Advertisement

ದೀಪ ಹಚ್ಚಿ…ಪ್ರೀತಿ ಹಂಚಿ…ಕತ್ತಲೆಯ ಬಾಳಿಗೆ ಬೆಳಕು ನೀಡುವ ದೀಪಾವಳಿ

04:58 PM Oct 26, 2022 | Team Udayavani |

ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು’ ಎನ್ನುವ ಹಾಡಿನ ಸಾಲಿನಂತೆ ದೀಪಾವಳಿ ದೀಪದಿಂದ ದೀಪ ಹಚ್ಚಿ ಎಲ್ಲರಿಗೂ ಪ್ರೀತಿಯನ್ನು ಹಂಚುವ ಹಬ್ಬ. ದೀಪಾವಳಿ ದೀಪಗಳ ಆನಂದಾವಳಿ.

Advertisement

ಜಾತಿ-ಭೇದವೆನ್ನದೇ, ಬಡವ ಶ್ರೀಮಂತರೆನ್ನದೇ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಿ, ಹಣತೆಗಳನ್ನು ಸಾಲಾಗಿ ಹಚ್ಚಿ, ಮಿರಿಮಿರಿ ಮಿಂಚುವ ಲೈಟ್‌ಗಳಿಂದ, ಆಕರ್ಷಕ ಆಕಾಶಬುಟ್ಟಿಗಳಿಂದ, ಬಗೆಬಗೆಯ ಹೂವುಗಳಿಂದ ಮನೆಯನ್ನು ಮತ್ತು ಅಂಗಡಿಗಳನ್ನು ಶೃಂಗರಿಸಿ, ಲಕ್ಷ್ಮೀ ಪೂಜೆಯನ್ನು ಮಾಡಿ ವ್ಯಾಪಾರದಲ್ಲಿ ಲಾಭವನ್ನು ಕರುಣಿಸು ತಾಯಿ ಎಂದು ಬೇಡಿಕೊಂಡು ವಿಜೃಂಭಣೆಯಿಂದ ಆಚರಿಸುವ ಸಂತಸದ ಹಬ್ಬ ದೀಪಾವಳಿ.

ಪ್ರದೇಶದಿಂದ ಪ್ರದೇಶಕ್ಕೆ ಹಬ್ಬಗಳ ವೈಶಿಷ್ಟತೆ ಭಿನ್ನವಾಗಿದ್ದು, ಹಳ್ಳಿಗಳಲ್ಲಿ ಬಡವರ ಹಬ್ಬವಾದ ದೀಪಾವಳಿಯನ್ನು ವಿಶೇಷ ವಾಗಿ ಆಚರಿಸುತ್ತಾರೆ. ಮೊದಲ ದಿನ ಮನೆಯನ್ನು ಸಾರಿಸಿ ಎಲ್ಲರೂ ತಲೆ ಸ್ನಾನ ಮಾಡಿಕೊಂಡು ಮಡಿಯಿಂದ ಅಡುಗೆ ಮಾಡಿದರೆ, ಮಾರನೇ ದಿನ ನೀರು ತುಂಬುವ ಹಬ್ಬಮಾಡಿ ಎಲ್ಲ ಕೊಡಗಳನ್ನು ತುಂಬಿ ಅವುಗಳಿಗೆ 5 ಸುತ್ತು ನೂಲು ಸುತ್ತಿ ಪೂಜೆ ಮಾಡಲಾಗುತ್ತದೆ.

ಚತುದರ್ಶಿಯಂದು ಎತ್ತು ಅಥವಾ ಆಕಳು ಸೆಗಣಿಯಿಂದ ಪಾಂಡವರನ್ನು ಹಾಕಿ, ಗವಳಗಿತ್ತಿ ಮಾಡಿ ಅದರಲ್ಲಿ ಅನ್ನ ಮೊಸರು ಹಾಕಿ, ಅವರೆ ಹೂವನ್ನು ಇಟ್ಟು ಸೂರ್ಯ ಮುಳುಗುವ ಹೊತ್ತಿಗೆ ಅವುಗಳನ್ನು ಮನೆಯ ಮೇಲೆ ಇಡುವುದು. ಅಮಾವಾಸ್ಯೆಯಂದು ಸಜ್ಜಕದ ಅಥವಾ ಹೂರಣದ ಹೋಳಿಗೆ ಮಾಡಿ ದೀಪಗಳನ್ನು ಬೆಳಗಿಸಿ ಸಮೃದ್ಧಿ, ಸುಖಕ್ಕಾಗಿ ಲಕ್ಷ್ಮೀ ಪೂಜೆ ಮಾಡಿ ಪ್ರಾರ್ಥಿಸಲಾಗುತ್ತದೆ. ಪಾಡ್ಯದ ದಿನ ಮನೆ ಯಜಮಾನನ ಕೈಯಲ್ಲಿ ಒಂದು ಬುಟ್ಟಿಯಲ್ಲಿ ಸೀಗಿ ಹುಣ್ಣಿಮೆಯಂದು ತಂದಿಟ್ಟ ಸೀಗವ್ವನನ್ನು ಮತ್ತು ಮಣ್ಣಿ ಚಿಟಕಿ/ ಕುಳ್ಳಿಯ ಪಣತಿಯಲ್ಲಿ ದೀಪವನ್ನು, ನೈವೇದ್ಯೆಗೆ ಸ್ವಾಂಗಿ, ಅವರೆ ಹೂ ಇಟ್ಟು ಯಜಮಾನನಿಗೆ ಆರತಿ ಮಾಡಿ ಹೊಲಕ್ಕೆ ಪೂಜೆಗೆಂದು ಕಳುಹಿಸುತ್ತಾರೆ. ಮನೆಯ ಯಜಮಾನ ತಮ್ಮ ಹೊಲಕ್ಕೆ ಹೋಗಿ ಬನ್ನಿ ಗಿಡದ ಕೆಳಗೆ ಮಣ್ಣನ್ನು ಅಗೆದು ಅದರಲ್ಲಿ ಸೀಗವ್ವನನ್ನು ಇಟ್ಟು ಅದಕ್ಕೆ ಪೂಜೆ ಮಾಡಿ ಬೆಳೆ ಸಮೃದ್ಧಿಗಾಗಿ ಬೇಡಿಕೊಳ್ಳುತ್ತಾರೆ.

