಹಾಯಾಗಿ ನಿದ್ರಿಸಲಾರ! ರೆಪ್ಪೆ ತೂರಿ ಬರುವ ಕಿರಣಗಳ ಮಧ್ಯೆ ತನ್ನ ಏಕಾಂತದ ಕತ್ತಲನ್ನು ರೂಪಿಸಿಕೊಳ್ಳಲಾರ. ಹಾಗಾಗಿ ಬೆಳಕು ಸೀಮಿತ ಶಕ್ತಿಯುಳ್ಳದ್ದು. ಆದರೆ ಕತ್ತಲೆ ಹಾಗಲ್ಲ.. ಅದು ಅನಂತ..ನಾವು ನೋಡದಿರುವಷ್ಟು ದೂರವೂ ಅದು ವ್ಯಾಪಿಸಿರುತ್ತದೆ. ನಾವು ನೋಡದಿದ್ದರೂ ಅದು ಅನಂತ ಎಂದು ನಮಗೆ ಅನಿಸುತ್ತದೆ. ಕತ್ತಲೆ ಗೊತ್ತಾದಾಗ ಬೆಳಕು ಬತ್ತಲಾಗುತ್ತದೆ. ಬೆಳಕು ಗೊತ್ತಾದಾಗ ಕತ್ತಲು ಬೆತ್ತಲಾಗುತ್ತದೆ. ಕತ್ತಲೆ ಇದೆ ಎಂಬ ಕಾರಣಕ್ಕೇ ಬೆಳಕಿಗೆಅಷ್ಟು ಮಹತ್ವ. ಕತ್ತಲೆ ಎಂದರೆ ಭಯ, ಅಜಾnನ, ತಮಸ್ಸು, ಅದು ರಾಕ್ಷಸರ ದುಷ್ಟ ಜಂತುಗಳ ಲೋಕ, ದುಷ್ಟ ಶಕ್ತಿಗಳ ಲೋಕ ಎಂದೆಲ್ಲಾ ಆರೋಪಿಸಿ ಕತ್ತಲೆಯ ಗಾಢತೆಯನ್ನು, ಅದರ ರುದ್ರಸೌಂದರ್ಯವನ್ನು ಸವಿಯುವ ಮನಸ್ಥಿತಿಯನ್ನೇ ಹಾಳುಗೆಡವಲಾಗಿದೆ. ಪ್ರಕೃತಿಯೇ ಜೀವಿಗಳಿಗೆ 12 ಗಂಟೆಗಳ ಕಾಲ ಮಾತ್ರ ಬೆಳಕಿಗೆ ತೆರೆದುಕೊಳ್ಳುವ ಅವಕಾಶ ನೀಡಿ ಮಿಕ್ಕ 12 ಗಂಟೆಯನ್ನು ಕತ್ತಲು ಆವರಿಸಿಕೊಳ್ಳುವಂತೆ ಮಾಡಿತ್ತು. ಪ್ರಕೃತಿಯ, ಸೃಷ್ಟಿಯ ವೈಚಿತ್ರಗಳೆಲ್ಲವನ್ನೂ ರಹಸ್ಯವಾಗಿ ಮುಚ್ಚಿಟ್ಟಿತ್ತು. ಗಿಡ ಚಿಗುರೊಡೆಯುವುದು, ಮೊಗ್ಗು ಹೂವಾಗುವುದು, ಹೂವು ಕಾಯಿ-ಹಣ್ಣಾಗುವುದು, ಹಕ್ಕಿಪಕ್ಷಿಗಳು ಮೊಟ್ಟೆಯಿಡುವುದು ಹೀಗೆ ಸೃಷ್ಟಿಯ ಎಷ್ಟೋ ರಹಸ್ಯ ಕ್ರಿಯೆಗಳು ಕತ್ತಲಲ್ಲೇ ನಡೆಯುವುದು. ಹಾಗಾಗಿ ಕತ್ತಲು ಕೆಟ್ಟದ್ದಾಗಲು ಹೇಗೆ ಸಾಧ್ಯ? ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧನೆಯೊಂದು ಕತ್ತಲಲ್ಲಿನ ಮಿಲನವೇ ಅತಿ ಸಂತೃಪ್ತಿ ತರುವಂಥದ್ದು ಮತ್ತು ಸೃಷ್ಟಿ ಕ್ರಿಯೆಗೆ ಪೂರಕವಾದ್ದು ಎಂದು ಹೇಳಿದೆ. ಆದರೆ ಮನುಷ್ಯ ಎಲ್ಲಾ ಕ್ರಿಯೆಗಳೂ ಬೆಳಕಿನಲ್ಲೇ ನಡೆಯಬೇಕೆಂದು ಹಂಬಲಿಸುತ್ತಾನೆ. ಕತ್ತಲ ಈ ಎಲ್ಲಾ ಸೃಷ್ಟಿಯ ಪ್ರಕ್ರಿಯೆಗಳನ್ನು ಸುಂದರವಾಗಿ ಬೆಳಕು ಕೇವಲ ಪ್ರದರ್ಶಿಸುತ್ತದೆ. ಬೆಳಕಿನ ಹಂಗಿನ ಮನುಷ್ಯ ಕಣ್ಮುಚ್ಚಿದರೆ ಎಷ್ಟೇ ಪ್ರಖರ ಬೆಳಕಿದ್ದರೂ ಕತ್ತಲೆಯೇ! ಆದರೆ ಕತ್ತಲೆಯಲ್ಲೇ ಕುಳಿತ ಮನುಷ್ಯ ಕಣ್ಮುಚ್ಚಿ ಬೆಳಕಿನ ಚಿತ್ರಗಳನ್ನು ತನ್ನ ಮನಸೋ ಇಚ್ಚೆ ಕಾಣಬಹುದು.. ದಿಗ್ ದಿಗಂತಗಳಾಚೆ ಅವನು ಮನಸ್ಸಿನ ಬೆಳಕು ಹರಿದಾಡುತ್ತದೆ. ಸೃಷ್ಟಿಯ ಸುಂದರ ಚಿತ್ರಗಳನ್ನು ಅನಾವರಣ ಗೊಳಿಸುತ್ತದೆ. ಅದೇ ಧ್ಯಾನ, ಅದೇ ಯೋಗ! ಆದರೆ ನಾವು ಕತ್ತಲ ಲೋಕದ ಎಲ್ಲಾ ವಿಸ್ಮಯಗಳಿಂದ ವಂಚಿತರಾಗಿದ್ದೇವೆ. ನಮ್ಮದೇ ಆಧುನಿಕತೆಯ ಬೆಳಕಿನಲ್ಲಿ ಕತ್ತಲೆಯನ್ನು ದೂರ ಮಾಡುವ ಧಾವಂತದಲ್ಲಿ ಕತ್ತಲೆಯು ಅನಾವರಣಗೊಳಿಸುವ ಪ್ರಕೃತಿಯ ಎಷ್ಟೋ ಅಚ್ಚರಿಗಳು, ಸಹಜ ಬೆಳಕುಗಳು ನಮಗೆ ಗೊತ್ತೇ ಇಲ್ಲ. ಶುಭ್ರ ಆಕಾಶದ ತುಂಬಾ ಫಳಗುಟ್ಟುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗುವ ಕ್ಷೀರಪಥ! ಇವೆಲ್ಲಾ ಮಕ್ಕಳಿಗಿರಲಿ ಎಷ್ಟೋ ಜನ ದೊಡ್ಡವರಿಗೂ ಸೋಜಿಗ ಎನಿಸುವುದಿಲ್ಲ. ವಿಜ್ಞಾನ ಪುಸ್ತಕದಲ್ಲಿ ಓದುವ ಧೃವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಸಹ ನಮ್ಮ ಮಕ್ಕಳು ಗುರುತಿಸಲಾರರು. ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತ ಕತೆಗಳನ್ನು ನಮ್ಮ ಮಕ್ಕಳು ಕೇಳಿರಲಿಕ್ಕೂ ಸಾಧ್ಯವಿಲ್ಲ. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಕ್ಕಿಲ್ಲ. ಆಧುನಿಕತೆಯ ಪ್ರತೀಕವಾದ ಪ್ರಜ್ವಲಿಸುವ ಮಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಕ್ಕಿಲ್ಲ. ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಸಿಂಹ, ವೃಷಿcಕ ಮೊದಲಾದ ರಾಶಿಗಳು ಕೇವಲ ಟಿವಿ ಜ್ಯೋತಿಷಿಗಳ ಬಾಯಲ್ಲಿ ಕೇಳಿ, ಅವಕ್ಕೆ ಹೆದರಿ ತಾಯತ ಕಟ್ಟಿಸಿಕೊಂಡು ಶಾಂತಿ ಮಾಡಿಸಿಕೊಂಡವರೇ ಹೊರತು ಇವು ರಾತ್ರಿಯ ಆಗಸದಲ್ಲಿ ಎಷ್ಟು ಆಕರ್ಷಕವಾಗಿ, ಅನ್ವರ್ಥವಾಗಿ ಕಾಣುತ್ತವೆ ಎಂದು ಹಿರಿಯರೇ ತಮ್ಮ ಜೀವಿತಾವಧಿಯಲ್ಲೊಮ್ಮೆ ನೋಡಿರಲಾರರು. ತಮ್ಮ ಜನ್ಮ ನಕ್ಷತ್ರ, ರಾಶಿಯನ್ನೂ ಆಕಾಶದಲ್ಲಿ ಗುರುತಿಸಬಹುದು ಎಂಬ ಜ್ಞಾನವನ್ನೂ ಯಾವ ಬೆಳಕೂ ನೀಡಿಲ್ಲದಿರುವುದೇ ಒಂದು ದುರಂತ. ಈ
ಆಧುನಿಕತೆಯ ಬೆಳಕಿನ ಪ್ರಖರತೆ ಪ್ರಭಾವಳಿಯೇ ಹಾಗೇ!ಅದು ಸುತ್ತೆಲ್ಲಾ ಬೆಳಕು ಹರಡಿ ಮನಸ್ಸಿನ, ಅರಿವಿನ ಕತ್ತಲೆಯನ್ನು ಹಾಗೇ ಉಳಿಸಿಬಿಡುತ್ತದೆ. ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ: “ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕನಿಕ್ಕಿದವರಾರೋ? ಬೆಳಗೂ ಅದೇ, ಕತ್ತಲೆಯೂ ಅದೇ, ಇದೇನು ಚೋದ್ಯವೋ? ಒಂದಕ್ಕೊಂದಂಜದು! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದರು ಕಾಣ-ಗುಹೇಶ್ವರಾ’. ಬೆಳಕು ಕತ್ತಲೆಗೆ ಅಂಜುವುದಿಲ್ಲ, ಕತ್ತಲು ಬೆಳಕಿಗೆ ಅಂಜುವುದಿಲ್ಲ ಎಂಬುದು ಕಲ್ಪನೆಯೇ ಆದರೂ ನಿಜಕ್ಕೂ ಸತ್ಯ ಎನಿಸುತ್ತದೆ. ಇಂತಹ ದ್ವಂದ್ವಗಳೇ ಬದುಕಲ್ಲಿ ಕುತೂಹಲನ್ನು ಉಳಿಸಿವೆ. ಆದರೆ ನಾವು ಇಂತಹ ದ್ವಂದ್ವಗಳಿಂದ ಆಚೆ ಹೋಗಿ ಬೆಳಕಿಗೇ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಕತ್ತಲೊಳಗಿನ ಬೆಳಕನ್ನೂ ಕುತೂಹಲದಿಂದ ನೋಡುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. *ತುರುವೇಕೆರೆ ಪ್ರಸಾದ್