ಪುರಾಣಗಳ ಪ್ರಕಾರ ದೀಪಾವಳಿಯು ವಿಶೇಷ ದಿನವಾಗಿದ್ದು ಆಧ್ಯಾತ್ಮಿಕ, ಪುರಾಣ ಐತಿಹ್ಯಗಳನ್ನು ಹೊಂದಿದೆ. ದೀಪಾವಳಿಗೆ ರಾಮಾಯಣದ ನಂಟೂ ಇದೆ. ತ್ರೇತಾಯುಗದಲ್ಲಿ ಶ್ರೀರಾಮನು ವಿಜಯ ದಶಮಿಯಂದು ರಾವಣನನ್ನು ಸಂಹಾರ ಮಾಡಿ 14 ವರ್ಷಗಳ ವನವಾಸ ಮುಗಿಸಿಅಯೋಧ್ಯೆಗೆ ಮರಳಿದಾಗ ರಾಮನನ್ನು ಸ್ವಾಗತಿಸಲು ಅಯೋಧ್ಯೆಯ ಜನರು ಊರನ್ನು ರಂಗೋಲಿಯಿಂದ ಶೃಂಗರಿಸಿ, ಸಾಲು ದೀಪಗಳನ್ನು ಹಚ್ಚಿ, ರಾವಣನನ್ನು ಸಂಹರಿಸಿ ಬಂದ ರಾಮನನ್ನು ಬರಮಾಡಿಕೊಂಡ ಈ ದಿನವನ್ನು ದೀಪಾವಳಿಯಾಗಿ ಆಚರಿಸಿದರು ಎಂಬ ಉಲ್ಲೇಖವಿದೆ.

Advertisement

ಅಮಾವಾಸ್ಯೆಯಂದು ಶ್ರೀ ಮಹಾಲಕ್ಷ್ಮೀ ಪೂಜೆ, ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ಮಾಡಿ, ಮಹಾವಿಷ್ಣುವಿನ ಮಡದಿ ಮಹಾಲಕ್ಷ್ಮೀಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ವ್ಯಾಪಾರಿಗಳಿಗೆ ಹೊಸವರ್ಷ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮವಾಸ್ಯೆಯನ್ನು ದೀಪಗಳನ್ನು ಬೆಳಗಿಸಿ ಪಟಾಕಿಗಳಿಂದ ಲಕ್ಷ್ಮೀ ಪೂಜೆಯನ್ನು ಅದ್ಧೂರಿಯಾಗಿ ಮಾಡುತ್ತಾರೆ. ಆದರೆ ಈಬಾರಿ ಗ್ರಹಣ
ಇದ್ದಿದ್ದರಿಂದ ನರಕ ಚತುದರ್ಶಿಯದಿನ ರಾತ್ರಿ ಹಾಗೂ ಪಾಡ್ಯದ ದಿನ ಅನೇಕರು ಲಕ್ಷ್ಮೀ ಪೂಜೆ ಆಚರಿಸಿದ್ದಾರೆ.

ಬಲಿಪಾಡ್ಯಮಿ ಸಂಭ್ರಮ ಬಲಿಪಾಡ್ಯಮಿಯಂದು ಬಲಿಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದುಕೊಂಡು, ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಲ್ಲಿ ಆಕಾಶ, ಭೂಮಿಗಳನ್ನು ಅಳೆದುಕೊಂಡು ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿಯಂದು ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋವು ಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಹೀಗೆ ದೀಪಾವಳಿಯು 5 ದಿನಗಳ ವಿಶೇಷ ಆಚರಣೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next